Advertisement
ಒಂಟಿ ಕಾಲಿನ ಓಟಗಾರನ ಜೀವನ ಪ್ರೀತಿದೇಹದ ಎಲ್ಲಾ ಅಂಗಗಳು ಸರಿಯಿದ್ದರೂ ಜೀವನದಲ್ಲಿ ಅದು ಸರಿ ಇಲ್ಲ, ಇದು ಸರಿ ಇಲ್ಲ ಎಂದು ಕೊರಗುವ ಅದೆಷ್ಟೋ ಜನರಿಗೆ ಉತ್ತರವಾಗಿ ನಿಲ್ಲುತ್ತಾರೆ ಈ ಒಂಟಿಕಾಲಿನ ಮ್ಯಾರಥಾನ್ ಓಟಗಾರ ಜಾವೆದ್ ಚೌಧರಿ. ಇತ್ತೀಚೆಗಷ್ಟೇ ಪುಣೆ ಹಾಫ್ ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾಗವಹಿಸಿದ ಬಳಿಕ ಒಂಟಿಕಾಲಿನ ಓಟಗಾರನೊಬ್ಬ ‘ಸೈರಾಟ್’ ಮರಾಠಿ ಚಿತ್ರದ ಜನಪ್ರಿಯ ಹಾಡಿಗೆ ಖುಷಿಯಿಂದ ಕುಣಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 24 ವರ್ಷ ಪ್ರಾಯದ ಜಾವೆದ್ ಚೌಧರಿ ಎಂಬ ಯುವಕ 3 ವರ್ಷಗಳ ಹಿಂದೆಯಷ್ಟೇ ಅಪಘಾತವೊಂದರಲ್ಲಿ ತನ್ನ ಬಲಕಾಲನ್ನು ಕಳೆದುಕೊಳ್ಳಬೇಕಾದ ದುರ್ದೈವಕ್ಕೆ ಒಳಗಾಗಬೇಕಾಯಿತು. ಆದರೆ ಕಾಲು ಹೋದರೇನಂತೆ ಜಾವದ್ ನಲ್ಲಿದ್ದ ಜೀವನೋತ್ಸಾಹ ಮಾತ್ರ ಸ್ವಲ್ಪವೂ ಬತ್ತಿಹೋಗಿರಲಿಲ್ಲ. ಹಾಗಾಗಿ ಇತ್ತೀಚೆಗೆ ನಡೆದ ಪುಣೆ ಹಾಫ್ ಮ್ಯಾರಥಾನ್ ಸ್ಪರ್ಧೆಯಲ್ಲಿ ಈತ ಭಾಗವಹಿಸಿ ಯಶಸ್ವಿಯಾಗಿ ಓಟ ಮುಗಿಸಿದ ಖುಷಿಗೆ ಜಾವೆದ್ ಕುಣಿದ ರೀತಿ ಜೀವನೋತ್ಸಾಹದ ಮಹಾಸಂಭ್ರಮಾಚರಣೆಯಂತಿತ್ತು.
ಝಾರ್ಖಂಡ್ ರಾಜ್ಯದ ಹಝಾರಿಭಾಗ್ ಎಂಬ ಹಳ್ಳಿಯಿಂದ ಮುಂಬಯಿಗೆ ಕೆಲಸ ಅರಸಿಕೊಂಡು ಬಂದ ಯುವಕ ರಾಜು ಯಾದವ್. 2001ರಲ್ಲಿ ತನ್ನ 13ನೇ ವಯಸ್ಸಿನಲ್ಲಿ ಈ ಹುಡುಗ ಮುಂಬಯಿಗೆ ಬರುತ್ತಾನೆ. ಈತ ಮಾಯಾನಗರಿಗೆ ಬಂದ ಉದ್ದೇಶ ಇಲ್ಲಿ ಯಾವುದಾದರೂ ಕೆಲಸ ಮಾಡಿ ಆ ಸಂಪಾದನೆಯ ಮೂಲಕ ತನ್ನ ಮನೆಯ ಪರಿಸ್ಥಿತಿಗೆ ಸಹಾಯ ಮಾಡುವುದಾಗಿತ್ತು. ಆಟವಾಡಿ ನಲಿಯಬೇಕಿದ್ದ ವಯಸ್ಸಿನಲ್ಲಿ ಈ ಹುಡುಗ ಇಲ್ಲಿನ ಚಹಾದ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಇಲ್ಲಿ ಈತ ಗ್ರಾಹಕರಿಗೆ ಚಹಾ ಕೊಡುವುದರಿಂದ ಹಿಡಿದು ಎಲ್ಲಾ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದ. ಅಲ್ಲಿಂದ ಬಳಿಕ ಆತನಿಗೆ ಗುಮಾಸ್ತ ಕೆಲಸವೊಂದು ಸಿಗುತ್ತದೆ. ಅಲ್ಲಿ ಎಲ್ಲರೂ ಕಂಪ್ಯೂಟರ್ ನಲ್ಲಿ ಕೆಲಸ ಮಾಡುತ್ತಿದ್ದುದನ್ನು ನೋಡುತ್ತಿದ್ದ ರಾಜು. ಅವರೆನ್ನಲ್ಲಾ ನೋಡುತ್ತಿದ್ದ ರಾಜುವಿಗೆ ತನಗೂ ಕಂಪ್ಯೂಟರ್ ಕಲಿಯಬೇಕೆಂಬ ಆಸೆ ಮೂಡುತ್ತದೆ. ಹೀಗಾಗಿ ತನ್ನ ಕೆಲಸ ಮುಗಿದ ಬಳಿಕ ಒಂದೆರಡು ಗಂಟೆಗಳನ್ನು ವಿನಿಯೋಗಿಸಿ ಕಂಪ್ಯೂಟರ್ ಭಾಷೆಗಳನ್ನು ಕಲಿಯಲಾರಂಭಿಸುತ್ತಾನೆ. ‘ನೀವೇನದರೂ ಮಾಡಬೇಕೆಂದಿದ್ದರೆ ಮೊದಲು ನಿಮ್ಮನ್ನು ಶಿಕ್ಷಿತರನ್ನಾಗಿಸಿಕೊಳ್ಳಿ..’ ಎಂಬ ಪಾಲಿಸಿ ಈತನದ್ದು. ಈ ಒಂದು ಯೋಚನೆ ಈತನ ಜೀವನವನ್ನೇ ಬದಲಾಯಿಸಿತು. ಕಷ್ಟಪಟ್ಟು ಮಾಡಿದ ಪ್ರಯತ್ನ ರಾಜುವನ್ನು ಒಬ್ಬ ಯಶಸ್ವೀ ವೆಬ್ ಡೆವಲಪರ್ ನನ್ನಾಗಿಸಿದೆ. ಇಲ್ಲಿದೆ ಈತನ ಸಂಕ್ಷಿಪ್ತ ಸಾಧನಾ ಕಥೆಯ ವಿಡಿಯೋ. ಸ್ಟ್ರೀಟ್ ಬಾಯ್ ಲೇಖಕನಾದ ಸ್ಪೂರ್ತಿಯ ಕಥೆ…
ತಾನು ಕೆಲಸ ಮಾಡುತ್ತಿದ್ದ ಚಹಾ ಅಂಗಡಿಯಲ್ಲಿ ಚಹಾ ಲೋಟ ಒಡೆದು ಹಾಕಿದ ಕಾರಣಕ್ಕೆ ಮಾಲಿಕನಿಂದ ಬೀಳಬಹುದಾಗಿದ್ದ ಒದೆಗೆ ಹೆದರಿ ಹೇಳದೆ ಕೇಳದೆ ಓಡಿಹೋಗಿ ಮುಂಬಯಿಯ ಬೀದಿ ಸೇರಿದ ‘ಸ್ಟ್ರೀಟ್ ಬಾಯ್’ ಅಮೀನ್ ಶೇಖ್ ಅವರ ಹೋರಾಟದ ಜೀವನವೇ ಒಂದು ಸ್ಪೂರ್ತಿಯ ಸೆಲೆ. ಬೀದಿ ಹುಡುಗನಾಗಿ ಬದಲಾದ ಈತ ವಿವಿಧ ರೀತಿಯ ದುಷ್ಚಟಗಳಿಗೆ ಬಲಿಯಾಗಿದ್ದ ಸಂದರ್ಭದಲ್ಲಿ ಅದೊಂದು ಮಹಾತಾಯಿ ಮತ್ತು ಸೇವಾಸಂಸ್ಥೆಯ ನೆರವಿನ ಹಸ್ತ ಸಿಗದೇ ಹೋಗುತ್ತಿದ್ದರೆ, ಶೇಖ್ ಅಮೀನ್ ಹೆಳುವಂತೆ ಆತ ಇವತ್ತು ಯಾವುದೋ ಅಂಡರ್ ವರ್ಲ್ಡ್ ಗುಂಪಿನೊಂದಿಗೆ ಸೇರಿಕೊಂಡೋ ಇಲ್ಲವೇ ಇನ್ನ್ಯಾವುದೇ ಸಮಾಜಘಾತುಕ ಶಕ್ತಿಯಾಗಿ ಬದಲಾಗಿ ಬೀದಿ ಹೆಣವಾಗಿ ಹೋಗುವ ಸಾಧ್ಯತೆಗಳಿದ್ದವು. ಆದರೆ ‘ಸ್ನೇಹ ಸದನ’ವೆಂಬ ಪ್ರೀತಿ ಮನೆಯ ಆಶ್ರಯ ಮತ್ತು ಬದುಕಿನ ಭರವಸೆ ಶೇಖ್ ಅಮೀನ್ ಅವರನ್ನು ಇವತ್ತು ಒಬ್ಬ ಉತ್ತಮ ಲೇಖಕ ಹಾಗೂ ಯಶಸ್ವೀ ಉದ್ದಿಮೆದಾರನನ್ನಾಗಿಸಿದೆ. ಈ ಕಥೆ ಹಳೆಯದಾದರೂ ಜೀವನದಲ್ಲಿ ಭರವಸೆ ಕಳೆದುಕೊಂಡಿರುವ ಅದೆಷ್ಟೋ ಜನರಿಗೆ ಈತನ ಸಾಧನಾಗಾಥೆ ನಿತ್ಯ ಹೊಸತು.
Related Articles
Advertisement