Advertisement

ಅಂಧನಾಗಿಕೊಂಡೇ ಅಂಗಡಿಯ ಮಾಲೀಕನಾದ 69 ರ ವೃದ್ಧ :ಸ್ವಾಭಿಮಾನದ ಬದುಕಿಗೊಂದು ಸಾಕ್ಷಿ ಈ ವ್ಯಕ್ತಿ

08:24 PM Jan 06, 2021 | ಸುಹಾನ್ ಶೇಕ್ |

ಬದುಕು ಎಲ್ಲರಿಗೂ ಒಂದು ಸವಾಲು. ನಾವು ಅದನ್ನು ಸಮಸ್ಯೆ ಅಂದುಕೊಂಡರೆ ಅದು ಸಮಸ್ಯೆಯಾಗಿಯೇ ಉಳಿಯುತ್ತದೆ. ಸವಾಲು ಅಂದುಕೊಂಡರೆ ಸವಾಲನ್ನು ಗೆಲ್ಲುವುದು ಹಗಲು ರಾತ್ರಿಯಾದ್ದಷ್ಟು ಸುಲಭ ಸಾಧ್ಯವೆಂದುಕೊಂಡರೆ ನಮ್ಮಷ್ಟು ಮೂರ್ಖರು ಬೇರಾರು ಇಲ್ಲ ಬಿಡಿ.!

Advertisement

ಕಣ್ಣುಗಳಿಂದಲೇ ಜಗತ್ತಿನ ಸರ್ವಸ್ವವನ್ನು ಅನುಭವಿಸುವ,ಅನುಕರಿಸುವ ಹಾಗೂ ಅಪರಾಧ,ಆತ್ಮೀಯತೆ ಎಲ್ಲದ್ದಕ್ಕೆ ಕಣ್ಣೊಂದು ಸರ್ವಕಾಲಿಕ ಸಾಕ್ಷಿ. ಈ ಕಣ್ಣುಗಳಿಂದಲೇ ಅಲ್ವಾ ಕನಸು ಕಾಣುವುದು, ಭೀತಿ ಕಾಡುವುದು. ಕಣ್ಣುಗಳೇ ಇಲ್ಲದೆ ಇರುತ್ತಿದ್ದರೆ ಕತ್ತಲೇ ಜಗತ್ತಿನ ರಾಜನಾಗಿ ಮೆರೆಯುತ್ತಿತ್ತೊ ಏನೋ..?

ಕೇರಳದ ಪಥನಮತ್ತಟ್ಟ ಜಿಲ್ಲೆಯ ಸುಧಾಕರ ಕುರುಪ್. ಬಾಲ್ಯದಿಂದ ಯೌವನದ ಪ್ರಾರಂಭದವರೆಗೂ ಕಲಿಕೆ,ಆಟ,ಪಾಠ,ಹಟ ಎಲ್ಲಾ ಹಂತವನ್ನು ದಾಟಿಕೊಂಡು ಅಪ್ಪ ಅಮ್ಮನ ಆರೈಕೆಯಲ್ಲಿ ಬೆಳೆಯುತ್ತಾರೆ. 14 ವರ್ಷದ ಆರಂಭದಲ್ಲಿ ಸುಧಾಕರ ದಿನಚರಿ ಎಂದಿನಂತೆ ಇರುತ್ತಿರಲಿಲ್ಲ. ಬೆಳೆಗ್ಗೆದ್ದು ಮುಖ ತೊಳೆದು ಕನ್ನಡಿ ನೋಡುವಾಗ ಮುಖದಲ್ಲಿ ಮಂದಹಾಸವೇ ಕಳೆಯುತ್ತಾ  ಬರುವುದು ಸುಧಾಕರ್ ಗೆ ನಿಧಾನವಾಗಿ ಮನದಾಟ್ಟಾಗಿತ್ತು. ಸುಧಾಕರ್ ಅವರ ಕಣ್ಣಿಗೆ ಅದೇನೋ ಅಡ್ಡವಾಗಿ ಸರಿಯಾಗಿ ಯಾವ ವಸ್ತು,ವ್ಯಕ್ತಿಯನ್ನೂ ಗುರುತಿಸಲು ಕಷ್ಟವಾಗುವ ಪರಿಸ್ಥಿತಿ ಬರುತ್ತದೆ. ಕಣ್ಣಿನ ದೃಷ್ಟಿ ಕೊಂಚ ಮಂದವಾಗುತ್ತಿತ್ತು. ಅದೇಗೋ ಕಣ್ಣಿನ ಮಂದ ದೃಷ್ಟಿಯಲ್ಲೇ 9 ನೇ ಕ್ಲಾಸ್ ನ ವರೆಗೆ ಶಿಕ್ಷಣವನ್ನು ಪಡೆಯುತ್ತಾರೆ. ಆದರೆ 21 ನೇ ವರ್ಷದಲ್ಲಿ ಸುಧಾಕರ್ ವೈದ್ಯರ ಬಳಿಯಲ್ಲಿ ಪರೀಕ್ಷಿಸಿದಾಗ ಸಂಪೂರ್ಣವಾಗಿ ಗ್ಲುಕೋಮಾ ಕಾರಣದಿಂದ (ಕಣ್ಣಿನ ಪೊರೆಯಿಂದ) ದೃಷ್ಟಿಯನ್ನು ಕಳೆದುಕೊಂಡಿದ್ದಾರೆ ಎನ್ನುವ ಸತ್ಯವನ್ನು ವೈದ್ಯರು ಹೇಳುತ್ತಾರೆ. ತಿರುವನಂಥಪುರಂನ ಖಾಸಗಿ ಆಸ್ಪತ್ರೆಯಲ್ಲಿ ಸತತ ಮೂರು ತಿಂಗಳು ಕಣ್ಣಿನ ಚಿಕಿತ್ಸೆಯನ್ನು ಮಾಡಿದರೂ ಸುಧಾಕರ್ ಮತ್ತೆ ಕಣ್ಣು ದೃಷ್ಟಿ ಪಡೆಯುವ ಯಾವ ಭರವಸೆಯನ್ನು ವೈದ್ಯರು ನೀಡಲಿಲ್ಲ.

ಕಣ್ಣಿಲ್ಲದವನ ಸವಾಲಿನ ದಾರಿ :

ಬಾಲ್ಯದಲ್ಲಿ ಸುಧಾಕರ್ ಅಪ್ಪ ಅಮ್ಮನ ಬಳಿ ತಾನು ದೊಡ್ಡವನಾದ ಮೇಲೆ ಒಂದು ಅಂಗಡಿ ಹಾಕುತ್ತೇನೆ ಎನ್ನುತ್ತಿದ್ದರು. ಅದು ಬಾಲ್ಯದ ಮಾತು. ಆ ಕ್ಷಣದ ಮಾತನ್ನೇ ಸುಧಾಕರ ಕಣ್ಣಿನ ದೃಷ್ಟಿ ಕಳೆದುಕೊಂಡ 22 ರ ಹರೆಯದಲ್ಲಿ ಮತ್ತೆ ಅಪ್ಪ ಅಮ್ಮನ ಬಳಿ ಹೇಳುತ್ತಾರೆ. ಅಪ್ಪ ಅಮ್ಮ ಮಗನ ಮಾತನ್ನು ಕೇಳಿ ಮನೆಯಿಂದ ಸ್ವಲ್ಪವೇ ದೂರದಲ್ಲಿ ಎರಡು ಕೋಣೆಯ ಒಂದು ದಿನಸಿ ಅಂಗಡಿಯನ್ನು ತೆರೆದುಕೊಡುತ್ತಾರೆ ಅಷ್ಟೇ. ಮುಂದೆ ನಡೆದದ್ದು ಸೋತವನ ಕಥೆಯಲ್ಲ ಸವಾಲು ಗೆದ್ದ ಸಾಧಕನ ಹೆಜ್ಜೆ.!

Advertisement

ಎಲ್ಲವನ್ನೂ ಒಂಟಿಯಾಗಿಯೇ ನಿಭಾಯಿಸುವ ಛಲ :

ಸುಧಾಕರ ಅಂಗಡಿಯನ್ನು ಆರಂಭಿಸಿದ್ದು ತನ್ನ 22 ನೇ ವಯಸ್ಸಿನಲ್ಲಿ ಆದರೆ ಇಂದು ಅವರು ಅದೇ ಅಂಗಡಿಯಲ್ಲಿ 46 ವರ್ಷಗಳನ್ನು ಪೊರೈಸಿದ್ದಾರೆ. ಅದು ಒಬ್ಬರ ಸಹಾಯ,ಸಹಕಾರ,ಸಲಹೆ ಇಲ್ಲದೆ.! ಪ್ರತಿನಿತ್ಯ ಸುಧಾಕರ ಆಟೋದಲ್ಲಿ ಮಾರುಕಟ್ಟೆಗೆ ಹೋಗುತ್ತಾರೆ. ಸ್ನೇಹಿತರ ಅಂಗಡಿಯಲ್ಲಿ ಯಾವ ಸಾಮಾಗ್ರಿ ಬೇಕೋ ಅದನ್ನು ತನ್ನ ಹೆಗಲ ಮೇಲಿಟ್ಟು ಬರುತ್ತಾರೆ. ಬೇರೆ ಯಾರಿಗಾದರೂ ಅದನ್ನು ಹಿಡಿದುಕೊಳ್ಳಲು ಕೊಟ್ಟರೆ ಅವರು ಬೇರೆ ಜಾಗದಲ್ಲಿ ಇಟ್ಟು ಬಿಟ್ಟರೆ ಆಗ ಸುಧಾಕರ ಅದನ್ನು ಹುಡುಕಲು ಕಷ್ಟ ಪಡಬೇಕಾಗುತ್ತದೆ. ಆ ಕಾರಣಕ್ಕೆ ಸುಧಾಕರ ಒಂದೇ ಜಾಗದಲ್ಲಿ ಅಂಗಡಿಯ ಸಾಮಾಗ್ರಿಯನ್ನು ಇಡುತ್ತಾರೆ. ಅದು ಕಳೆದ 46 ವರ್ಷಗಳಿಂದ ಬದಲಾಗಿಲ್ಲ. ಎಂದೂ ಒಮ್ಮೆಯೋ ಸುಧಾಕರ ಇಟ್ಟ ಸಾಮಾಗ್ರಿಗಳು ಕೈತಪ್ಪಿ ಹೋಗಿಲ್ಲ.

ಸುಧಾಕರ ಅವರಿಗೆ ನಿಜವಾಗಿಯೂ ಸಮಸ್ಯೆ ಆದ ಸಮಯವೆಂದರೆ ಅದು 2016 ರ ನೋಟು ಅಮಾನ್ಯೀಕರಣ ಸಂದರ್ಭದಲ್ಲಿ ಮಾತ್ರ. ಹೊಸ ನೋಟು ಹಳೆಯ ನೋಟಿನ ವತ್ಯಾಸವನ್ನು ಅಳೆಯಲು ಸುಧಾಕರರಿಗೆ ಒಂದು ವಾರ ಬೇಕಾಯಿತು.

ಸುಧಾಕರ ಚಪ್ಪಲಿಯನ್ನು ಹಾಕುವುದಿಲ್ಲ. ಅದಕ್ಕೆ ಕಾರಣ ಅವರು ತಮ್ಮ ಕಾಲಿನಿಂದಲೇ ಎಲ್ಲವನ್ನೂ ಲೆಕ್ಕ ಹಾಕುವ ಅಭ್ಯಾಸವನ್ನು ಮಾಡಿರುವುದರಿಂದ. ಎಷ್ಟು ದೂರದಲ್ಲಿ ತಮ್ಮ ಮನೆ ಬರುತ್ತದೆ, ಎಷ್ಟು ಅಂತರದಲ್ಲಿ ಅಂಗಡಿಯ ಸಾಮಾಗ್ರಿ ಇಟ್ಟಿದ್ದೇನೆ. ಎಲ್ಲವನ್ನೂ ಕಾಲಿನ ಹೆಜ್ಜೆಯ ಲೆಕ್ಕದಿಂದಲೇ ಅರಿತುಕೊಂಡಿದ್ದಾರೆ. ಇನ್ನೊಂದು ವಿಶೇಷ ಅಂದರೆ ಸುಧಾಕರ ಇದುವರೆಗೆ ಸಹಾಯಕ್ಕಾಗಿ ನಡೆಯಲು ಯಾವ ಸ್ಟೀಕ್ ನ್ನು ಸಹ ಬಳಸಿಲ್ಲ. ಇದುವರೆಗೂ ಎಲ್ಲೂ ಬೀಳುವಂಥ ಘಟನೆ ನಡೆದಿಲ್ಲ. ತಾನು ತನ್ನ ಊರನ್ನು, ಗ್ರಾಮವನ್ನು ಚೆನ್ನಾಗಿ ಅರಿತುಕೊಂಡಿದ್ದೇನೆ, ತನಗೆ ಯಾವ ಸ್ಟೀಕ್ ಅಗತ್ಯವಿಲ್ಲವೆನ್ನುವುದು ಸುಧಾಕರ ಅವರ ಮಾತು.

ಊರಿನವರ ಅಗತ್ಯಕ್ಕಾಗಿ ಸುಧಾಕರ ತಮ್ಮ ಅಂಗಡಿಯನ್ನು ಇಪ್ಪತ್ತುನಾಲ್ಕು ಗಂಟೆಯೂ ತೆರೆದಿಡುತ್ತಾರೆ. ಅಲ್ಲೇ ಮಲಗುತ್ತಾರೆ. ನಿತ್ಯ ಕರ್ಮಕ್ಕಾಗಿ ಮಾತ್ರ ಮನೆಗೆ ಹೋಗುತ್ತಾರೆ.

ಸುಧಾಕರ ಅವರಿಗೆ ಈಗ 69 ವರ್ಷ. ಅವರು ಇಂದು ತಮ್ಮ ಅಣ್ಣ ಅತ್ತಿಗೆ ಮತ್ತವರ ಮಕ್ಕಳೊಂದಿಗೆ ನೆಲೆಸಿದ್ದಾರೆ. ಅಂಗಡಿಯಿಂದ ಬರುವ ಒಂಚೂರು ಲಾಭಂಶವನ್ನು ಮನಗೆ ಮತ್ತು, ಅಂಗಡಿಗಾಗಿ ಏನಾದ್ರು ತರುತ್ತಾರೆ. ತನ್ನಿಂದ ಯಾರಿಗೂ ತೊಂದರೆ ಆಗಬಾರದು. ತಾನೇ ಎಲ್ಲವನ್ನೂ ಸ್ವಂತವಾಗಿ ಮಾಡಬೇಕೆನ್ನುವುದು ಸುಧಾಕರ ಅವರ ಇಚ್ಛೆ.

 

-ಸುಹಾನ್ ಶೇಕ್

Advertisement

Udayavani is now on Telegram. Click here to join our channel and stay updated with the latest news.

Next