Advertisement

ಮೈಸೂರಲ್ಲಿ ಸ್ಮಾರ್ಟ್‌ ಮೀಟರ್‌ ಅಳವಡಿಕೆ

09:45 PM Aug 23, 2019 | Lakshmi GovindaRaj |

ಮೈಸೂರು: ಸ್ಮಾರ್ಟ್‌ ಪವರ್‌ ಗ್ರಿಡ್‌ ಯೋಜನೆಯಡಿ ಮೈಸೂರು ನಗರದಲ್ಲಿ 5 ಲಕ್ಷ ಸ್ಮಾರ್ಟ್‌ ಮೀಟರ್‌ ಅಳವಡಿಸುವ ಗುರಿ ಹೊಂದಲಾಗಿದೆ ಎಂದು ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್‌.ಎನ್‌. ಗೋಪಾಲ ಕೃಷ್ಣ ಹೇಳಿದರು.

Advertisement

ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ, ಕರ್ನಾಟಕ ವಿದ್ಯುತ್‌ತ್ಛಕ್ತಿ ಮಂಡಳಿ ಎಂಜಿನಿಯರುಗಳ ಸಂಘದ ಸಹಯೋಗದಲ್ಲಿ ನಂಜನಗೂಡು ರಸ್ತೆಯಲ್ಲಿರುವ ಕಡಕೊಳದ ಕೆಇಬಿ ಎಂಜಿನಿಯರುಗಳ ಸಂಘದ ಭವನದಲ್ಲಿ ಆಯೋಜಿಸಿದ್ದ ಸ್ಮಾರ್ಟ್‌ ಗ್ರಿಡ್‌ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಮಗ್ರ ವರದಿ ಸಿದ್ಧ: ವಿದ್ಯುತ್‌ ವಿತರಣೆ ಮತ್ತು ಬಳಕೆಯಲ್ಲಿ ತಂತ್ರಜ್ಞಾನವನ್ನು ಇಂಧನ ಕ್ಷೇತ್ರದಲ್ಲಿ ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಕೇಂದ್ರ ಸರ್ಕಾರ ಸ್ಮಾರ್ಟ್‌ ಗ್ರಿಡ್‌ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ. ಇದರ ಭಾಗವಾಗಿ ಇಡೀ ರಾಷ್ಟ್ರದಲ್ಲೇ ಮೊದಲ ಬಾರಿಗೆ ಮೈಸೂರಿನಲ್ಲಿ ವಿದ್ಯುತ್‌ ಬಳಕೆಯನ್ನು ಮಾಪನ ಮಾಡುವ ಸ್ಮಾರ್ಟ್‌ ಮೀಟರ್‌ಗಳನ್ನು ಅಳವಡಿಸಲಾಗುತ್ತಿದೆ. ಈಗಾಗಲೇ 25 ಸಾವಿರ ಸ್ಮಾರ್ಟ್‌ ಮೀಟರ್‌ಗಳನ್ನು ಅಳವಡಿಸಲಾಗಿದ್ದು, ಒಟ್ಟು 5 ಲಕ್ಷ ಮೀಟರ್‌ಗಳನ್ನು ಅಳವಡಿಸುವ ಗುರಿ ಹೊಂದಲಾಗಿದೆ. 3 ಲಕ್ಷ ಸ್ಮಾರ್ಟ್‌ ಮೀಟರ್‌ ಅಳವಡಿಕೆ ಸಮಗ್ರ ವರದಿ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.

ಅಂಡರ್‌ಗ್ರೌಂಡ್‌ ಕೇಬಲಿಂಗ್‌: ಮೈಸೂರು ನಗರದಲ್ಲಿ ಈಗಾಗಲೇ ಅಂಡರ್‌ಗ್ರೌಂಡ್‌ ವಿದ್ಯುತ್‌ ಕೇಬಲಿಂಗ್‌ ನಡೆಯುತ್ತಿದೆ. ಇದರಿಂದ ವಿದ್ಯುತ್‌ ಸೋರಿಕೆ ತಡೆಗಟ್ಟುವುದರ ಜೊತೆಗೆ, ಒಮ್ಮೆ ಬಂಡವಾಳ ಹೂಡಿಕೆ ಮಾಡಿದರೆ, ಮತ್ತೆ ಬಂಡವಾಳ ಹೂಡಿಕೆ ಮಾಡುವ ಅಗತ್ಯವಿಲ್ಲ. ಸುರಕ್ಷತೆ ದೃಷ್ಟಿಯಿಂದ ಒಳ್ಳೆಯ ಯೋಜನೆ ಇದಾಗಿದೆ ಎಂದು ತಿಳಿಸಿದರು.

ಸಹಕಾರ: ಕರ್ನಾಟಕ ವಿದ್ಯುತ್‌ತ್ಛಕ್ತಿ ಮಂಡಳಿ ಎಂಜಿನಿಯರುಗಳ ಸಂಘದ ಅಧ್ಯಕ್ಷ ಟಿ.ಎಂ. ಶಿವಪ್ರಕಾಶ್‌ ಮಾತನಾಡಿ, ಸ್ಮಾರ್ಟ್‌ ಸಿಟಿ ಪ್ರಾಜೆಕ್ಟ್ ಹಾಗೂ ಸ್ಮಾರ್ಟ್‌ ಪವರ್‌ ಗ್ರಿಡ್‌ ಈ ಎರಡೂ ಯೋಜನೆಗಳು ಸಾರ್ವಜನಿಕರು ಮತ್ತು ನಗರಾಭಿವೃದ್ಧಿಗೆ ಅನುಕೂಲವಾಗಲಿದೆ. ಎಂಜಿನಿಯರ್‌ಗಳ ಸಂಘವು ಸರ್ಕಾರ ಹಾಗೂ ಇಲಾಖೆಯ ಎಲ್ಲಾ ಕಾರ್ಯಕ್ರಮಗಳಿಗೂ ಸಹಕಾರ ನೀಡುತ್ತಾ ಬಂದಿದೆ ಎಂದರು.

Advertisement

ಕಾರ್ಯಕ್ರಮದಲ್ಲಿ ಇಂಧನ ಸಚಿವಾಲಯದ ಎನ್‌ಎಸ್‌ಜಿಎಂ ನಿರ್ದೇಶಕ ಅರುರ್‌ ಮಿಶ್ರಾ, ಕೆಇಬಿಇಎ ಪ್ರಧಾನ ವ್ಯವಸ್ಥಾಪಕ ಕೆ. ತಿಪ್ಪೆಸ್ವಾಮಿ, ಸೆಸ್ಕ್ ತಾಂತ್ರಿಕ ವಿಭಾಗದ ನಿರ್ದೇಶಕ ಆಫ‌¤ಬ್‌ ಅಹಮದ್‌, ಎನ್‌ಎಸ್‌ಜಿಎಂ ಪ್ರಧಾನ ವ್ಯವಸ್ಥಾಪಕಿ ಕುಮುದ್‌ ವಧ್ವಾ, ಶಿವಕುಮಾರ್‌, ಶಿವಣ್ಣ ಸೇರಿದಂತೆ ಮತ್ತಿತರರು ಉಪಸ್ಥತರಿದ್ದರು.

ಸ್ಮಾರ್ಟ್‌ ಮೀಟರ್‌ನಿಂದ ವಿದ್ಯುತ್‌ ಸೋರಿಕೆ ತಡೆ: ಸ್ಮಾರ್ಟ್‌ ಮೀಟರ್‌ ಅಳವಡಿಕೆಯಿಂದ ಮಾನವ ಶಕ್ತಿ ಬಳಕೆಯನ್ನು ಕಡಿಮೆಗೊಳಿಸುವುದಲ್ಲದೇ, ವಿದ್ಯುತ್‌ ಸೋರಿಕೆಯನ್ನು ಕಡಿತಗೊಳಿಸಬಹುದಾಗಿದೆ ಎಂದು ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್‌.ಎನ್‌. ಗೋಪಾಲ ಕೃಷ್ಣ ತಿಳಿಸಿದರು. ಗ್ರಾಹಕರು ಎಷ್ಟು ವಿದ್ಯುತ್‌ ಬಳಕೆ ಮಾಡಿದ್ದಾರೆ ಎಂಬುದನ್ನು ಮನೆ ಮನೆಗೆ ಮಾಪನ ಮಾಡುವ ಅಗತ್ಯವಿಲ್ಲ.

ಈ ತಂತ್ರಜ್ಞಾನದ ಮೂಲಕ ವಿತರಣೆ ಮಾಡುವವರಿಗೆ ಹಾಗೂ ಬಳಕೆ ಮಾಡುವವರಿಗೆ ನೇರವಾಗಿ ಮಾಹಿತಿ ಲಭ್ಯವಾಗುತ್ತದೆ. ಈಗಿರುವ ಹಳೆ ಮೀಟರ್‌ನ ಬೆಲೆ 800 ರೂಪಾಯಿಯಾದರೆ, ಸ್ಮಾರ್ಟ್‌ ಮೀಟರ್‌ನ ಬೆಲೆ 6 ಸಾವಿರ ರೂ. ಇದೆ. ಮೈಸೂರು ನಗರದಲ್ಲಿ ಕೈಗೆತ್ತಿಕೊಂಡಿರುವ ಈ ಯೋಜನೆಗೆ ಸಾಕಷ್ಟು ಅನುದಾನದ ಅಗತ್ಯವಿದ್ದು, ಕೇಂದ್ರ ಸರ್ಕಾರಕ್ಕೆ ಪ್ರಸ್ತವ ಸಲ್ಲಿಸಲಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next