Advertisement

ಕಾಗಿಣಾ ನದಿಯಲ್ಲಿ ಜಾಕ್ವೆಲ್‌ ಅಳವಡಿಸಿ

06:37 AM Mar 16, 2019 | Team Udayavani |

ವಾಡಿ: ಕೈಗಾರಿಕಾ ನಗರಿಗೆ ಪ್ರತಿ ವರ್ಷದ ಬೇಸಿಗೆ ತಿಂಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿದ್ದು, ಶಾಶ್ವತ ಪರಿಹಾರಕ್ಕಾಗಿ ಕಾಗಿಣಾ ನದಿಯಲ್ಲಿ ಜಾಕ್ವೆಲ್‌ ಅಳವಡಿಸಬೇಕು ಎಂದು ಆಗ್ರಹಿಸಿ ಸೋಷಲಿಸ್ಟ್‌ ಯೂನಿಟಿ ಸೆಂಟರ್‌ ಆಫ್‌ ಇಂಡಿಯಾ (ಎಸ್‌ಯುಸಿಐ) ಕಮ್ಯುನಿಸ್ಟ್‌ ಪಕ್ಷದ ಕಾರ್ಯಕರ್ತರು ಶುಕ್ರವಾರ ಪುರಸಭೆ ಎದುರು ಪ್ರತಿಭಟನೆ ನಡೆಸಿದರು. 

Advertisement

ಸುಮಾರು 50 ಸಾವಿರ ಜನಸಂಖ್ಯೆ ಹೊಂದಿರುವ ಪಟ್ಟಣಕ್ಕೆ ಕುಂದನೂರು ಸಮೀಪದ ಭೀಮಾನದಿ ಜಲಮೂಲವಾಗಿದೆ. ಇದು ಬೇಸಿಗೆ ಕಾಲದಲ್ಲಿ ಸಂಪೂರ್ಣ ಬತ್ತಿ ಹೋಗುತ್ತದೆ. ಇದರಿಂದ ಜನರು ನೀರಿಗಾಗಿ ಹಗಲು ರಾತ್ರಿ ಪರದಾಡುವಂತೆ ಆಗಿದೆ. ಆದರೆ ಸ್ಥಳೀಯ ಎಸಿಸಿ ಸಿಮೆಂಟ್‌ ಕಂಪನಿಗೆ ನೀರಿನ ಕೊರತೆ ಆಗುವುದಿಲ್ಲ. ಕಾರಣ ಸಮೀಪದ ಇಂಗಳಗಿ ಬಳಿಯ ಕಾಗಿಣಾ ನದಿಗೆ ಬ್ರಿಡ್ಜ್ ಕಂ ಬ್ಯಾರೇಜ್‌ ನಿರ್ಮಿಸಲಾಗಿದೆ. ಬೆಣ್ಣೆತೋರಾ ಜಲಾಶಯದಿಂದ ಹರಿಸಲಾದ ಅಪಾರ ಪ್ರಮಾಣದ ನೀರು ಕಾಗಿಣಾ ನದಿಯಲ್ಲಿ ಸಂಗ್ರಹವಿರುತ್ತದೆ. ಪುರಸಭೆಗೆ ಸೇರಿದ ಇನ್ನೊಂದು ಜಾಕ್ವೆಲ್‌ ಇಂಗಳಗಿ ಕಾಗಿಣಾ ನದಿಯಲ್ಲಿ ಅಳವಡಿಸುವ ಮಹತ್ವದ ಯೋಜನೆ ರೂಪಿಸಿದರೆ, ಬೇಸಿಗೆ ಕಾಲವನ್ನು ಸರಳವಾಗಿ ಎದುರಿಸಬಹುದು. ಆದರೆ, ಈ ಕುರಿತು ಪುರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಆಲೋಚನೆ ಮಾಡುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಕೆಟ್ಟಿರುವ ಪಟ್ಟಣದ ಎಲ್ಲ ಬೋರ್‌ವೆಲ್‌ಗ‌ಳ ದುರಸ್ತಿ ಮಾಡಿ. ಅಗತ್ಯವಿರುವ ಬಡಾವಣೆಗಳಲ್ಲಿ ಹೊಸದಾಗಿ ಬೋರ್‌ವೆಲ್‌ ಕೊರೆಸಿ. ನೇತಾಜಿ ನಗರ ಬಡಾವಣೆಯಲ್ಲಿ ಹೊಸ ಬೋರ್‌ವೆಲ್‌ ಮತ್ತು ನೀರಿನ ಗುಮ್ಮಿ ನಿರ್ಮಿಸಿ. ನೀರು ಶುದ್ಧೀಕರಣ ಘಟಕವಿದ್ದರೂ ಕಲುಷಿತ ನೀರು ಸರಬರಾಜು ಮಾಡಲಾಗುತ್ತಿದೆ. ನೀರು ಶುದ್ಧೀಕರಿಸಿಯೇ ಬಡಾವಣೆಗಳಿಗೆ ಪೂರೈಸಬೇಕು ಎಂದು ಒತ್ತಾಯಿಸಿದರು. 

ಎಸ್‌ಯುಸಿಐ ಮುಖಂಡರಾದ ರಾಘವೇಂದ್ರ ಅಲ್ಲಿಪುರ, ಶ್ರೀಶರಣ ಹೊಸಮನಿ, ಶರಣು ಹೇರೂರ, ರಾಜು ಒಡೆಯರಾಜ, ಸಿದ್ಧಯ್ಯಶಾಸ್ತ್ರೀ ನಂದೂರಮಠ, ಶ್ರೀಶೈಲ ಕೆಂಚಗುಂಡಿ, ಮಲ್ಲಿನಾಥ ಹುಂಡೇಕಲ್‌, ಗೌತಮ ಪರತೂರಕರ, ಆರ್‌.ಜಿ. ವೆಂಕಟೇಶ, ಬಸವರಾಜ ನಾಟೇಕರ, ಅರುಣಕುಮಾರ ಹಿರೇಬನಾರ ಹಾಗೂ ವಿವಿಧ ಬಡಾವಣೆಗಳ ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪುರಸಭೆ ಮುಖ್ಯಾಧಿಕಾರಿಗೆ ಬರೆದ ಮನವಿ ಪತ್ರವನ್ನು ವ್ಯವಸ್ಥಾಪಕ ಮಲ್ಲೇಶ ಅಕ್ಕರಕಿ ಸ್ವೀಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next