Advertisement

ದೇಗುಲದ ಅಭಿವೃದ್ಧಿ ಕಾಮಗಾರಿ ಪರಿಶೀಲನೆ

01:37 AM Jul 28, 2022 | Team Udayavani |

ಕೊಲ್ಲೂರು: ರಾಜ್ಯ ಧಾರ್ಮಿಕ ದತ್ತಿ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ ಅವರು ಸಕು ಟುಂಬಿಕರಾಗಿ ಬುಧವಾರ ಮಧ್ಯಾಹ್ನ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ ಆಗಮಿಸಿ ಶ್ರೀದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಆಬಳಿಕ ದೇಗುಲದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದರು.

Advertisement

ಕೊಳಚೆ ನೀರನ್ನು ಅಗ್ನಿತೀರ್ಥ ಹಾಗೂ ಸೌಪರ್ಣಿಕ ನದಿಗೆ ಬಿಡು ತ್ತಿರುವ ಬಗ್ಗೆ ಗ್ರಾಮಸ್ಥರು ನೀಡಿದ ದೂರಿನನ್ವಯ ಸಮಿತಿ ಹಾಗೂ ಅಧಿಕಾರಿಗಳೊಡನೆ ಚರ್ಚೆ ನಡೆಸಿದ ಆಯುಕ್ತೆ ಇದಕ್ಕೊಂದು ಶಾಶ್ವತ ಪರಿಹಾರ ಒದಗಿಸುವ ಜತೆಗೆ ನದಿ ನೀರಿನ ಪಾವಿತ್ರ್ಯತೆ ಕಾಪಾಡುವ ಬಗ್ಗೆ ಕೈಗೊಳ್ಳಬೇಕಾದ ಕ್ರಮ ಹಾಗೂ ಪರಿಸರ ಮಾಲಿನ್ಯವಾಗದಂತೆ ಗ್ರಾ.ಪಂ. ಹಾಗೂ ಇಲಾಖೆ ಯಾವ ರೀತಿ ನಿರ್ವಹಣೆ ಮಾಡಬೇಕು ಎನ್ನುವುದರ ಬಗ್ಗೆ ಸುದೀರ್ಘ‌ ಚರ್ಚೆ ನಡೆಸಿದರು.

ಒಳಚರಂಡಿ ಹಾಗೂ ಕುಡಿಯುವ ನೀರಿನ ಸಂಪರ್ಕ, ಎಸ್‌ಟಿಪಿ ಸಂಪರ್ಕ ವ್ಯವಸ್ಥೆ ಬಗ್ಗೆ ಗ್ರಾ. ಪಂ. ಹಾಗೂ ಯುಜಿಡಿ ನಡುವಿನ ವಿಚಾರದ ಬಗ್ಗೆ ಕೂಡ ಚರ್ಚೆ ನಡೆಯಿತು. ಗೋಬರ್ದನ್‌ ಯೋಜನೆಯಡಿ ಹಸಿ ಕಸದ ವಿಲೇವಾರಿ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಅಷ್ಟ ಬಂಧ ಬ್ರಹ್ಮಕಲಶೋತ್ಸವ ನಡೆಸುವ ಬಗ್ಗೆ ಆಡಳಿತ ಮಂಡಳಿಯವರು ಅದರ ಖರ್ಚುವೆಚ್ಚ ಭರಿಸುವಲ್ಲಿ ಧಾರ್ಮಿಕ ದತ್ತಿ ಇಲಾಖೆ ಕ್ರಮಕೈಗೊಳ್ಳಬೇಕೆಂದು ಸೂಚಿಸಿದಾಗ ಆಯುಕ್ತೆ 2 ಕೋಟಿ ರೂ. ಇಲಾಖೆ ನೀಡಬಹುದು ಎಂದರು.

ಗ್ರಾ.ಪಂ.ಅಧ್ಯಕ್ಷ ಶಿವರಾಮ ಕಷ್ಣ ಭಟ್‌, ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಕೆರಾಡಿ, ಕಾರ್ಯನಿರ್ವಹಣಾಧಿಕಾರಿ ಮಹೇಶ, ಉಪಕಾರ್ಯನಿರ್ವಹಣಾಧಿಕಾರಿ ಗೋವಿಂದ ನಾಯ್ಕ, ಸಮಿತಿ ಸದಸ್ಯರಾದ ಡಾ| ಅತುಲ್‌ ಕುಮಾರ್‌ ಶೆಟ್ಟಿ, ಜಯಾನಂದ ಹೋಬಳಿದಾರ, ಗೋಪಾಲಕೃಷ್ಣನಾಡ, ಶೇಖರ ಪೂಜಾರಿ, ಸಂಧ್ಯಾ ರಮೇಶ, ರತ್ನ ಆರ್‌. ಕುಂದರ್‌, ಗಣೇಶ ಕಿಣಿ, ಬೆಳ್ವೆ ಗ್ರಾ.ಪಂ. ಅಧ್ಯಕ್ಷ ಶಿವರಾಮ ಕೃಷ್ಣ ಭಟ್‌, ಉಪಾಧ್ಯಕ್ಷ ಹರೀಶ ಶೆಟ್ಟಿ, ಪಿಡಿಒ ರುಕ್ಕನಗೌಡ, ದೇಗುಲದ ಎಂಜಿನಿಯರ್‌ ಪ್ರದೀಪ ಮುಂತಾ ದವರು ಉಪಸ್ಥಿತರಿದ್ದರು.

ನವಗ್ರಹ ಚಂಡಿಕಾ ಹೋಮ
ಅಭಿವೃದ್ಧಿ ಪರಿಶೀಲನೆ ಸಭೆಯ ಅನಂತರ ಸಿಂಧೂರಿ ಅವರು ನವಗ್ರಹ ಚಂಡಿಕಾ ಹೋಮದ ಸಂಕಲ್ಪದಲ್ಲಿ ಪಾಲ್ಗೊಂಡರು. ಗುರುವಾರ ನವಗ್ರಹ ಚಂಡಿಕಾ ಹೋಮದ ಪೂರ್ಣಾಹುತಿಯಲ್ಲಿ ಪತಿ ಹಾಗೂ ಪುತ್ರಿಯೊಂದಿಗೆ ಭಾಗವಹಿಸುವರು.

Advertisement
Advertisement

Udayavani is now on Telegram. Click here to join our channel and stay updated with the latest news.

Next