ಹುಬ್ಬಳ್ಳಿ: ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಫ್ಲೇಓವರ್ ನಿರ್ಮಾಣದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಪಾತ್ರ ದೊಡ್ಡದಿದ್ದು, ತಾಂತ್ರಿಕವಾಗಿ ಯೋಜನೆ ಕೈಗೊಳ್ಳಲು ಸಾಧ್ಯವಾಗದಿದ್ದರೂ ಕಾಯ್ದೆ ಬದಲಿಸಿ ಅನುಮತಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದರು.
ಶುಕ್ರವಾರ ಕಿತ್ತೂರು ಚನ್ನಮ್ಮ ವೃತ್ತದಲ್ಲಿ 298 ಕೋಟಿ ರೂ. ವೆಚ್ಚದಲ್ಲಿ ಫ್ಲೇಓವರ್ ಹಾಗೂ 25 ಕೋಟಿ ರೂ. ವೆಚ್ಚದಲ್ಲಿ ಕಲಘಟಗಿ ತಾಲೂಕಿನ ದಾಸ್ತಿಕೊಪ್ಪದ ಬಳಿ ಸೇತುವೆ ನಿರ್ಮಾಣಕ್ಕೆ ಆನ್‌ಲೈನ್ ಮೂಲಕ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಸಚಿವ ಪ್ರಹ್ಲಾದ ಜೋಶಿ ಅವರೇ ಫ್ಲೇಓವರ್‌ನ ನಿರ್ಮಾತೃ ಎಂದರೆತಪ್ಪಾಗಲಾರದು. ಇದಕ್ಕಾಗಿ ನನ್ನ ಮನೆ, ಕಚೇರಿಗೆ ಅದೆಷ್ಟು ಸಾರಿ ಅಲೆದಿದ್ದಾರೋ ಗೊತ್ತಿಲ್ಲ. ಆದರೆ ಸಂಚಾರ ದಟ್ಟಣೆ, ಅಪಘಾತ ನಿಯಂತ್ರಿಸಲು ಈ ಯೋಜನೆ ಕುರಿತು ಅವರ ಪ್ರಯತ್ನ ಕಾಯ್ದೆಗಳನ್ನು ಬದಲಿಸುವಂತೆ ಮಾಡಿತು. ಕಿತ್ತೂರು ಚನ್ನಮ್ಮ ವೃತ್ತದಲ್ಲಿ ನಿರ್ಮಾಣವಾಗಲಿರುವ ಫ್ಲೇಓವರ್‌ನ ನೀಲನಕ್ಷೆ ಅತ್ಯುತ್ತಮವಾಗಿದ್ದು, ಇದೇ ಮಾದರಿಯಲ್ಲಿ ನಾಗ್ಪುರದಲ್ಲಿ ಯೋಜನೆ ರೂಪಿಸುವಂತೆಎಂಜಿನಿಯರ್‌ಗಳಿಗೆ ಸೂಚಿಸಿರುವುದಾಗಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಕಳೆದ 60 ವರ್ಷಗಳ ರಸ್ತೆ ನಿರ್ಮಾಣ ಸಾಧನೆಯನ್ನು ನಿತಿನ್ ಗಡ್ಕರಿ ಅವರು ಕೇವಲ 6 ವರ್ಷಗಳಲ್ಲಿ ಸಾ ಧಿಸಿದ್ದಾರೆ. ಭಾರತ ಮಾಲಾ ಯೋಜನೆಯಲ್ಲಿ ಇತಿಹಾಸ ಸೃಷ್ಟಿಯಾಗಿದೆ. ಕಳೆದ ಆರು ವರ್ಷಗಳಲ್ಲಿ 7652 ಕಿಮೀ ರಸ್ತೆ ರಾಜ್ಯದಲ್ಲಿ ನಿರ್ಮಾಣವಾಗಿದೆ. ಸಿಆರ್‌ಎಫ್ ಯೋಜನೆಯಲ್ಲಿ ರಾಜ್ಯಕ್ಕೆ ಐತಿಹಾಸಿಕ ಅನುದಾನ ಮಂಜೂರು ಮಾಡಿದೆ.
ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಸೂಕ್ತ ಗಮನ ಹರಿಸಿ ಸಾಲ ಪಡೆದಾದರೂ ಇದನ್ನು ಪೂರ್ಣಗೊಳಿಸಬೇಕು. ಕಿತ್ತೂರು ಚನ್ನಮ್ಮ ವೃತ್ತದ ರಸ್ತೆಯನ್ನು ರಾಜ್ಯ ಸರಕಾರ ನಿರ್ಮಿಸಬೇಕು. ಆದರೆ ಗಡ್ಕರಿ ಅವರ ಕಾಳಜಿಯಿಂದ ಕೇಂದ್ರ ಸರಕಾರ ಅನುದಾನ ನೀಡಿದೆ. ಒಂದಿಷ್ಟು ವಿಸ್ತರಣೆಗೆ ರಾಜ್ಯ ಸರಕಾರ ಅನುದಾನ ನೀಡಿದರೆ ಈ ಯೋಜನೆ ಪೂರ್ಣಗೊಳ್ಳಲಿದೆ ಎಂದರು.
ಇದನ್ನೂ ಓದಿ:ಮಂಡ್ಯ: ಡಿ ಗ್ರೂಪ್ ನೌಕರನಿಗೆ ಮೊದಲ ಲಸಿಕೆ ನೀಡಿದ ಜಿಲ್ಲಾಧಿಕಾರಿ ಡಾ. ಎಂ.ವಿ ವೆoಕಟೇಶ್
ಸಚಿವ ಜಗದೀಶ ಶೆಟ್ಟರ ಮಾತನಾಡಿ, ಬೇಲೇಕೇರಿ ಬಂದರು ಅಭಿವೃದ್ಧಿಗೊಳಿಸುವ ಕುರಿತು ಹಿಂದೆ ಸಾಕಷ್ಟು ಬಾರಿ ಪ್ರಸ್ತಾಪ ಮಾಡಿದ್ದೀರಿ, ಈ ಭಾಗದ ಪ್ರಗತಿಯ ದೃಷ್ಟಿಯಿಂದ ಈ ಬಂದರು ಅಭಿವೃದ್ಧಿ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ಆದ್ಯತೆಗೆ ಗಡ್ಕರಿ ಅವರಲ್ಲಿ ಮನವಿ ಮಾಡಿದರು. ವಿಡಿಯೋ ಕಾನ್ಫರೆನ್ಸ್ ಮೂಲಕ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ರಾಜ್ಯ ಸಚಿವ ಡಾ| ವಿ.ಕೆ. ಸಿಂಗ್, ಉಪಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವ ಗೋವಿಂದ ಎಂ. ಕಾರಜೋಳ ಮಾತನಾಡಿದರು.
ರಾಜ್ಯ ಸರ್ಕಾರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ರಾಷ್ಟ್ರೀಯ ಹೆದ್ದಾರಿ ಸಚಿವಾಲಯದ ಎ.ಕೆ. ಪಾಂಡೆ, ವಿಧಾನ ಪರಿಷತ್ತು ಸದಸ್ಯ ಬಸವರಾಜ ಹೊರಟ್ಟಿ, ಶಾಸಕರಾದ ಪ್ರಸಾದ ಅಬ್ಬಯ್ಯ, ಅರವಿಂದ ಬೆಲ್ಲದ, ಶಂಕರ ಪಾಟೀಲ ಮುನೇನಕೊಪ್ಪ, ಸಿ.ಎಂ. ನಿಂಬಣ್ಣವರ, ಅಮೃತ ದೇಸಾಯಿ, ಜಿಲ್ಲಾ ಧಿಕಾರಿ ನಿತೇಶ ಪಾಟೀಲ ಇನ್ನಿತರರಿದ್ದರು.