Advertisement

ಅವೈಜ್ಞಾನಿಕ ರಾಜಕಾಲುವೆಯಿಂದ ಸಂಕಷ್ಟ

04:46 PM Jul 30, 2022 | Team Udayavani |

ಗದಗ: ಬೆಟಗೇರಿ ಭಾಗದಲ್ಲಿ ಈ ಹಿಂದೆ ರಾಜಕಾಲುವೆಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಿರುವುದು ಹಾಗೂ ಕಳಪೆ ಕಾಮಗಾರಿ ಮಾಡಿರುವುದೇ ರಾಜಕಾಲುವೆಗಳು ತುಂಬಿ ಮನೆಗಳಿಗೆ ನೀರು ನುಗ್ಗಲು ಕಾರಣವಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ ಹೇಳಿದರು.

Advertisement

ಬುಧವಾರ ತಡರಾತ್ರಿ ಸುರಿದ ಭಾರಿ ಮಳೆಗೆ ರಾಜಕಾಲುವೆಗಳು ತುಂಬಿ ಮನೆಗಳಿಗೆ ನೀರು ನುಗ್ಗಿ ಹಾನಿಗೀಡಾದ ಸ್ಥಳೀಯ ಬೆಟಗೇರಿ ಭಾಗದ ಭಜಂತ್ರಿ ಓಣಿ, ವಾಲ್ಮೀಕಿ ನಗರ, ಅಂಬೇಡ್ಕರ್‌ ನಗರ ಹಾಗೂ ವಾಂಬೆ ಬಡಾವಣೆ ಪ್ರದೇಶಗಳಿಗೆ ಭೇಟಿ ನೀಡಿ, ಹಾನಿಗೊಳಗಾದ ನಿವಾಸಿಗಳ ಮನೆಗಳನ್ನು ವೀಕ್ಷಣೆ ಮಾಡಿ ಮಾತನಾಡಿದರು.

ಅವೈಜ್ಞಾನಿಕವಾಗಿ ನಿರ್ಮಾಣವಾಗಿರುವ ಹಾಗೂ ಅಪೂರ್ಣಗೊಂಡ ರಾಜಕಾಲುವೆಗಳನ್ನು ಪೂರ್ಣಗೊಳಿಸಲು ಅಗತ್ಯವಿರುವ ಅನುದಾನವನ್ನು ಸಂಬಂಧಪಟ್ಟ ಇಲಾಖೆಯಿಂದ ಬಿಡುಗಡೆಗೊಳಿಸಲು ಸರ್ಕಾರದ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.

ಭಜಂತ್ರಿ ಓಣಿಯಲ್ಲಿ ಹಾಗೂ ಶಿವರತ್ನ ಪ್ಯಾಲೇಸ್‌ ಪಕ್ಕದಲ್ಲಿ ರಾಜ ಕಾಲುವೆಗಳಿಗೆ ನಿರ್ಮಿಸಿರುವ ತಡೆಗೋಡೆಗಳು ಸಂಪೂರ್ಣ ಕಳಪೆಯಿಂದ ಕೂಡಿವೆ. ಅಲ್ಲದೇ, ಅವುಗಳು ಕುಸಿಯುತ್ತಿವೆ ಮತ್ತು ರಾಜಕಾಲುವೆ ಮುಂದೆ ಹೋದಂತೆ ಕಿರಿದಾಗಿದ್ದು, ನೀರು ನಿಂತು ಮನೆಗಳಿಗೆ ನೀರು ನುಗ್ಗಲು ಕಾರಣವಾಗಿದೆ ಎಂದು ಸಾರ್ವಜನಿಕರು ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ ಅವರ ಗಮನಕ್ಕೆ ತಂದರು.

ಈ ಕುರಿತು ಸಂಪೂರ್ಣವಾಗಿ ಪರಿಶೀಲಿಸಿ ರಾಜಕಾಲುವೆ ನಿರ್ಮಿಸಿದ ಗುತ್ತಿಗೆದಾರರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಕಳಪೆ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಅಧಿಕಾರಿಗಳಿಗೆ ಸಂಕನೂರ ಅವರು ಸೂಚನೆ ನೀಡಿದರು.

Advertisement

ವಾಲ್ಮೀಕಿ, ಅಂಬೇಡ್ಕರ್‌ ಬಡಾವಣೆಯಲ್ಲಿ ಹಾದು ಹೋಗಿರುವ ರಾಜ ಕಾಲುವೆ ವೀಕ್ಷಿಸಿದ ಸಂಕನೂರ ಅವರು, ರಾಜಕಾಲುವೆಗಳಲ್ಲಿ ಆದ ಅತಿಕ್ರಮಣ ಹಾಗೂ ರಾಜಕಾಲುವೆ ತುಂಬ ಬೆಳೆದ ಗಿಡಗಂಟಿಗಳಿಂದಾಗಿ ಮಳೆ ನೀರು ಹರಿದು ಹೋಗಲು ಅಡ್ಡಿಯಾಗಿದೆ. ಹಾಗಾಗಿ, ಮನೆಗಳಿಗೆ ನೀರು ನುಗ್ಗಿ ಹಾನಿ ಉಂಟಾಗಲು ಕಾರಣವಾಗಿದೆ. ಕೂಡಲೇ ಅವುಗಳನ್ನು ಸ್ವಚ್ಛಗೊಳಿಸುವಂತೆ ನಗರಸಭೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ದಣ್ಣ ಪಲ್ಲೇದ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ಯಳವತ್ತಿ, ನಗರಸಭೆ ಸದಸ್ಯರಾದ ಅನಿಲ ಅಬ್ಬಿಗೇರಿ, ಮಾಧುಸಾ ಮೇರವಾಡೆ, ಶಕುಂತಲಾ ಅಕ್ಕಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಧವ ಗಣಾಚಾರಿ, ಬಿಜೆಪಿ ಶಹರ ಪ್ರಧಾನ ಕಾರ್ಯದರ್ಶಿ ದೇವಪ್ಪ ಗೋಟೂರ, ಮುಖಂಡರಾದ ಶ್ರೀನಿವಾಸ ಹುಬ್ಬಳ್ಳಿ, ಹೊಳೆಬಸಪ್ಪ ಅಕ್ಕಿ, ತಹಶೀಲ್ದಾರ್‌ ಕಿಶನ್‌ ಕಲಾಲ, ನಗರಸಭೆ ಅಭಿಯಂತರ ಎಚ್‌.ವೈ. ಬಂಡಿವಡ್ಡರ ಇತರರಿದ್ದರು.

ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ರಾಜಕಾಲುವೆಗಳು ಹಾಗೂ ಚರಂಡಿಗಳು ತುಂಬಿ ಮನೆಗಳಿಗೆ ನೀರು ನುಗ್ಗಿ, ಸಾರ್ವಜನಿಕರ ಮನೆಗಳಿಗೆ ಹಾಗೂ ಪಂಚಮಿ ಹಬ್ಬಕ್ಕಾಗಿ ಅವರು ಖರೀದಿಸಿದ್ದ ಹಬ್ಬದ ವಸ್ತುಗಳು ಮತ್ತು ದವಸ-ಧಾನ್ಯಗಳು ಹಾನಿಗೀಡಾಗಿವೆ. ಈ ಕುರಿತು ವಿವಿಧ ಭಾಗಗಳಲ್ಲಿ ವೀಕ್ಷಣೆ ಮಾಡಿದ್ದು, ನಾಲ್ಕು ದಿನಗಳಲ್ಲಿ ಪರಿಶೀಲನೆ ಮಾಡಿ ಹಾನಿಗೀಡಾದ ಫಲಾನುಭವಿಗಳಿಗೆ ಕೂಡಲೇ ಪರಿಹಾರ ಒದಗಿಸಲು ತಹಶೀಲ್ದಾರ್‌ ಕಿಶನ್‌ ಕಲಾಲ ಅವರಿಗೆ ಸೂಚನೆ ನೀಡಲಾಗಿದೆ.  –ಎಸ್‌.ವಿ. ಸಂಕನೂರ, ಮೇಲ್ಮನೆ ಸದಸ್ಯರು

Advertisement

Udayavani is now on Telegram. Click here to join our channel and stay updated with the latest news.

Next