Advertisement

ಪಕ್ಕಡ ಹಿಡಿದ ಕೈ ಕಾರ್ಮಿಕರಿಗೆ ಪ್ರೇರಣೆ

12:41 PM May 01, 2019 | Suhan S |

ಹಾವೇರಿ: ನಮ್ಮ ದೇಶದಲ್ಲಿ ಸ್ಮಾರಕಗಳಿಗೇನೂ ಕಡಿಮೆ ಇಲ್ಲ. ಬೀದಿ ಬೀದಿಗೊಂದು ಸ್ಮಾರಕಗಳು ಕಾಣಲು ಸಿಗುತ್ತವೆ. ಆದರೆ, ಶ್ರಮಿಕ ವರ್ಗದ ಪ್ರತೀಕವಾಗಿ ಸ್ಮಾರಕ ಇರುವುದು ಬಲು ಅಪರೂಪ. ಇಂಥ ಅಪರೂಪದ ಸುಂದರ ಕಾರ್ಮಿಕ ಸ್ಮಾರಕ ನಗರದ ಹೆಸ್ಕಾಂ ಕಚೇರಿ ಆವರಣದಲ್ಲಿದೆ.

Advertisement

ಈ ಸ್ಮಾರಕ ಉಳ್ಳವರಿಂದ ಹಣ ಸಂಗ್ರಹಿಸಿ ನಿರ್ಮಿಸಿದ ಸ್ಮಾರಕವಲ್ಲ. ಈ ಸ್ಮಾರಕದ ಇಂಚಿಂಚಿನಲ್ಲಿಯೂ ಕಾರ್ಮಿಕರ ಶ್ರಮ ಇದೆ; ಶ್ರಮದ ಪ್ರತಿಫಲವಾಗಿ ಪಡೆದ ಹಣದ ವಿನಿಯೋಗವಿದೆ. ಈ ಕಾರಣದಿಂದಾಗಿಯೇ ಈ ಸ್ಮಾರಕ ಕಾರ್ಮಿಕರ ಶ್ರಮ, ದುಡಿಮೆಯ ಪ್ರತೀಕವಾಗಿದೆ.

ಕಾರ್ಮಿಕರಿಗೆ ಪ್ರೇರಣೆ ನೀಡುವ ಕಾರ್ಮಿಕರ ಸ್ಮಾರಕವೊಂದು ನಿರ್ಮಿಸಬೇಕೆಂದು ಮೊದಲು ಕನಸು ಕಂಡವರು ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮದ ನೌಕರರ ಸಂಘದ ಮಾಜಿ ಅಧ್ಯಕ್ಷ ಎನ್‌. ಜಯರಾಜ. ಈ ಕನಸು ನನಸಾಗಿಸಲು ಬಹಳ ಕಾಲ ಕಾಯಬೇಕಾದ ಪರಿಸ್ಥಿತಿ ಬರಲಿಲ್ಲ. ಏಕೆಂದರೆ ಎಲ್ಲ ಕಾರ್ಮಿಕರು ಸ್ಮಾರಕ ನಿರ್ಮಾಣಕ್ಕೆ ಭರಪೂರ ಬೆಂಬಲ ನೀಡಿದರು.

ಶ್ರಮದ ಹಣ: ಪ್ರತಿಯೊಬ್ಬ ಕಾರ್ಮಿಕರಿಂದ ಅವರ ಬೆವರಿನ ಬೆಲೆ ಸಂಗ್ರಹಿಸಲಾಯಿತು. ಕಾರ್ಮಿಕರಿಂದ ಸಂಗ್ರಹಿಸಿದ ಮೂರು ಲಕ್ಷ ರೂ.ಗಳಲ್ಲಿ ಕಾರ್ಮಿಕರ ಶ್ರಮದ ಪ್ರತೀಕವಾಗಿ (ಪಕ್ಕಡ್‌ ಹಿಡಿದ ಕೈ) ಇರುವ ಅರ್ಥಪೂರ್ಣ ಸ್ಮಾರಕ ನಿರ್ಮಾಣವಾಯಿತು. 2001 ಅಗಷ್ಟ 8ರಂದು ಕವಿಪ್ರ ನಿಗಮದ ಅಂದಿನ ಅಧ್ಯಕ್ಷ ವಿ.ಪಿ. ಬಳಿಗಾರ ಅರ್ಥಪೂರ್ಣ ಸ್ಮಾರಕವನ್ನು ನಾಡಿಗೆ ಸಮರ್ಪಿಸಿದರು. ಅಪರೂಪದ ಈ ಸ್ಮಾರಕ ಐದು ಅಡಿ ಎತ್ತರವಿದ್ದು, ಸಂಪೂರ್ಣ ಹೊಳಪಿನ ಕಪ್ಪು ಗ್ರ್ಯಾನೇಟ್ ಕಲ್ಲಿನಿಂದ ನಿರ್ಮಿಸಲಾಗಿದೆ. ಈ ಕಲ್ಲಿನ ಮೇಲೆ ಕನ್ನಡ, ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಕಾರ್ಮಿಕರ ಮೌಲ್ಯ ಸಾರುವ ನುಡಿಮುತ್ತಿನ ಅಕ್ಷರಗಳನ್ನು ಅಂದವಾಗಿ ಕೆತ್ತಲಾಗಿದೆ.

ದುಡಿಮೆಯ ಪ್ರತಿಬಿಂಬ: ಕಲ್ಲಿನ ಮೇಲೆ ಕೆತ್ತಲಾಗಿರುವ ‘ಮುಗಿವ ಕೈಗಳಿಗಿಂತ ದುಡಿಯುವ ಕೈಗಳೇ ಮೇಲು’ ಎಂಬ ಉಕ್ತಿ ಹಾಗೂ ‘ನಾಡಿಗೆ ಬೆಳಕು ಕೊಟ್ಟು ತಾವು ಕತ್ತಲೆ ಸೇರಿದ ಸಾವಿರಾರು ಕಾರ್ಮಿಕರ ಅಮರ ಸ್ಮಾರಕ’ ಎಂಬ ವಾಕ್ಯ ಕಾರ್ಮಿಕರ ಮಹತ್ವ, ಅವರ ಶ್ರಮದ ಮೌಲ್ಯವನ್ನು ಎತ್ತಿಹಿಡಿದಿವೆ. ಸ್ಮಾರಕ ಕಲ್ಲಿನ ಮೇಲೆ ಪಕ್ಕಡ್‌ ಹಿಡಿದಿರುವ ಕೈ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಇದು ವಿದ್ಯುತ್‌ ಇಲಾಖೆಯಲ್ಲಿ ದುಡಿಯುವ ಕಾರ್ಮಿಕರ ದುಡಿಮೆಯ ಪ್ರತಿಬಿಂಬವಾಗಿದೆ.

Advertisement

ನಿತ್ಯಾರಾಧನೆ: ಹಲವರು ಹಲವು ರೀತಿಯ ಸ್ಮಾರಕಗಳನ್ನು ನಿರ್ಮಿಸುತ್ತಾರೆ. ಕಟ್ಟಲೆಂದೇ ಹೋರಾಡುತ್ತಾರೆ; ಹಾರಾಡುತ್ತಾರೆ. ಆದರೆ, ಅದು ಉದ್ಘಾಟನೆಯಾದ ಮೇಲೆ ಸ್ಮಾರಕ ಅಕ್ಷರಶಃ ಅನಾಥವಾಗುತ್ತದೆ. ಮತ್ತೆ ಆ ಸ್ಮಾರಕ ನೆನಪಿಗೆ ಬರುವುದು ವರ್ಷಕ್ಕೊಮ್ಮೆ ಬರುವ ವಿಶೇಷ ದಿನದಂದು ಮಾತ್ರ. ಆದರೆ, ಹೆಸ್ಕಾಂನ ಈ ಕಾರ್ಮಿಕ ಸ್ಮಾರಕ ನಿತ್ಯ ಕಾರ್ಮಿಕರಿಗೆ ಅವರ ಶ್ರಮದ ಮಹತ್ವ ಜಾಗೃತಿಗೊಳಿಸುತ್ತಿದೆ.

ಕಚೇರಿಗೆ ಬರುವ ಪ್ರತಿಯೊಬ್ಬ ಕಾರ್ಮಿಕ ಒಮ್ಮೆ ಈ ಸ್ಮಾರಕಕ್ಕೆ ನಮಿಸಿಯೇ ತನ್ನ ಕರ್ತವ್ಯಕ್ಕೆ ಅಣಿಯಾಗುತ್ತಾನೆ. ತನ್ಮೂಲಕ ಈ ಸ್ಮಾರಕ ಕಾರ್ಮಿಕರಿಂದ ನಿತ್ಯಾರಾಧನೆಗೊಳ್ಳುತ್ತದೆ. ಅದರಲ್ಲೊಂದು ಶ್ರಮದ ಶಕ್ತಿಯನ್ನು ಕಾರ್ಮಿಕರು ಕಾಣುತ್ತಿರುವುದು ಮತ್ತೂಂದು ವಿಶೇಷ.

•’ಮುಗಿವ ಕೈಗಳಿಗಿಂತ ದುಡಿಯುವ ಕೈಗಳೇ ಮೇಲು’

Advertisement

Udayavani is now on Telegram. Click here to join our channel and stay updated with the latest news.

Next