Advertisement

ಕೇರಳ, ಮಹಾರಾಷ್ಟ್ರದಿಂದ ಬರುವವರಿಗೆ ತಪಾಸಣೆ ಕಡ್ಡಾಯ: ವೆಂಕಟೇಶ್‌ ನಾಯ್ಕ

12:20 AM Mar 19, 2021 | Team Udayavani |

ಮೂಲ್ಕಿ: ಮೂಲ್ಕಿ ತಾಲೂಕು ವ್ಯಾಪ್ತಿಗೆ ಕೇರಳ ಮತ್ತು ಮಹಾರಾಷ್ಟ್ರಗಳಿಂದ ಬರುವವರಿಗೆ ಕೊರೊನಾ ಆರ್‌ಟಿ-ಪಿಸಿಆರ್‌ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಮೂಲ್ಕಿ ತಹಶೀಲ್ದಾರ ಡಾ| ವೆಂಕಟೇಶ್‌ ನಾಯ್ಕ ಹೇಳಿದ್ದಾರೆ.

Advertisement

ಮೂಲ್ಕಿ ನಗರ ಪಂಚಾಯತ್‌ ಕಚೇರಿಯ ಸಭಾಂಗಣದಲ್ಲಿ ಅಧ್ಯಕ್ಷ ಸುಭಾಷ್‌ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್‌ ಮುನ್ನಚ್ಚರಿಕೆಯ ಕ್ರಮವಾಗಿ ವಿವಿಧ ಇಲಾಖೆಗಳ ಮತ್ತು ಸಂಘ-ಸಂಸ್ಥೆ ಹಾಗೂ ಉದ್ಯಮಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಕೇರಳ ಮತ್ತು ಮಹಾರಾಷ್ಟ್ರಗಳಲ್ಲಿ ಹೆಚ್ಚಿನ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಗೆ ಆಗಮಿಸುವವರ ಮೇಲೆ ನಿಗಾ ವಹಿಸಬೇಕಿದೆ. ದೇವಸ್ಥಾನ, ಶಿಕ್ಷಣ ಸಂಸ್ಥೆ, ಹಾಸ್ಟೆಲ್‌, ಕಲ್ಯಾಣ ಮಂಟಪ, ಲಾಡ್ಜ್ಗಳು, ಹೊಟೇಲ್‌ ಸಹಿತ ಮತ್ತಿತರ ಕೇಂದ್ರಗಳಲ್ಲಿ ಕಡ್ಡಾಯವಾಗಿ ಈ ಪರೀಕ್ಷೆ ಮಾಡಿಸಬೇಕು. ದಿನಕ್ಕೆ 3,000 ಜನರನ್ನು ಪರೀಕ್ಷೆಗೆ ಒಳಪಡಿಸುವುದಕ್ಕೆ ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ ಎಂದರು.

ಸಾರ್ವಜನಿಕರು ಸೇರುವ ಯಾವುದೇ ಧರ್ಮದ ಧಾರ್ಮಿಕ ಕೇಂದ್ರಗಳು, ಸರಕಾರದ ವಿವಿಧ ಇಲಾಖೆಯ ಕಚೇರಿಗಳು, ಅಂಚೆ ಕಚೇರಿ ಮತ್ತು ಬ್ಯಾಂಕ್‌, ವಿಮಾ ಕಚೇರಿ ಮೊದಲಾದ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಮತ್ತು ಸ್ಯಾನಿಟೈಸರ್‌ ಮತ್ತು ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು. ಕೋಲ, ಜಾತ್ರೆ ಮತ್ತು ಇತರ ಜನ ಸೇರುವ ಸಭೆ ಸಮಾರಂಭಗಳಲ್ಲಿ ಕೋವಿಡ್‌ ನಿಯಮಗಳನ್ನು ನಿರ್ಲಕ್ಷಿಸಿದರೆ ಕಠಿನ ಕ್ರಮ ಜರಗಿಸಲಾಗುವುದು ಎಂದರು.

ಶೀಘ್ರವೇ ಮಾರ್ಗಸೂಚಿ
ದೇವಸ್ಥಾನ ಮತ್ತು ಇತರ ಧಾರ್ಮಿಕ ಕೇಂದ್ರಗಳ ಉತ್ಸವ ಮತ್ತು ಇತರ ಸಮಾರಂಭಗಳ ಬಗ್ಗೆ ಸೂಕ್ತ ಮಾರ್ಗಸೂಚಿ ಒಂದೆರಡು ದಿನಗಳೊಳಗೆ ಸಂಬಂಧಿಸಿದ ಇಲಾಖೆಯಿಂದ ಬರಲಿದ್ದು ಜನರು ಎಚ್ಚರದಿಂದ ಇರಬೇಕು ಎಂದು ತಹಶೀಲ್ದಾರ್‌ ಹೇಳಿದರು.

Advertisement

ಕೋವಿಡ್‌ ಲಸಿಕೆಗೆ ವ್ಯವಸ್ಥೆ
ಕೆಮ್ರಾಲ್‌ ಸಮುದಾಯ ಆರೋಗ್ಯ ಕೇಂದ್ರ ಆರೋಗ್ಯಾಧಿಕಾರಿ ಡಾ| ಚಿತ್ರಾ ಮಾತನಾಡಿ, ಮೂಲ್ಕಿ ಮತ್ತು ಕಟೀಲು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಕೆಮ್ರಾಲ್‌ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರತಿ ವಾರದ ಮಂಗಳವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರ ಯಾವುದೇ ಸರಕಾರಿ ರಜೆಗಳು ಇದ್ದರೂ ಕೋವಿಡ್‌ ಲಸಿಕೆ ಕಾರ್ಯಕ್ರಮ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆೆಯ ವರೆಗೆ ನಡೆಯಲಿದೆ. ನಿತ್ಯ 100 ಜನರಿಗೆ ಒಂದು ಕೇಂದ್ರದಲ್ಲಿ ಲಸಿಕೆ ನೀಡಲು ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

ಲಸಿಕೆ ಹಾಕಿಸಲು ಬರುವಾಗ ಅನಾರೋಗ್ಯದ ಸಂಬಂಧ ಮಾತ್ರೆ ಅಥವಾ ಚಿಕಿತ್ಸೆಯ ವಿವರಗಳನ್ನು ತಂದಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು. ವ್ಯಾಪ್ತಿಯಲ್ಲಿ ಮೂರು ಕೇಂದ್ರಗಳ ಪೈಕಿ ಒಂದು ಸಾವಿರ ಸಮೀಪ ಲಸಿಕೆ ನೀಡಲಾಗಿದೆ ಎಂದು ಚಿತ್ರಾ ಹೇಳಿದರು.

ಮೂಲ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ| ಕೃಷ್ಣ ಮಾತನಾಡಿದರು.
ಉಪಾಧ್ಯಕ್ಷ ಸತೀಶ್‌ ಅಂಚನ್‌, ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಹೊಟೇಲ್‌ ಉದ್ಯಮಿ, ಇಲಾಖೆಗಳ ಅಧಿಕಾರಿಗಳು, ಮೊದಲಾದವರು ಉಪಸ್ಥಿತರಿದ್ದರು. ನಗರ ಪಂಚಾಯತ್‌ ಸಮುದಾಯ ಅಧಿಕಾರಿ ಮುತ್ತಾಡಿ ನಿರೂಪಿಸಿದರು.

ಮುನ್ನೆಚ್ಚರಿಕೆ ವಹಿಸಿ
ಮೂಲ್ಕಿ ನಗರ ಪಂಚಾಯತ್‌ ಮುಖ್ಯಾಧಿಕಾರಿ ಪಿ. ಚಂದ್ರ ಪೂಜಾರಿ ಮಾತನಾಡಿ, ಮೂಲ್ಕಿ ನಗರ ಪಂಚಾಯತ್‌ ವ್ಯಾಪ್ತಿಯೊಳಗೆ ಕಳೆದ ಬಾರಿ ಯಾವುದೇ ಸಾವು-ನೋವುಗಳು ಉಂಟಾಗದಂತೆ ಒಂದು ಕುಟುಂಬದ ರೀತಿಯಲ್ಲಿ ವಿವಿಧ ಇಲಾಖೆಗಳು ಮತ್ತು ಸಂಘ-ಸಂಸ್ಥೆಗಳು ಸಹಕರಿಸಿದ್ದಾರೆ. ಈ ಬಾರಿಯು ಕೂಡ ಅದೇ ಸಹಕಾರದ ಜತೆಗೆ ಮುನ್ನೆಚ್ಚರಿಕೆ ವಹಿಸಬೇಕಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next