ಬೆಂಗಳೂರು: ಸಂಚಾರ ನಿಯಮಗಳ ಉಲ್ಲಂಘನೆಗೆ ವಿಧಿಸಲಾಗುತ್ತಿರುವ ದುಬಾರಿ ದಂಡದ ಅಸ್ತ್ರ, ಪೊಲೀಸ್ ಇನ್ಸ್‌ಪೆಕ್ಟರ್ ಮೇಲೂ ಪ್ರಯೋಗವಾಗಿದೆ.
ನೋ ಪಾರ್ಕಿಂಗ್ ಸ್ಥಳದಲ್ಲಿ ಇಲಾಖೆಯ ಜೀಪು ನಿಲ್ಲಿಸಿದ್ದಕ್ಕೆ ಸದಾಶಿವನಗರ ಸಂಚಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಶಿವಕುಮಾರ್‌ಗೆ ಸಾರ್ವಜನಿಕರಿಗೆ ವಿಧಿಸುವ ದಂಡಕ್ಕಿಂತ ಎರಡು ಪಟ್ಟು (ಎರಡು ಸಾವಿರ ರೂ.) ದಂಡ ವಿಧಿಸಲಾಗಿದೆ.
ಸದಾಶಿವನಗರ ಠಾಣೆಯ ಜಂಕ್ಷನ್ ಸಮೀಪ ನೋ ಪಾರ್ಕಿಂಗ್ (ಪಾರ್ಕಿಂಗ್ ನಿಷೇಧಿತ) ಸ್ಥಳದಲ್ಲಿ ಜೀಪು ನಿಲ್ಲಿಸಿದ್ದ ಪರಿಣಾಮ ಇತರ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿತ್ತು. ಈ ವಿಚಾರ ಗೊತ್ತಾದ ಕೂಡಲೇ ಇನ್ಸ್‌ಪೆಕ್ಟರ್‌ಗೆ 2000 ರೂ. ದಂಡ ವಿಧಿಸಲಾಗಿದೆ. ಜತೆಗೆ, ಇನ್ಸ್‌ಪೆಕ್ಟರ್ ಹಾಗೂ ಜೀಪು ಚಾಲಕ ಡಿ.ಎಸ್.ನಾಗೇಂದ್ರ ವಿರುದ್ಧ ಇಲಾಖಾ ಶಿಸ್ತು ಕ್ರಮ ಜರುಗಿಸುವುದಾಗಿ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ರವಿಕಾಂತೇಗೌಡ ತಿಳಿಸಿದ್ದಾರೆ.
20.55 ಲಕ್ಷ ರೂ. ದಂಡ ಸಂಗ್ರಹ: ಸಂಚಾರ ನಿಯಮಗಳ ಉಲ್ಲಂಘನೆ ಪ್ರಕರಣಗಳಿಂದ ಸಂಚಾರ ಪೊಲೀಸರಿಗೆ ಭಾರೀ ಪ್ರಮಾಣದ ದಂಡ ಹರಿದುಬರುತ್ತಿದೆ. ಸೆ.11ರ ಬೆಳಗ್ಗೆ 10 ಗಂಟೆಯಿಂದ ಗುರುವಾರ ಬೆಳಗ್ಗೆ 10 ಗಂಟೆವರೆಗೆ ಅಂದರೆ, ಕೇವಲ 24 ಗಂಟೆಯಲ್ಲಿ ಬರೋಬ್ಬರಿ 20.55 ಲಕ್ಷ ರೂ. ದಂಡ ಸಂಗ್ರಹವಾಗಿದೆ. ಇದರಲ್ಲಿ ಹೆಲ್ಮೆಟ್ ರಹಿತ ಬೈಕ್ ಸವಾರರು ಪಾವತಿಸಿರುವ ಮೊತ್ತ ಸಿಂಹ ಪಾಲು ಪಡೆದುಕೊಂಡಿದೆ.
ಹಿಂಬದಿ ಸವಾರ ಹೆಲ್ಮೆಟ್ ಧರಿಸದ ಸಂಬಂಧ 967 ಕೇಸ್ ದಾಖಲಾಗಿ, 2.45 ಲಕ್ಷ ರೂ., ಬೈಕ್ ಸವಾರ ಹೆಲ್ಮೆಟ್ ಧರಿಸದೆ ಚಾಲನೆ ಮಾಡಿದ 1274 ಕೇಸ್‌ಗಳಲ್ಲಿ 2.82 ಲಕ್ಷ ರೂ. ಸಂಗ್ರಹವಾಗಿದೆ.
ನಿಗದಿಗಿಂತ ಹೆಚ್ಚು ತೂಕದ ಸರಕು ಸಾಗಣೆ ಮಾಡಿದ ಸಂಬಂಧ 258 ಕೇಸು ದಾಖಲಾಗಿದ್ದು, 2.58 ಲಕ್ಷ ರೂ. ದಂಡ, ಸಿಗ್ನಲ್ ಜಂಪ್ ಮಾಡಿದವರಿಂದ 1.49 ಲಕ್ಷ ರೂ., ನಿಷೇಧಿತ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲ್ಲಿಸಿದವರಿಂದ 1.58 ಲಕ್ಷ ರೂ., ಅತಿ ವೇಗದ ಚಾಲನೆ ಕೇಸ್‌ಗಳಲ್ಲಿ 1.71 ಲಕ್ಷ ರೂ. ಸಂಗ್ರಹಿಸಲಾಗಿದೆ. ಒಟ್ಟಾರೆಯಾಗಿ 55 ಪ್ರಕಾರಗಳ ಸಂಚಾರ ನಿಯಮಗಳನ್ನು ಉಲ್ಲಂಘಿಸಿದವರಿಂದ 20,55,200 ರೂ. ದಂಡ ಸಂಗ್ರಹವಾಗಿದೆ ಎಂದು ಸಂಚಾರ ಪೊಲೀಸ್ ವಿಭಾಗ ತಿಳಿಸಿದೆ.