Advertisement
ಹವಾಮಾನ ವೈಪರೀತ್ಯದಿಂದ ಬೆಂಗಳೂರಿನಲ್ಲಿ ಇತ್ತೀಚೆಗೆ ಸರಿಯಾದ ಸಮಯದಲ್ಲಿ ಮಳೆ ಬೀಳುತ್ತಿಲ್ಲ. ಆದರೆ, 100 ವರ್ಷದ ಸರಾಸರಿ ತೆಗೆದುಕೊಂಡರೆ ಮಳೆ ಪ್ರಮಾಣದಲ್ಲಿ ವ್ಯತ್ಯಾಸ ಆಗಲಿಲ್ಲ. ಬೆಂಗಳೂರಿನಲ್ಲಿ ಪ್ರತಿವರ್ಷ ಸರಾಸರಿ 950 ಮಿ.ಮೀ. ಮಳೆಯಾಗುತ್ತದೆ. ಪ್ರತಿ 40*60 ಅಡಿಯ ಮನೆಯ ಮೇಲೆ ಒಂದು ಕುಟುಂಬದ ನಾಲ್ಕು ಮಂದಿಗೆ ಬೇಕಾಗುವಷ್ಟು ಮಳೆ ನೀರು ಬೀಳುತ್ತದೆ. ಇದನ್ನು ಮೇಲ್ಛಾವಣಿ ಮಳೆ ನೀರು ಕೊಯ್ಲು’ ಮೂಲಕ ಸಂಗ್ರಹಿಸಿ ವರ್ಷಕ್ಕೆ ಬೇಕಾಗುವಷ್ಟು ನೀರನ್ನು ಹೇಗೆ ಉಳಿತಾಯ ಮಾಡಬಹುದು ಎಂಬುದನ್ನು ಜಿಕೆವಿಕೆ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ದೇಸಿ ಸಮ್ಮೇಳನದ ಪ್ರದರ್ಶನದಲ್ಲಿ ತಿಳಿಸಿಕೊಟ್ಟಿದ್ದಾರೆ.
ಮನೆಯ ಟೆರೆಸ್‌ನ ಎರಡೂ ಬದಿಗಳಲ್ಲಿ ತುಂಡರಿಸಿದ ಪಿವಿಸಿ ಪೈಪ್ ಅಳವಡಿಸಬೇಕು. ಅನಂತರ ಬಲ ಹಾಗೂ ಎಡ ಬದಿಗಳಲ್ಲಿ ಫಿಲ್ಟರ್ (ನೀರು ಸಂಸ್ಕರಣಾ ಯಂತ್ರ) ಜೋಡಿಸಬೇಕು. ಎಡ ಬದಿಯ ಫಿಲ್ಟರ್‌ನಿಂದ ಸಂಪ್‌ಗೆ ನೀರಿನ ಸಂಪರ್ಕ ಕಲ್ಪಿಸಬೇಕು. ಹೆಚ್ಚಿನ ಪ್ರಮಾಣದ ನೀರು ಸಂಗ್ರಹಿಸಿಡಲು ಸಂಪ್‌ನ ಸಾಮರ್ಥ್ಯ ಸಾಲುವುದಿಲ್ಲ. ಹೀಗಾಗಿ ಸಂಪ್‌ನಲ್ಲಿ ನೀರು ತುಂಬಿದ ಬಳಿಕ ಹೆಚ್ಚುವರಿ ನೀರು ಸ್ವಯಂ ಚಾಲಿತವಾಗಿ ಇಂಗು ಗುಂಡಿಗೆ ಹರಿಯಲು ಈ ತಂತ್ರಜ್ಞಾನದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನು ಟೆರೆಸ್‌ನ ಬಲ ಬದಿಯ ಫಿಲ್ಟರ್‌ಗೆ ಪೈಪ್ ಅಳವಡಿಸಿ ಬೋರ್‌ಗೆ ಸಂಪರ್ಕ ಕಲ್ಪಿಸಿ ರೀಚಾರ್ಜ್ ಮಾಡಲಾಗುತ್ತದೆ. ಕೇವಲ 4 ಸಾವಿರ ರೂ. ವೆಚ್ಚದಲ್ಲಿ ಈ ತಂತ್ರಜ್ಞಾನ ಅಳವಡಿಸಬಹುದು. ಮಳೆ ನೀರು ಚರಂಡಿ ಸೇರಿ ಅನಗತ್ಯವಾಗಿ ನಷ್ಟವಾಗುವುದನ್ನು ಈ ತಂತ್ರಜ್ಞಾನವು ತಪ್ಪಿಸುತ್ತದೆ. ಸಂಪ್‌ನಿಂದ ಇಂಗುಗುಂಡಿಗೆ ನೀರು
ವೈಜ್ಞಾನಿಕವಾಗಿ ಇಂಗು ಗುಂಡಿ ನಿರ್ಮಿಸಿದರೆ ಮಾತ್ರ ನೀರು ಸಂಗ್ರಹಣೆಯಾಗುತ್ತದೆ. ಬೆಂಗಳೂರಿನ ಭೂ ಭಾಗದಲ್ಲಿ ಸುಮಾರು 10 ರಿಂದ 12 ಅಡಿ ಆಳದಲ್ಲಿ ಇಂಗುಗುಂಡಿ ತೆಗೆದರೆ ಅಲ್ಲಿ ಪಾರ್ಷಿಯಲ್ ವೆದರ್ ಝೋನ್ ಸಿಗುತ್ತದೆ. ಆ ತಳಭಾಗದಲ್ಲಿ ಮೊದಲು 1.2 ಮೀ ದಿಂಡುಗಲ್ಲು ಹಾಕಬೇಕು. ಇದರ ಮೇಲೆ 40 ಎಂ.ಎಂ. ಜಲ್ಲಿ, ಅದರ ಮೇಲೆ ಮತ್ತೆ 20 ಎಂ.ಎಂ.ಜಲ್ಲಿ ಇಡಬೇಕು. ಈ ಜಲ್ಲಿಯ ಮೇಲೆ 0.7 ಮೀ ಮರಳು ಹಾಕಬೇಕು. ಮರಳಿನ ಮೇಲ್ಭಾಗದಲ್ಲಿ ಪುನಃ 40 ಎಂ.ಎಂ.ದೊಡ್ಡ ಜಲ್ಲಿ ಹಾಕಬೇಕು. ಆಗ ಸಂಪ್‌ನಿಂದ ಸ್ವಯಂ ಚಾಲಿತವಾಗಿ ಎಷ್ಟೇ ನೀರು ಹರಿಸಿದರೂ ಇಂಗು ಗುಂಡಿಯಲ್ಲಿ ನೀರು ಇಂಗಿ ಶೇಖರಣೆಯಾಗುತ್ತದೆ ಎನ್ನುತ್ತಾರೆ ಜಿಕೆವಿಕೆ ಕೃಷಿ ಸಂಶೋಧಕರು.
Related Articles
ಇನ್ನು ಮನೆಗಳಲ್ಲಿ ಕೊಳವೆಬಾವಿ ತೆಗೆದಿರುವ ಪ್ರದೇಶದಲ್ಲಿ 10 ಅಡಿ ಅಗೆದು ಅದರ ತಳಭಾಗದಲ್ಲಿ 1.2 ಮೀಟರ್‌ನಷ್ಟು ದಿಂಡುಗಲ್ಲು ಹಾಕಬೇಕು. ಅದರ ಮೇಲೆ 40 ಎಂ.ಎಂ ದೊಡ್ಡ ಜಲ್ಲಿಕಲ್ಲು ಹಾಕಿ, ಅದರ ಮೇಲೆ 20 ಎಂ.ಎಂ ಸಣ್ಣ ಜಲ್ಲಿ ಹಾಕಬೇಕು. ಜಲ್ಲಿಗಳ ಮೇಲೆ 0.1 ಮೀ ನಷ್ಟು ಮರದ ಇದ್ದಿಲು ಜೋಡಿಸಬೇಕು. ಇದ್ದಿಲಿನ ಮೇಲ್ಭಾಗದಲ್ಲಿ 0.7 ಮೀಟರ್‌ನಷ್ಟು ಮರಳು ಹಾಕಬೇಕು. ಈ ಮರಳಿನ ಮೇಲೆ 3 ಮೀಟರ್ ಉದ್ದ, 3 ಮೀಟರ್ ಅಗಲ ಹಾಗೂ ಮೂರೂವರೆ ಮೀಟರ್ ಆಳದ ಕೇಸಿಂಗ್ ಪೈಪ್ ಅಳವಡಿಸಬೇಕು. ಕೇಸಿಂಗ್ ಸುತ್ತ ಒಂದು ಮೀಟರ್‌ವರೆಗೆ ಹೋಲ್ ಮಾಡಬೇಕು. ಸಾಮಾನ್ಯವಾಗಿ 1 ಮೀಟರ್‌ವರೆಗೆ 60 ಹೋಲ್ ಬೀಳುತ್ತವೆ. ಈ ಕೇಸಿಂಗ್‌ಗೆ ಫಿಲ್ಟರ್ ನೀರಿನ ಪೈಪ್‌ನ ಸಂಪರ್ಕ ಕಲ್ಪಿಸಿದರೆ ಬೋರ್ ಅಳವಡಿಸಿರುವ ಭೂ ಭಾಗದಲ್ಲಿ ಸಂಪೂರ್ಣವಾಗಿ ಮಳೆ ನೀರು ಸಂಗ್ರಹವಾಗುತ್ತದೆ ಎಂದು ಈ ತಂತ್ರಜ್ಞಾನ ಸಂಶೋಧಿಸಿರುವ ವಿಜ್ಞಾನಿ ದೇವರಾಜ್ ತಿಳಿಸಿದ್ದಾರೆ.
Advertisement