Advertisement

ಕಳಪೆ ಚರಂಡಿ ಕಾಮಗಾರಿ ಪರಿಶೀಲನೆ

08:23 PM Nov 08, 2020 | Suhan S |

ಅಂಕೋಲಾ: ತಾಲೂಕಿನ ಕಣಗಿಲ್‌ ಗ್ರಾಮದ ಮೀನುಗಾರ ಸಭಾಭವನದ ಸಮೀಪದಲ್ಲಿ ಕಳಪೆ ಗುಣಮಟ್ಟದ ಚರಂಡಿ ನಿರ್ಮಾಣದ ಕುರಿತು ಗ್ರಾಮಸ್ಥರು ಪಂಚಾಯತ ಪಿಡಿಒಗೆ ಮನವಿ ಮಾಡಿದ್ದು ತಕ್ಷಣ ಸ್ಪಂದಿಸಿದ ಪಿಡಿಒ ಸ್ಥಳಕ್ಕಾಗಮಿಸಿ ಗ್ರಾಮಸ್ಥರಿಗೆ ತೊಂದರೆ ಆಗದ ಹಾಗೆ ತಾತ್ಕಾಲಿಕವಾಗಿ ಮಣ್ಣು ಬರಾವು ಮಾಡಿಕೊಟ್ಟು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Advertisement

ಕಳೆದ ಆರು ವರ್ಷಗಳ ಹಿಂದೆ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕಣಗಿಲ್‌ ಗ್ರಾಮದ ಮೀನುಗಾರ ಸಭಾಭವನದ ಸಮೀಪದಲ್ಲಿ ಚರಂಡಿ ನಿರ್ಮಿಸಲಾಗಿತ್ತು. ಕಳಪೆ ಕಾಮಗಾರಿಯಿಂದಾಗಿ ಚರಂಡಿ ಪೈಪ್‌ ಒಡೆದು ಹೋಗಿದ್ದು ಮಳೆಗಾಲದಲ್ಲಿ ಮೇಲ್ಭಾಗದಿಂದ ಚರಂಡಿ ಮೂಲಕ ಹರಿದು ಹೋಗಬೇಕಾಗಿದ್ದ ನೀರು ರಸ್ತೆಯಲ್ಲಿ ಹೋಗುವಂತಾಗಿತ್ತು. ಇದರಿಂದ ಗ್ರಾಮಸ್ಥರ ಮನೆಗಳಿಗೆ ವಾಹನಗಳನ್ನು ತೆಗೆದುಕೊಂಡು ಹೋಗಲು ಸಾಧ್ಯವಾಗದೆ ಪರದಾಡುವಂತಾಗಿತ್ತು. ಈ ಬಗ್ಗೆ ಎರಡು ವರ್ಷಗಳಿಂದ ಗ್ರಾಮಸ್ಥರು ನಿರಂತರವಾಗಿ ಗ್ರಾಮ ಸಭೆಯಲ್ಲಿ ಮನವಿ ಮಾಡುತ್ತಲೇ ಬಂದಿದ್ದರು. ಕಳೆದ ಮೇ ತಿಂಗಳಲ್ಲಿ ಲಿಖೀತ ರೂಪದಲ್ಲಿ ಮನವಿ ನೀಡಿದರು. ಆದರೆ ಗ್ರಾಪಂ ಅಧಿಕಾರಿಗಳಾಗಲಿ ಅಥವಾ ಸದಸ್ಯರಾಗಲಿ ಸಹಕರಿಸದ ಹಿನ್ನೆಲೆಯಲ್ಲಿ ಶನಿವಾರ ಗ್ರಾಮಸ್ಥರು ಶೇಟಗೇರಿ ಗ್ರಾಪಂ ವಿಶೇಷ ಗ್ರಾಮಸಭೆಯಲ್ಲಿ ಮತ್ತೆ ಮನವಿ ಸಲ್ಲಿಸಿದ್ದರು.

ಗ್ರಾಮಸ್ಥರ ಮನವಿಗೆ ತಕ್ಷಣ ಸ್ಪಂದಿಸಿದ ಗ್ರಾಪಂ ಅಭಿವೃದ್ಧಿ ಅಧಿಕಾರಿ ಕೋಮಲಾ ಮೊಗೇರ ಗ್ರಾಮ ಸಭೆಯ ನಂತರ ಕಣಗಿಲ್‌ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದರು. ತಾತ್ಕಾಲಿಕವಾಗಿ ವಾಹನಗಳ ಸಂಚಾರಕ್ಕೆ ಅವಕಾಶವಾಗುವ ರೀತಿಯಲ್ಲಿ ರಸ್ತೆಯಲ್ಲಿ ಮಣ್ಣು ಬರಾವು ಮಾಡಿಕೊಡುವುದಾಗಿ ತಿಳಿಸಿದರು.

ಮುಂದಿನ ಅವಧಿಯಲ್ಲಿ ಹೊಸ ಪೈಪ್‌ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿದರು. ಗ್ರಾಪಂ ಕಾರ್ಯಾಲಯದಿಂದ ಕೇವಲ ಎರಡು ಕಿಮೀ ದೂರದಲ್ಲಿರುವ ಈ ಪ್ರದೇಶಕ್ಕೆ ಇಲ್ಲಿಯವರೆಗೂಯಾವೊಬ್ಬ ಅಧಿಕಾರಿಯೂ ಭೇಟಿ ನೀಡಿರಲಿಲ್ಲ. ಈಗ ತಾನೆ ಶೆಟಗೇರಿ ಪಂಚಾಯತ್‌ ಅಭಿವೃದ್ಧಿಯಾಗಿ ನೇಮಕಗೊಂಡಿರುವ ಕೋಮಲಾ ಮೊಗೇರ ಅವರ ವಿಶೇಷ ಕಳಕಳಿಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.

ಗ್ರಾ.ಪಂ ಮಾಜಿ ಸದಸ್ಯ ಮಂಜುನಾಥ ನಾಯಕ, ಗ್ರಾಮಸ್ಥರಾದ ರವಿ ಹರಿಕಂತ್ರ, ಅಂಜನಿ ಹರಿಕಂತ್ರ, ರಾಮ ಹರಿಕಂತ್ರ, ಗಾಂಧಾರಿ ಹರಿಕಂತ್ರ, ಕಮಲಾಕರ ಹರಿಕಂತ್ರ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next