Advertisement

Karwar-Mangaluru ನಡುವೆ 500 ಸಿಸಿಟಿವಿ ಅಳವಡಿಕೆ: ಕರಾವಳಿ ಕಾವಲು ಪಡೆ ಎಸ್‌ಪಿ

11:31 PM Aug 22, 2023 | Team Udayavani |

ಉಡುಪಿ: ಸಾಗರ ತೀರದ ಭದ್ರತೆ ಮತ್ತು ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಕರಾವಳಿ ಕಾವಲು ಪೊಲೀಸ್‌ ಪಡೆ ಸನ್ನದ್ಧವಾಗಿದ್ದು, ಈ ನಿಟ್ಟಿನಲ್ಲಿ ಸಕಲ ಕ್ರಮಗಳನ್ನು ಹಂತಹಂತವಾಗಿ ರೂಪಿಸಲಾಗುತ್ತಿದೆ. ಕಾರವಾರದಿಂದ ಮಂಗಳೂರುವರೆಗೆ ಸಾಗರತೀರದ ಪಟ್ಟಣ, ಗ್ರಾಮೀಣ ಪ್ರದೇಶಗಳಲ್ಲಿ 500 ಸಿಸಿಟಿವಿ ಅಳವಡಿಸಲಾಗಿದೆ ಎಂದು ಕರಾವಳಿ ಕಾವಲು ಪೊಲೀಸ್‌ ಪಡೆ ಅಧೀಕ್ಷಕ ಅಬ್ದುಲ್‌ ಅಹದ್‌ ತಿಳಿಸಿದರು.

Advertisement

ಮಂಗಳವಾರ ಉಡುಪಿ ಪತ್ರಿಕಾ ಭವನ, ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಅನುಮಾನಾಸ್ಪದ ಚಟುವಟಿಕೆ ಕಂಡು ಬಂದಲ್ಲಿ ತತ್‌ಕ್ಷಣ ಪೊಲೀಸರು ಕಾರ್ಯಪ್ರವೃತ್ತರಾಗುತ್ತಾರೆ. ಭದ್ರತೆ ಹಾಗೂ ಸುರಕ್ಷೆ ದೃಷ್ಟಿಯಿಂದ ವ್ಯಾಪಾರಿಗಳು, ಉದ್ಯಮಿಗಳ ಸಹಕಾರದೊಂದಿಗೆ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ ಎಂದರು.

ದೇಶದಲ್ಲಿ ಭಯೋತ್ಪದನೆ, ಸಾಗರ ತೀರದಲ್ಲಿ ಅಕ್ರಮ ಚಟುವಟಿಕೆ ಹತ್ತಿಕ್ಕಲು ಕರಾವಳಿ ಪೊಲೀಸ್‌ ಪಡೆ ರೂಪಿಸಲಾಗಿತ್ತು. ಅದರಂತೆ ಕರ್ನಾಟಕದಲ್ಲಿ ಮಲ್ಪೆ ಕೇಂದ್ರ ಸ್ಥಾನವಾಗಿಸಿ ಕಾರವಾರದಿಂದ ಉಳ್ಳಾಲವರೆಗೆ ಕರಾವಳಿ ಕಾವಲು ಪಡೆ ಕಾರ್ಯ ನಿರ್ವಹಿಸುತ್ತಿದೆ. ಕಡಲತೀರದಲ್ಲಿ ಬೋಟ್‌ ಆಗಮನ, ನಿರ್ಗಮನಕ್ಕೆ 150 ಲ್ಯಾಂಡಿಂಗ್‌ ಪಾಯಿಂಟ್‌ಗಳಿವೆ. 9 ಪೊಲೀಸ್‌ ಠಾಣೆ, 600 ಸಿಬಂದಿ ಒಳಗೊಂಡಿದ್ದಾರೆ. ಸಮುದ್ರ ತೀರದಲ್ಲಿ 500 ಮೀ. ಭೂ ಪ್ರದೇಶ, 12 ನಾಟಿಕಲ್‌ ಮೈಲ್‌ ಸಮುದ್ರದಲ್ಲಿ ವಿಜಿಲೆನ್ಸ್‌-ಸೆಕ್ಯೂರಿಟಿ ನಮ್ಮ ಜವಾಬ್ದಾರಿಯಾಗಿದೆ ಎಂದರು.

ಮೀನುಗಾರರ ಸಹಕಾರ
ಸಮುದ್ರದ ಕಾರ್ಯಾಚರಣೆ, ಗಸ್ತು, ರಕ್ಷಣೆ ವಿಷಯದಲ್ಲಿ ಮೀನುಗಾರರು ಅತ್ಯುತ್ತಮ ಸಹಕಾರ ನೀಡುತ್ತಿದ್ದಾರೆ. ಸ್ಥಳೀಯ ಮೀನುಗಾರರನ್ನು ಒಳಗೊಂಡ ಸಾಗರ್‌ ರಕ್ಷಕ್‌ ದಳದಲ್ಲಿ ಸಾವಿರಕ್ಕೂ ಅಧಿಕ ಮಂದಿ ತೊಡಗಿಸಿಕೊಂಡು ನಮಗೆ ಸಹಕಾರ ನೀಡುತ್ತಿದ್ದಾರೆ. ಕಳೆದ ವರ್ಷ ಮೀನುಗಾರರ ಸಹಕಾರದಲ್ಲಿ 13 ರಕ್ಷಣೆ ಕಾರ್ಯಾಚರಣೆಯನ್ನು ಮಾಡಿದ್ದೇವೆ ಎಂದರು.

Advertisement

ಸಂಘದ ಅಧ್ಯಕ್ಷ ರಾಜೇಶ್‌ ಶೆಟ್ಟಿ ಅಲೆವೂರು ಅಧ್ಯಕ್ಷತೆ ವಹಿಸಿದ್ದರು. ಪದಾಧಿಕಾರಿಗಳಾದ ನಝೀರ್‌ ಪೊಲ್ಯ, ಉಮೇಶ್‌ ಮಾರ್ಪಳ್ಳಿ, ಅಜಿತ್‌ ಆರಾಡಿ, ಜಯಕರ ಸುವರ್ಣ ಉಪಸ್ಥಿತರಿದ್ದರು. ದೀಪಕ್‌ ಜೈನ್‌ ನಿರೂಪಿಸಿ, ಅಂಕಿತ್‌ ಶೆಟ್ಟಿ ವಂದಿಸಿದರು.

ಡ್ರೋನ್‌ ಕಣ್ಗಾವಲು
ಸಾಗರ ತೀರದಲ್ಲಿ ನಿಗಾವಹಿಸಲು ಕರಾವಳಿ ಪೊಲೀಸ್‌ ಪಡೆ ಡ್ರೋನ್‌ ಕೆಮರಾವನ್ನು ಬಳಕೆ ಮಾಡುತ್ತಿದೆ. ಸದ್ಯಕ್ಕೆ ಒಂದು ಡ್ರೋನ್‌ ಕೆಮರಾವಿದ್ದು, ಮುಂದಿನ ದಿನಗಳಲ್ಲಿ ಎಲ್ಲ ಠಾಣೆಗಳಿಗೂ ಈ ವ್ಯವಸ್ಥೆ ರೂಪಿಸಲು ಚಿಂತನೆ ನಡೆಸಲಾಗಿದೆ. 60ಕ್ಕೂ ಅಧಿಕ ತಾಂತ್ರಿಕ ಸಿಬಂದಿ, ಅಧಿಕಾರಿಗಳು ಈ ನಿಟ್ಟಿನಲ್ಲಿ ವಿಶೇಷ ತರಬೇತಿಯನ್ನು ಪಡೆದುಕೊಂಡಿದ್ದಾರೆ ಎಂದರು.

ಕೋಡಿ ಕನ್ಯಾನದಲ್ಲಿ
ತರಬೇತಿ ಕೇಂದ್ರ
ಸಾಸ್ತಾನ ಕೋಡಿ-ಕನ್ಯಾನದಲ್ಲಿ ಕರಾವಳಿ ಕಾವಲು ಪೊಲೀಸ್‌ ಪಡೆಗೆ ಸಂಬಂಧಿಸಿ 25 ಎಕರೆ ಜಾಗವಿದ್ದು, ಇದನ್ನು ವ್ಯವಸ್ಥಿತವಾಗಿ ಸಮತಟ್ಟುಗೊಳಿಸಲಾಗಿದೆ. ಇಲ್ಲಿ ಕರಾವಳಿ ಕಾವಲು ಪೊಲೀಸ್‌ ಪಡೆಯ ತರಬೇತಿ ಕೇಂದ್ರ ಮತ್ತು ಸಮುದ್ರದಲ್ಲಿ ಅವಘಡಗಳಿಂದ ಗಾಯಗೊಂಡವರಿಗೆ ತುರ್ತು ಚಿಕಿತ್ಸೆಗಾಗಿ 59 ಬೆಡ್‌ ಆಸ್ಪತ್ರೆ, ವ್ಯವಸ್ಥಿತ ಜೆಟ್ಟಿ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದ್ದು, ಈ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next