ಕಡೂರು: ಕಡೂರು ಕೇಂದ್ರ ಸ್ಥಾನದಲ್ಲಿ ತಕ್ಷಣವೇ ಜಾರಿಗೆ ಬರುವಂತೆ ಕೋವಿಡ್ ವಾರ್ ರೂಂ ಸ್ಥಾಪಿಸುವಂತೆ ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಶುಕ್ರವಾರ ಕೋವಿಡ್ ರೋಗ ನಿರ್ಮೂಲನೆ ಕುರಿತಂತೆ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕೋವಿಡ್ ವಾರ್ ರೂಂ ಸ್ಥಾಪಿಸುವುದರಿಂದ ರೋಗ ಹರಡುವಿಕೆಯನ್ನು ತಡೆಯಬಹುದು. ರೋಗದ ತೀವ್ರತೆಯನ್ನು ಪತ್ತೆ ಹಚ್ಚಬಹುದು. ಗಂಭೀರ ಹಂತ ಮುಟ್ಟಿದ ರೋಗಿಗಳಿಗೆ ತಕ್ಷಣ ಚಿಕಿತ್ಸೆ ನೀಡುವಂತಹ ವ್ಯವಸ್ಥೆ ಮಾಡಬಹುದು ಎಂದ ಅವರು, ನಿವೃತ್ತ ವೈದ್ಯರು, ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು, ತರಬೇತಿ ಹೊಂದಿದ ಶಿಕ್ಷಕರು ಮುಂತಾದ ವ್ಯಕ್ತಿಗಳನ್ನು ವಾರ್ ರೂಂ ನಿರ್ವಹಣೆಗೆ ಪಾಳಿಯ ಮೇಲೆ ಕರ್ತವ್ಯ ನಿರ್ವಹಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ವಾರ್ ರೂಂ ಮೂಲಕ ಹೋಂ ಐಸೋಲೇಷನ್‌ನಲ್ಲಿರುವ ರೋಗಿಗಳ ಆಮ್ಲಜನಕ, ತಾಪಮಾನದ ಮಟ್ಟ ಮುಂತಾದ ಪ್ರಕ್ರಿಯೆಯನ್ನು ನಿರಂತರವಾಗಿ ದಾಖಲಿಸುವುದು, ಪ್ರಾಥಮಿಕ ಸಂಪರ್ಕಿತ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಪಾಸಿಟಿವ್ ಬಂದವರಿಗೆ ಚಿಕಿತ್ಸೆಗೆ ಸೂಚಿಸುವುದು ಸೇರಿದಂತೆ ತಾಲೂಕಿನಾದ್ಯಾಂತ ಪ್ರತಿಯೊಬ್ಬ ಪಾಸಿಟಿವ್ ಬಂದ ವ್ಯಕ್ತಿಯನ್ನು ತಲುಪಲು ಸಾಧ್ಯವಿದೆ ಎಂದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಈಗಾಗಲೇ 50 ಹಾಸಿಗೆಯ ಕೋವಿಡ್ ಕೇಂದ್ರ ಆರಂಭಿಸಲಾಗಿದೆ. ಸಿಬ್ಬಂದಿ ಕೊರತೆ ಇರುವುದರಿಂದ ಸಾಕಷ್ಟು ಜನರಿಗೆ ಚಿಕಿತ್ಸೆ ಲಭ್ಯವಾಗುತ್ತಿಲ್ಲ. 18 ವಿವಿಧ ಹಂತದ ಸಿಬ್ಬಂದಿ ಮತ್ತು ಸ್ಕ್ಯಾನಿಂಗ್ ವೈದ್ಯರ ಹುದ್ದೆ ಖಾಲಿ ಇರುವ ಬಗ್ಗೆ ತಾವು ಶಾಸಕರಾದ ಬೆಳ್ಳಿಪ್ರಕಾಶ್ ಜೊತೆಗೂಡಿ ತಕ್ಷಣವೇ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ ಹೊರಗುತ್ತಿಗೆ ಆಧಾರದ ಮೇಲೆ ಹುದ್ದೆ ಭರ್ತಿ ಮಾಡಿಕೊಳ್ಳಲು ಚಿಂತನೆ ಇದೆ ಎಂದರು.
ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾ ಧಿಕಾರಿ ಡಾ| ಎಸ್.ವಿ. ದೀಪಕ್ ಅವರು ಔಷಧ ಕೊರತೆ ಸದ್ಯಕ್ಕೆ ಇಲ್ಲ ಎಂದು ತಮಗೆ ಮಾಹಿತಿ ನೀಡಿದ್ದಾರೆ. ಆದರೂ ಮುಂದಿನ 15 ದಿನಗಳಿಗೆ ಆಗುವಷ್ಟು ವಿವಿಧ ರೀತಿಯ ಇಂಜಕ್ಷನ್, ಮಾತ್ರೆ ಮತ್ತಿತರ ಔಷಧಗಳ ದಾಸ್ತಾನಿಗೆ ಜಿಲ್ಲಾ ಧಿಕಾರಿಗಳೊಂದಿಗೆ ಚರ್ಚಿಸಿ ಪ್ರಾಕೃತಿಕ ವಿಕೋಪ ಯೋಜನೆಯ ಮೂಲಕ ಹಣ ಬಿಡುಗಡೆಗೆ ಒತ್ತಾಯಿಸುತ್ತೇನೆ ಎಂದರು. ಆತಂಕಕಾರಿ ಬೆಳವಣಿಗೆ ಎಂದರೆ ತಾಲೂಕಿನಲ್ಲಿ 1,418 ಸಕ್ರಿಯ ಪ್ರಕರಣಗಳಿವೆ. 26 ಕೋವಿಡ್ ರೋಗಿಗಳ ಸಾವು ಉಂಟಾಗಿರುವ ಬಗ್ಗೆ ಅ ಧಿಕಾರಿಗಳು ಮಾಹಿತಿ ನೀಡಿದ್ದರು. ಇಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಬೇರೆ ಊರಿನ ಆಸ್ಪತ್ರೆಗಳಿಗೆ ತೆರಳಿ ಅಲ್ಲಿ ಉಂಟಾಗಿರುವ ಸಾವಿನ ಬಗ್ಗೆ ಅಧಿಕಾರಿಗಳಲ್ಲಿ ಲೆಕ್ಕವಿಲ್ಲ ಎಂಬ ಅಂಶ ಗಂಭೀರವಾದದ್ದು. ಅಲ್ಲಿ ಸತ್ತವರೂ ಕೂಡ ತಾಲೂಕಿನವರೇ ಆಗಿದ್ದು ಇದರಿಂದ ಪ್ರಕರಣಗಳ ತೀವ್ರತೆ ಹೆಚ್ಚಾಗಿರುವುದು ಸ್ಪಷ್ಟ. ಆದ್ದರಿಂದ ಲಾಕ್‌ಡೌನ್ ವ್ಯವಸ್ಥೆಯನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ರಕ್ಷಣಾ ಇಲಾಖೆಗೆ ಸೂಚಿಸಿದರು.
ವ್ಯಾಕ್ಸಿನ್ ಪ್ರಕ್ರಿಯೆ ತಾಲೂಕಿನಲ್ಲಿ ಸಮರ್ಪಕವಾಗಿದೆ. ಆದರೆ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಎರಡನೇ ಹಂತದ ಲಸಿಕೆ ಪಡೆಯುವವರಿಗೆ ತೊಂದರೆಯಾಗಿದ್ದು ಎಷ್ಟು ಪ್ರಮಾಣದ ಲಸಿಕೆ ಲಭ್ಯತೆ ಅಗತ್ಯವಿದೆ ಎಂಬ ಬಗ್ಗೆ ತಮಗೆ ಅಧಿಕಾರಿಗಳು ಮಾಹಿತಿ ನೀಡಿದರೆ ಹೆಚ್ಚಿನ ಲಸಿಕೆ ಪೂರೈಕೆಗೆ ಸರಕಾರ ಮತ್ತು ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಒತ್ತಡ ಮಾಡಲಾಗುವುದು ಎಂದರು.
ತಹಶೀಲ್ದಾರ್ ಜೆ.ಉಮೇಶ್ ಮಾತನಾಡಿ, ಕಡೂರು ತಾಲೂಕಿನಾದ್ಯಂತ ಸಂಪೂರ್ಣ ಲಾಕ್ ಡೌನ್ ಪದ್ಧತಿ ಜಾರಿಯಲ್ಲಿದ್ದು ಅಗತ್ಯ ವಸ್ತುಗಳಾದ ದಿನಸಿ ಮತ್ತು ತರಕಾರಿಯನ್ನು ಹೋಂ ಡೆಲಿವರಿ ಮೂಲಕ ಪೂರೈಕೆ ಮಾಡಲಾಗುತ್ತಿದೆ. ಬೆಳಗ್ಗೆ 6 ರಿಂದ 10 ರವರೆಗೆ ಗೊಬ್ಬರ ಮತ್ತು ಬಿತ್ತನೆ ಬೀಜಕ್ಕೆ ಒತ್ತು ನೀಡಲಾಗಿದೆ. ಶುದ್ಧ ಕುಡಿಯುವ ನೀರು ಪಡೆಯಲು ಸೂಚಿಸಲಾಗಿದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ಶಾಸಕ ಬೆಳ್ಳಿಪ್ರಕಾಶ್ ವಹಿಸಿದ್ದರು. ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ,ಡಿವೈಎಸ್‌ಪಿ ಏಗನ್‌ಗೌಡ, ತಾಪಂ ಇಒ ಡಾ| ದೇವರಾಜ್ ನಾಯ್ಕ ಇದ್ದರು.