Advertisement

ಸಮವಸ್ತ್ರ ಧರಿಸಿಯೇ ತಪಾಸಣೆ: ಪೊಲೀಸರ ಹೇಳಿಕೆ

01:16 AM Sep 14, 2019 | mahesh |

ಉಡುಪಿ: ಗುರುವಾರ ಉಡುಪಿ ಮೀನು ಮಾರುಕಟ್ಟೆ ರಸ್ತೆಯಲ್ಲಿ ಸಂಚಾರ ಠಾಣಾ ಪೊಲೀಸರು ಸಮವಸ್ತ್ರ ಧರಿಸಿಯೇ ವಾಹನ ತಪಾಸಣೆ ನಡೆಸಿ ನಿಯಮ ಉಲ್ಲಂಸಿದವರ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಸ್ಪಷ್ಟಪಡಿಸಿದೆ.

Advertisement

ಈ ಪ್ರಕರಣದಲ್ಲಿ ಸಂಚಾರ ಪೊಲೀಸರ ಜೀಪು ತಡೆದು ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಮಹಮ್ಮದ್‌ ಹಾರೀಸ್‌ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.

ಸಂಚಾರ ಪೊಲೀಸ್‌ ಎಸ್‌ಐ ಮತ್ತು ಸಿಬಂದಿ ಸಮವಸ್ತ್ರದಲ್ಲಿದ್ದುಕೊಂಡೇ ವಾಹನಗಳನ್ನು ತಪಾಸಣೆ ನಡೆಸಿ ಪ್ರಕರಣ ದಾಖಲಿಸಿ ದಂಡ ಸಂಗ್ರಹಿಸುತ್ತಿದ್ದರು. ಅಲ್ಲಿ 11 ಪ್ರಕರಣಗಳನ್ನು ದಾಖಲಾಗಿದ್ದವು. ಇದೇ ವೇಳೆ ಹೆಲ್ಮೆಟ್‌ ಧರಿಸದೆ ಬಂದ ಬೈಕ್‌ ಸವಾರನನ್ನು ತಡೆದು ನಿಲ್ಲಿಸಲಾಯಿತು. ಆಗ ಆತ ಮೊಬೈಲ್‌ನಲ್ಲಿ ಯಾರಿಗೋ ಕರೆ ಮಾಡಿದ. ಸ್ವಲ್ಪ ಹೊತ್ತಿನಲ್ಲಿ ಇನ್ನೋರ್ವ ವ್ಯಕ್ತಿ(ಮಹಮ್ಮದ್‌ ಹಾರಿಸ್‌) ಸ್ಥಳಕ್ಕೆ ಬಂದು ಎಸ್‌ಐ ಇದ್ದ ಜೀಪಿನ ಎದುರು ನಿಂತು “ಇಲ್ಲಿ ಯಾಕೆ ಕೇಸು ಹಾಕುವುದು? ನೀವು ಕೆಳಗಿಳಿಯಿರಿ’ ಎಂದು ಉಪ ನಿರೀಕ್ಷಕರಿಗೆ ಕೈ ತಾಗಿಸಿ ಕೂಗಾಡಲು ಆರಂಭಿಸಿದ.

ಆಗ ಸ್ಥಳದಲ್ಲಿ ಜನ ಸೇರಿದರು. ಇದನ್ನು ಗಮನಿಸಿದ ಉಪ ನಿರೀಕ್ಷಕರು ನಗರ ಠಾಣೆಗೆ ಮಾಹಿತಿ ನೀಡಿದರು. ನಗರ ಠಾಣೆಯ ಇಬ್ಬರು ಪೊಲೀಸರು ಸಂಚಾರ ಪೊಲೀಸರ ನೆರವಿಗಾಗಿ ಬಂದಿದ್ದರು. ಅದರಲ್ಲಿ ಓರ್ವ ಸಿಬಂದಿ ಹಿಂದಿನ ದಿನ ರಾತ್ರಿ ಕರ್ತವ್ಯ ನಿರ್ವಹಿಸಿದವರಾಗಿದ್ದು, ಗುರುವಾರವೂ ರಾತ್ರಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಅವರು ಸಾದಾ ಉಡುಪಿನಲ್ಲಿದ್ದರು. ಅವರು ಕೂಡ ಸ್ಥಳಕ್ಕೆ ಬಂದು ಕೂಗಾಡುತ್ತಿದ್ದ ವ್ಯಕ್ತಿಯನ್ನು ಸಮಾಧಾನಪಡಿಸಲು ಯತ್ನಿಸಿದರು. ಅವರಿಗೂ ಆ ವ್ಯಕ್ತಿ ಗದರಿದ್ದಾನೆ. ಅನಂತರ ಆತನು ಮೊದಲು ಸವಾರಿ ಮಾಡುತ್ತಿದ್ದ ವ್ಯಕ್ತಿಯನ್ನು ಹಿಂಬದಿ ಸವಾರನನ್ನಾಗಿ ಕುಳ್ಳಿರಿಸಿಕೊಂಡು ಅಲ್ಲಿಂದ ಬೈಕಿನಲ್ಲಿ ಹೊರಟು ಹೋಗಿದ್ದಾನೆ. ಪೊಲೀಸರ ಕರ್ತವ್ಯದಲ್ಲಿ ಯಾವುದೇ ಲೋಪವಾಗಿಲ್ಲ’ ಎಂದು ಎಸ್‌ಪಿ ಕಚೇರಿ ಅಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕರ್ತವ್ಯಕ್ಕೆ ಅಡ್ಡಿ
ಇಲಾಖೆಯ ಜೀಪಿಗೆ ಅಡ್ಡ ಬಂದು “ನೀವು ಇಲ್ಲಿ ಯಾಕೆ ಕೇಸು ಹಾಕುವುದು? ಕೆಳಗೆ ಇಳಿಯಿರಿ’ ಎಂದು ಹೇಳಿ ಉಪನಿರೀಕ್ಷಕರನ್ನು ಹೆದರಿಸುವಂತೆ ಜೀಪಿನ ಒಳಗೆ ಕೈ ಹಾಕಿ ಕೂಗಾಡಿದಾತನನ್ನು ಮಹಮ್ಮದ್‌ ಹಾರಿಸ್‌ ಎಂದು ಗುರುತಿಸಲಾಗಿದೆ. ಆತ ಬೈಕಿನ ದಾಖಲೆಪತ್ರಗಳನ್ನು ಪರಿಶೀಲಿಸಲು ಅಡ್ಡಿಪಡಿಸಿದ್ದಾನೆ. ಪೊಲೀಸರ ಜೀಪು ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ. ಆತನ ವಿರುದ್ಧ ನಗರ ಠಾಣೆಯಲ್ಲಿ ಕಲಂ 353 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next