ಕನಕಪುರ: ಸ್ಮಶಾನವಿಲ್ಲದೆ ಪರದಾಡುತ್ತಿದ್ದ ಮೂರು ಗ್ರಾಮಗಳಿಗೆ ಭೇಟಿ ನೀಡಿದ ತಹಶೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ಸ್ಮಶಾನಕ್ಕೆ ಭೂಮಿ ಗುರುತಿಸಲು ಗೋಮಾಳ ಪರೀಶಿಲನೆ ನಡೆಸಿದರು.
ತಾಲೂಕಿನ ಸಾತನೂರು ಹೋಬಳಿಯ ಕುರುಬರಹಳ್ಳಿ ಜನರಿಗೆ ರುದ್ರಭೂಮಿ ಇಲ್ಲದೇ ಪರದಾಡವ ಪರಿಸ್ಥಿತಿ ನಿರ್ಮಾಣವಾಗಿತ್ತು. ಯಾರಾದರೂ ಮೃತ ಪಟ್ಟರೆ ಭೂಮಿ ಉಳ್ಳವರು ತಮ್ಮ ಜಮೀನಿನಲ್ಲಿ ಅಂತ್ಯಕ್ರಿಯೆ ನಡಸಿದರೆ, ಭೂಮಿ ಇಲ್ಲದವರು ಮೃತದೇಹವನ್ನು ಅಂತ್ಯಕ್ರಿಯೆಗೆ ನರಕಯಾತನೆ ಅನುಭವಿಸುತ್ತಿದ್ದರು.
2 ಎಕರೆ ಭೂಮಿ ಸರ್ವೆ:ಸ್ಮಶಾನಕ್ಕೆ ಭೂಮಿ ಮಂಜೂರು ಮಾಡುವಂತೆ ಈ ಹಿಂದೆ ಇದ್ದ ತಹಶೀಲ್ದಾರ್ ಅವರಿಗೆ ಗ್ರಾಮಸ್ಥರು ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ನವೀನ್ ಮತ್ತು ಪದಾಧಿಕಾರಿಗಳು ತಹಶೀಲ್ದಾರ್ ವರ್ಷಾಒಡೆಯರ್ ಅವರಿಗೆ ಮನವಿ ಸಲ್ಲಿಸಿತ್ತು. ಮನವಿಗೆ ಸ್ಪಂದಿಸಿದ ತಹಶೀಲ್ದಾರ್ ನೇತೃತ್ವದಲ್ಲಿ ಕಸಬ ಹೋಬಳಿ ಆರ್‌ಐ ಶಿವರುದ್ರ, ಸಾತನೂರು ಆರ್‌ಐ ಚನ್ನೇಗೌಡ, ಮಹಮ್ಮದ್ ಮನ್ಸೂರ್, ವಿ.ಎ.ಮಂಜು, ಶುಕ್ರವಾರ ತಾಲೂಕಿನ ಕುರುಬರಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದ ಸರ್ವೆ ನಂ.118 ರ ಸರ್ಕಾರಿ ಗೋಮಾಳದಲ್ಲಿ 2ಎಕರೆ ಭೂಮಿ ಸರ್ವೆ ನಡೆಸಿ ಸ್ಕೆಚ್ ನೀಡುವಂತೆ ಆರ್‌ಐ, ವಿಎಗಳಿಗೆ ಸೂಚನೆ ನೀಡಿದ್ದಾರೆ. ಪಕ್ಕದ ಗ್ರಾಮಗಳಲ್ಲೂ ಸ್ಮಶಾನ ಇಲ್ಲದಿರುವ ಮಾಹಿತಿ ತಿಳಿದ ಅಧಿಕಾರಿಗಳು ತೆಂಗನಾಯಕನಹಳ್ಳಿ ಗೋಮಾಳದ ಸರ್ವೆ ನಂ.36 ಮತ್ತು ಸೋಮದ್ಯಾಪನಹಳ್ಳಿ ಸರ್ವೆನಂ.65 ರಲ್ಲಿ 2 ಎಕರೆ ಭೂಮಿ ಪರಿಶೀಲನೆ ನಡೆಸಿ ಲಭ್ಯತೆ ಇದ್ದರೆ ಸ್ಮಶಾನದ ಆದ್ಯತೆ ಮೇರೆಗೆ ಮಂಜೂರು ಮಾಡುವುದಾಗಿ ತಿಳಿಸಿದ್ದಾರೆ.
ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ನವೀನ್, ಜಿಲ್ಲಾ ಮುಖಂಡ ರಘುನಂದನ್, ಗ್ರಾಮಸ್ಥರಾದ ನವೀನ್, ನಿಖೀಲ್, ವೆಂಕಟೆಶ್, ಮಹದೇಶ್ ಉಪಸ್ಥಿತರಿದ್ದರು.