ಮಂಗಳೂರು/ ಬಂಟ್ವಾಳ: ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಬಂಟ್ವಾಳ ತಾಲೂಕು ಗೋದಾಮಿನಲ್ಲಿ 1.32 ಕೋ.ರೂ. ಮೌಲ್ಯದ ಅಕ್ಕಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿ ಸೋಮವಾರ ನಿಗಮದ ಜನರಲ್ ಮ್ಯಾನೇಜರ್ ಹಿರಿಯ ಕೆಎಎಸ್ ಅಧಿಕಾರಿ ಪ್ರಸನ್ನ ಕುಮಾರ್ ವಿ.ಕೆ., ಕಚೇರಿ ವ್ಯವಸ್ಥಾಪಕ ಇಸ್ಮಾಯಿಲ್, ಜಿಲ್ಲಾ ವ್ಯವಸ್ಥಾಪಕಿ ಅನುರಾಧಾ, ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಅನಂತರ ಪ್ರಸನ್ನ ಕುಮಾರ್ “ಉದಯವಾಣಿ’ ಜತೆ ಮಾತನಾಡಿ, ಈಗಾಗಲೇ ಅವ್ಯವಹಾರದ ಬಗ್ಗೆ ಎಫ್ಐಆರ್ ದಾಖಲಾಗಿದೆ. ದಾಖಲೆಗಳಲ್ಲಿ ನಮೂದಾಗಿರುವ ಅಕ್ಕಿಯ ಪ್ರಮಾಣಕ್ಕೂ ದಾಸ್ತಾನಿ ರುವ ಅಕ್ಕಿಯ ಪ್ರಮಾಣಕ್ಕೂ ವ್ಯತ್ಯಾಸವಿರುವುದು ತಪಾಸಣೆ ವೇಳೆ ದೃಢಪಟ್ಟಿದೆ. 3,892.5 ಕ್ವಿಂಟಾಲ್ ಅಕ್ಕಿ ಕಡಿಮೆಯಾಗಿದೆ. ಇದರ ಬಗ್ಗೆ ಈಗಾಗಲೇ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದೆ.
ಗೋದಾಮಿನ ಮೇಲಸ್ತುವಾರಿ ವಹಿಸಿಕೊಂಡಿದ್ದ ಕಿರಿಯ ಸಹಾಯಕ ವಿಜಯ್‌ನನ್ನು ಬಂಧಿಸಲಾಗಿದೆ. ಬೇರೆ ಯಾರಾದರೂ ಭಾಗಿಯಾಗಿ ದ್ದಾರೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುವುದು. ತನಿಖೆಗಾಗಿ ನಿಗಮದಿಂದ ಪ್ರತ್ಯೇಕ ಸಮಿತಿ ರಚಿಸಲಾಗುವುದು. ಪೊಲೀಸರು ಕೂಡ ಪ್ರತ್ಯೇಕ ತಂಡ ರಚನೆ ಮಾಡಿ ತನಿಖೆ ಮಾಡುವಂತೆ ಸೂಚಿಸಲಾಗಿದೆ ಎಂದರು.
ನಿಗಮದ ವ್ಯವಸ್ಥಾಪಕ ನಿರ್ದೇಶಕರು, ಇಲಾಖಾ ಸಚಿವರು ಕೂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಎಫ್ಐಆರ್‌ನಲ್ಲಿರುವುದು ಸತ್ಯ ಎಂದು ಕಂಡು ಬಂದಿದೆ. ಸ್ಟಾಕ್ ಇಲ್ಲದಿರುವುದು ಮನವರಿಕೆಯಾಗಿದೆ. ಅನ್ನಭಾಗ್ಯ ಯೋಜನೆಯ ಮೂಲಕ ಬಡವರಿಗಾಗಿ ವಿತರಣೆ ಮಾಡಲು ದಾಸ್ತಾನಿರಿಸಿದ ಅಕ್ಕಿಯಲ್ಲೇ ಅವ್ಯವಹಾರ ನಡೆದಿದೆ. ಇದರಲ್ಲಿ ಯಾರೇ ಭಾಗಿಯಾಗಿ ದ್ದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ತನಿಖೆ ಚುರುಕುಗೊಳಿಸಲಾಗುವುದು.
ನಿಗಮದ ಗೋದಾಮುಗಳಲ್ಲಿ ಪಾರದರ್ಶಕತೆಗಾಗಿ ತಂತ್ರಜ್ಞಾನ ಅಳವಡಿಸುವ ಬಗ್ಗೆಯೂ ಚರ್ಚಿಸಿ ರಾಜ್ಯಾದ್ಯಂತ ಕ್ರಮ ಕೈಗೊಳ್ಳಲಾಗುವುದು. ಸಚಿವರು ಕೂಡ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಇಲಾಖೆಗೆ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.
ಅನ್ನಭಾಗ್ಯಕ್ಕೆ ಅಕ್ಕಿ ಪೂರೈಕೆ ಯಾಗದೆ ಇದ್ದಾಗ ಪಡಿತರ ಅಂಗಡಿಯವರು ತಹಶೀಲ್ದಾರ್ ಗಮನಕ್ಕೆ ತಂದಿದ್ದರು. ತಹಶೀಲ್ದಾರ್ ಅವರು ಆರ್‌ಐ ಅವರಿಗೆ ಸೂಚನೆ ನೀಡಿದ್ದರು. ಅದರಂತೆ ಆರ್‌ಐ ಭೇಟಿ ನೀಡಿ ಆ. 14ರಂದು ಅಲ್ಲಿ ಅಕ್ಕಿ ದಾಸ್ತಾನಿಲ್ಲದಿರುವುದನ್ನು ಗಮನಿಸಿದ್ದರು. ಅನಂತರ ಡಿಸಿ, ಎಸ್‌ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅನಂತರ ಪ್ರಕರಣ ದಾಖಲಾಗಿತ್ತು. ಗೋದಾಮಿನಲ್ಲಿ ಕೊರತೆಯಾಗಿರುವ ಅಕ್ಕಿಯನ್ನು ಪೂರೈಸಲಾಗುವುದು. ಅನ್ನ ಭಾಗ್ಯದ ಮೂಲಕ ಎಷ್ಟೋ ಬಡ ಕುಟುಂಬಗಳಿಗೆ ವಿತರಣೆಯಾಗಬೇಕಾಗಿದ್ದ ಅಕ್ಕಿ ಬೇರೆ ಎಲ್ಲಿಗೋ ಹೋಗಿರುವುದು ತುಂಬಾ ಬೇಸರದ ವಿಚಾರವಾಗಿದೆ. ಎಲ್ಲ ಆಯಾಮಗಳಲ್ಲಿಯೂ ತನಿಖೆ ನಡೆಸಲಾಗುವುದು ಎಂದು ಪ್ರಸನ್ನ ಕುಮಾರ್ ತಿಳಿಸಿದರು.