Advertisement

ಕನ್ಸಲ್ಟಂಟ್ ಕಂಪನಿಯಿಂದ ವೆಲ್ಲಾರ ಜಂಕ್ಷನ್‌ ಪರಿಶೀಲನೆ

02:38 PM Jul 05, 2019 | Team Udayavani |

ಬೆಂಗಳೂರು: ನೆಮ್ಮದಿ ಕದಡುತ್ತಿರುವ ‘ನಮ್ಮ ಮೆಟ್ರೋ’ ಎರಡನೇ ಹಂತದ ಸುರಂಗ ಮಾರ್ಗ ಯೋಜನೆಗೆ ಆರ್ಥಿಕ ನೆರವು ನೀಡಬಾರದು ಎಂದು ಆಲ್ ಸೇಂಟ್ಸ್‌ ಚರ್ಚ್‌ ಸದಸ್ಯರು, ಯೂರೋಪಿಯನ್‌ ಇನ್‌ವೆಸ್ಟ್‌ಮೆಂಟ್ ಬ್ಯಾಂಕ್‌ (ಇಐಬಿ)ಗೆ ಮನವಿ ಸಲ್ಲಿಸಿದ ಮೇರೆಗೆ ಗುರುವಾರ, ಬ್ಯಾಂಕಿನ ಪರವಾಗಿ ಇಆರ್‌ಪಿ ಕನ್ಸಲ್ಟಂಟ್ ಕಂಪನಿ ಪ್ರತಿನಿಧಿಗಳು ಸ್ಥಳ ಪರಿಶೀಲನೆ ನಡೆಸಿದರು.

Advertisement

ಇಆರ್‌ಪಿ ಕನ್ಸಲ್ಟಂಟ್‌ನ ಟೆಂಡೋಲ್ಕರ್‌ ಸೇರಿದಂತೆ ಮೂವರು ಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ, ಮೆಟ್ರೋ ಸುರಂಗ ಮಾರ್ಗ ನಿರ್ಮಾಣದಿಂದ ಆಗಲಿರುವ ಸಮಸ್ಯೆಗಳ ಕುರಿತು ಚರ್ಚ್‌ ಸದಸ್ಯರು ಮತ್ತು ಸಮುದಾಯದ ಪ್ರತಿನಿಧಿಗಳೊಂದಿಗೆ ಚರ್ಚಿಸಿದರು. ಸುಮಾರು ಒಂದು ತಾಸು ಸಮಾಲೋಚನೆ ನಂತರ ಶೀಘ್ರದಲ್ಲೇ ಈ ಸಂಬಂಧ ಯೂರೋಪಿಯನ್‌ ಇನ್‌ವೆಸ್ಟ್‌ಮೆಂಟ್ ಬ್ಯಾಂಕ್‌ಗೆ ವರದಿ ಸಲ್ಲಿಸುವುದಾಗಿ ಹೇಳಿದರು.

ಇದಕ್ಕೂ ಮುನ್ನ ಚರ್ಚ್‌ ಸದಸ್ಯ ಎಬೆನಿಜರ್‌ ಪ್ರೇಮ್‌ಕುಮಾರ್‌ ಮಾತನಾಡಿ, ಮೆಟ್ರೋ ಯೋಜನೆಗೆ ಈಗಾಗಲೇ ಒಂದು ಎಕರೆ ಜಾಗವನ್ನು ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ (ಬಿಎಂಆರ್‌ಸಿಎಲ್) ನೀಡಲಾಗಿದೆ. ಇದಲ್ಲದೆ, ಚರ್ಚ್‌ ಆವರಣದ ಕೆಳಗೆ ನಿಲ್ದಾಣ ನಿರ್ಮಾಣಕ್ಕೆ ನಿಗಮವು ತಾತ್ಕಾಲಿಕ ಜಾಗ ಕೇಳುತ್ತಿದೆ. ಆದರೆ, ಇದರಿಂದ 80ಕ್ಕೂ ಹೆಚ್ಚು ಹಳೆಯ ಮರಗಳ ಮಾರಣಹೋಮ ಆಗುತ್ತದೆ. ಅಂಗವಿಕಲ ಮಕ್ಕಳ ಶಾಲೆ ಇದ್ದು, ಅದನ್ನೂ ತೆರವುಗೊಳಿಸಬೇಕಾಗುತ್ತದೆ. ಪ್ರವೇಶದ್ವಾರವನ್ನು ವರ್ಷಗಟ್ಟಲೆ ಮುಚ್ಚಬೇಕಾಗುತ್ತದೆ. ಸಂಚಾರದಟ್ಟಣೆ ಹೆಚ್ಚಾಗುತ್ತದೆ. ಪ್ರಾರ್ಥನೆಗೆ ಬರುವ ಜನರಿಗೆ ಸಮಸ್ಯೆ ಆಗಲಿದೆ ಎಂದು ಇಆರ್‌ಪಿ ಕನ್ಸಲ್ಟಂಟ್ ಕಂಪನಿಯ ಪ್ರತಿನಿಧಿಗಳಿಗೆ ಹೇಳಿದರು.

ಅಷ್ಟಕ್ಕೂ ಸುರಂಗ ಮಾರ್ಗ ನಿರ್ಮಾಣಕ್ಕೆ ನಮ್ಮ ವಿರೋಧ ಇಲ್ಲ. ಆದರೆ, ನಿಲ್ದಾಣ ನಿರ್ಮಾಣ ಹಾಗೂ ಅದಕ್ಕಾಗಿ ಮರಗಳನ್ನು ಕಡಿಯುವುದಕ್ಕೆ ವಿರೋಧ ಇದೆ. ನಮ್ಮ ನೆಮ್ಮದಿ ಕದಡಿರುವವರಿಗೆ ಇಐಬಿ ಯಾವುದೇ ಕಾರಣಕ್ಕೂ ಆರ್ಥಿಕ ನೆರವು ನೀಡಬಾರದು ಎಂದು ಕೋರಿದರು. ಇದಕ್ಕೆ ದನಿಗೂಡಿಸಿದ ಮತ್ತೂಬ್ಬ ಸದಸ್ಯ, ನಗರಕ್ಕೆ ಮೆಟ್ರೋ ಬೇಕು. ಹಾಗಂತ ಎಲ್ಲವನ್ನೂ ನಾಶಪಡಿಸಿ, ಮೆಟ್ರೋ ಕಟ್ಟುವುದಕ್ಕೆ ನಮ್ಮ ಸಹಮತ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸದಸ್ಯೆಯೊಬ್ಬರು ಮಾತನಾಡಿ, ‘ಚರ್ಚ್‌ ಕಟ್ಟಡಕ್ಕೆ 150 ವರ್ಷಗಳ ಇತಿಹಾಸ ಇದೆ. ಮರಗಳು ಮತ್ತು ಶಾಲೆ ತೆರವುಗೊಳ್ಳುವುದರ ಜತೆಗೆ ಸುರಂಗದಲ್ಲಿ ಟನಲ್ ಬೋರಿಂಗ್‌ ಯಂತ್ರ ಹಾದುಹೋಗುವುದರಿಂದ ಚರ್ಚ್‌ಗೆ ಧಕ್ಕೆ ಆಗುವ ಸಾಧ್ಯತೆಯೂ ಇದೆ’ ಎಂದರು. ಟೆಂಡೋಲ್ಕರ್‌ ಮಾತನಾಡಿ, ‘ನಾವು ಬಿಎಂಆರ್‌ಸಿಎಲ್ ಪ್ರತಿನಿಧಿಗಳಾಗಿ ಬಂದಿಲ್ಲ. ಮೂರನೇ ವ್ಯಕ್ತಿಯಾಗಿ ಇದರ ಪರಿಶೀಲನೆಗೆ ಬಂದಿದ್ದೇವೆ. ಯೋಜನೆಯಿಂದಾಗುವ ಸಾಧಕ-ಭಾದಕಗಳನ್ನು ಪರಿಶೀಲಿಸಿ, ವರದಿ ಸಲ್ಲಿಸಲಾಗುವುದು’ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next