ಬಳ್ಳಾರಿ: ಕರ್ನಾಟಕ- ಆಂಧ್ರಪ್ರದೇಶದ ಗಡಿ ಗುರುತು ನಾಶ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಡೆಹರಾಡೂನ್‌ನ ಸರ್ವೇ ಆಫ್ ಇಂಡಿಯಾದ ಅಧಿಕಾರಿಗಳ ತಂಡ, ಅಂತಾರಾಜ್ಯಗಳಿಗೆ ಹೊಂದಿಕೊಂಡಿರುವ ವಿಭೂತಿಗುಡ್ಡ ಗಣಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಸರ್ವೇ ಆಫ್ ಇಂಡಿಯಾದ ಡೈರೆಕ್ಟರ್ ಆಫ್ ಜನರಲ್ ಪವನ್ ಕುಮಾರ್ ಪಾಂಡೆ ನೇತೃತ್ವದ ಸುಮಾರು 20ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಮಂಗಳವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ನಗರಕ್ಕೆ ಆಗಮಿಸಿತು. ಬಳಿಕ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ರಾಜ್ಯದ ಸರ್ವೇ ಸೆಟ್ಲಮೆಂಟ್ ಕಮಿಷನರ್ ಮನೀಷ್ ಮೌದ್ಗಿಲ್, ಅರಣ್ಯ ಇಲಾಖೆಯ ಸಿಸಿಎಫ್ ಬಿಸ್ವಾಜಿತ್ ಮಿಶ್ರಾ ಸೇರಿದಂತೆ ಇತರೆ ಅಧಿಕಾರಿಗಳೊಂದಿಗೆ ಕೆಲ ಕಾಲ ಸಭೆ ನಡೆಸಿದರು. ನಂತರ ಮಧ್ಯಾಹ್ನ 3.30ರ ಸುಮಾರಿಗೆ ತಾಲೂಕಿನ ಬೆಳಗಲ್ ಸಮೀಪದ ವಿಭೂತಿಗುಡ್ಡ ಗಣಿ ಪ್ರದೇಶಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ವೇಳೆ ಮಳೆ ಸುರಿದ ಹಿನ್ನೆಲೆಯಲ್ಲಿ ಕೇವಲ ಒಂದೇ ಪ್ರದೇಶಕ್ಕೆ ಭೇಟಿ ನೀಡಿ ನಗರಕ್ಕೆ ವಾಪಸ್ ಆಗಮಿಸಿತು.
ಪುನಃ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಸರ್ವೇ ಆಫ್ ಇಂಡಿಯಾದ ಅಧಿಕಾರಿಗಳು, ಸಂಜೆ 6.30 ರಿಂದ ರಾತ್ರಿ 8 ಗಂಟೆಯವರೆಗೆ ಅಂತಾರಾಜ್ಯಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಗಡಿ ಸರ್ವೇಗೆ ಅಧಿಕಾರಿಗಳು ಕೈಗೊಳ್ಳಬೇಕಾದ ಸಿದ್ಧತೆಗಳ ಕುರಿತು ಚರ್ಚಿಸಿದ್ದಾರೆ. ಅಂತಾರಾಜ್ಯಗಳಿಗೆ ಹೊಂದಿಕೊಂಡಿರುವ ಗಣಿ ಗುತ್ತಿಗೆ ಪ್ರದೇಶಗಳಲ್ಲಿ ಸಿಬ್ಬಂದಿ ಗುರುತಿಸಿರುವ ಗುರುತುಗಳನ್ನು ಮೂಲವಾಗಿಟ್ಟುಕೊಂಡು ಡಿಜಿಪಿಎಸ್ ಸರ್ವೇಯನ್ನು ಬುಧವಾರದಿಂದ ಆರಂಭಿಸಲಾಗುತ್ತದೆ. ಅಲ್ಲದೇ, ಕರ್ನಾಟಕ ಮತ್ತು ಆಂಧ್ರಪ್ರದೇಶದ ಅರಣ್ಯ, ಕಂದಾಯ ಮತ್ತು ಸರ್ವೇ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಕೇಂದ್ರದ ಸರ್ವೇ ಆಫ್ ಇಂಡಿಯಾದ ಅಧಿಕಾರಿಗಳ ತಂಡಕ್ಕೆ ಡಿಜಿಪಿಎಸ್ ಸರ್ವೇಗೆ ಸಹಕರಿಸುತ್ತಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಏನಿದು ಪ್ರಕರಣ?: 2006ರಲ್ಲಿ ಅವಿಭಜಿತ ಆಂಧ್ರಪ್ರದೇಶ ಸರ್ಕಾರದಿಂದ ಗಣಿ ಪರವಾನಗಿ ಪಡೆದಿದ್ದ ಓಬಳಾಪುರಂ ಗಣಿ ಕಂಪನಿಯು, ಕರ್ನಾಟಕ ಗಣಿ ಪ್ರದೇಶದಲ್ಲಿ ಅಕ್ರಮವಾಗಿ ಗಣಿಗಾರಿಕೆ ಮಾಡುತ್ತಿದೆ ಎಂದು ಆರೋಪಿಸಿ, ಗಣಿ ಉದ್ಯಮಿ ಟಪಾಲ್ ಗಣೇಶ್ ಎನ್ನುವವರು ಜಿಲ್ಲೆಯ ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ನಂತರ ಸಮಾಜ ಪರಿವರ್ತನಾ ಸಮುದಾಯವೂ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಈ ಹಿನ್ನೆಲೆಯಲ್ಲಿ ಡೆಹರಾಡೂನ್‌ನ ಸರ್ವೇ ಆಫ್ ಇಂಡಿಯಾದಿಂದ ಆಗಮಿಸಿರುವ ಅಧಿಕಾರಿಗಳು ಅಂತರಾಜ್ಯ ಗಡಿ ಧ್ವಂಸದ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡಲಿದೆ.
ಸಭೆಯಲ್ಲಿ ಸರ್ವೇ ಆಫ್ ಇಂಡಿಯಾ ಅಧಿಕಾರಿಗಳೊಂದಿಗೆ ರಾಜ್ಯದ ಸರ್ವೇ ಸೆಟ್ಲಮೆಂಟ್ ಕಮಿಷನರ್ ಮನೀಷ್ ಮೌದ್ಗಿಲ್, ಅರಣ್ಯ ಇಲಾಖೆಯ ಸಿಸಿಎಫ್ ಬಿಸ್ವಜಿತ್ ಮಿಶ್ರಾ, ಜಿಲ್ಲಾಧಿಕಾರಿ ಡಾ.ರಾಮ್ ಪ್ರಸಾತ್ ಮನೋಹರ್, ಆಂಧ್ರದ ಲ್ಯಾಂಡ್ ರೆಕಾರ್ಡ್ಸ್‌ನ ಜಂಟಿ ನಿರ್ದೇಶಕರು, ಬಳ್ಳಾರಿ ಡಿಎಫ್‌ಒ ರಮೇಶ್, ಅನಂತಪುರ ಡಿಎಫ್‌ಒ ಚಂದ್ರಶೇಖರ್ ಸೇರಿದಂತೆ ಅಂತಾರಾಜ್ಯಗಳ ಮೂರು ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.