Advertisement
ಕೊರೊನಾ ಸೋಂಕು ತಡೆಗಟ್ಟಲು ಬೆಂಗಳೂರು ನಗರದ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಜಾರಿಗೊಳಿಸಿ 2 ವರ್ಷ ಸಮೀಪಿಸುತ್ತಿದೆ. ಸೋಂಕು ನಿಯಂತ್ರಣದ ಹಂತದಲ್ಲಿದ್ದರೂ, ಸಂಸ್ಥೆಗಳು ವರ್ಕ್ ಫ್ರಂ ಹೋಮ್ ಮುಂದುವರಿಸಿವೆ. ನಗರದಲ್ಲಿ ದೀರ್ಘಕಾಲದ ವರ್ಕ್ ಫ್ರಾಮ್ ಹೋಮ್‌ನಿಂದಾಗಿ ನಿದ್ರಾಹೀನತೆ, ಖಿನ್ನತೆ ಮತ್ತಿತರ ಅಡ್ಡ ಪರಿಣಾಮ ಐಟಿ-ಬಿಟಿ ನೌಕರರನ್ನು ಬಿಟ್ಟು ಬಿಡದೆ ಕಾಡುತ್ತಿದೆ.
Related Articles
Advertisement
ರಾಜಧಾನಿ ಬೆಂಗಳೂರಿನಲ್ಲಿ ವರ್ಕ್ ಫ್ರಂ ಹೋಂನಿಂದಾಗಿ ನಿದ್ರಾಹೀನತೆ ಸೇರಿ ಆರೋಗ್ಯ ಸಮಸ್ಯೆ ಎದುರಿಸಿದವರ ಮಾತುಗಳಲ್ಲೇ ಕೇಳುವುದಾದರೆ, ಪ್ರತಿಷ್ಠಿತ ಕಂಪನಿಯಲ್ಲಿ ಕಳೆದ 5 ವರ್ಷದಿಂದ ಕೆಲಸ ಮಾಡುತ್ತಿದ್ದೇನೆ. ವಾರದಲ್ಲಿ 5ದಿನಗಳ ಎಂಟೂವರೆ ಗಂಟೆ ಕೆಲಸ ಮಾಡಿ, ಎರಡು ದಿನ ತುಂಬಾ ಸಂತೋಷದಿಂದ ಊಟ, ನಿದ್ದೆಯಲ್ಲಿ ಕಾಲ ಕಳೆಯುತ್ತಿದೆ. ವರ್ಕ್ ಫ್ರಂ ಹೋಮ್ ಬಳಿಕ ಜೀವನ ಶೈಲಿ ಬದಲಾಗಿದೆ. ಕಳೆದ ಒಂದು ವರ್ಷದಿಂದ ಕೆಲಸ ಮುಗಿಸಿ ಮಲಗಿದ್ದರೂ ನಿದ್ದೆ ಬರುತ್ತಿಲ್ಲ. ಇದರಿಂದಾಗಿ ರಾತ್ರಿ ಪೂರ್ತಿ ಫಿಲ್ಮಂ ನೋಡುತ್ತೇನೆ. ಮುಂಜಾನೆ ಹೊತ್ತಿಗೆ ನಿದ್ದೆ ಆವರಿಸುತ್ತದೆ. 8 ತಿಂಗಳ ಹಿಂದೆ ಮನಸ್ಸು ನಿಯಂತ್ರಿಸಲು ಸಾಧ್ಯವಾಗದೇ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದೆ. ಅದೃಷ್ಟದಿಂದ ಬದುಕಿದ್ದೇನೆ. ನಿರಂತವಾಗಿ ವೈದ್ಯರ ಸಲಹೆ ಮೇರೆಗೆ ನಿಯಮಿತ ದಿನಚರಿಯನ್ನು ರೂಢಿಸಿಕೊಂಡಿದ್ದೇನೆ ಎನ್ನುತ್ತಾರೆ ಐಟಿ-ಬಿಟಿ ಸಂಸ್ಥೆಯ ಉದ್ಯೋಗಿ ವಿವೇಕ.
ಡ್ರಗ್ಸ್ ಸೇವನೆ: ಅತಿಯಾದರೆ ಅಮೃತವೂ ವಿಷವಾಗುತ್ತದೆ. ಅಂತೆಯೇ ವರ್ಕ್ ಫ್ರಂ ಹೋಮ್ ನಿಂದ ನೆಮ್ಮದಿ ಹಾಳಾಗಿದೆ. ಕೆಲಸದ ಅವಧಿಯೂ ಹೆಚ್ಚಾಗಿದೆ. ಕಂಪ್ಯೂಟರನ್ನು ನಿರಂತರವಾಗಿ ನೋಡುತ್ತಿರುವುದರಿಂದ ಕಣ್ಣುಗಳು ನೋಯುತ್ತಿವೆ. ಹಿಂದಿನ ಶಿಸ್ತಿನ ದಿನಚರಿ ಬದಲಾಗಿದೆ. ಮುಂಜಾನೆ 3 ಗಂಟೆಗೆ ಮಲಗಿ ಬೆಳಗ್ಗೆ 11
ಗಂಟೆಗೆ ಎದ್ದೇಳುವ ಪರಿಪಾಠ ಪ್ರಾರಂಭವಾಗಿದೆ. ಒತ್ತಾಯ ಪೂರ್ವಕವಾಗಿ ರಾತ್ರಿ 10ಕ್ಕೆ ಮಲಗಲು ಪ್ರಯತ್ನಿಸಿದ್ದರೂ ನಿದ್ದೆ ಬರುತ್ತಿರಲಿಲ್ಲ. ಇದರಿಂದಾಗಿ ಡ್ರಗ್ಸ್ ಸೇವನೆಗೆ ಒಳಗಾದೆ. ಇದು ನನ್ನ ಕೆಲಸ ಹಾಗೂ ಆರೋಗ್ಯದ ಮೇಲೆ ಪರಿಣಾಮವನ್ನು ಬೀರಿತ್ತು.ಇದು ಆಸ್ಪತ್ರೆಯನ್ನು ಸೇರುವಂತೆ ಮಾಡಿರುವುದರ ಜತೆಗೆಉದ್ಯೋಗದ ಮೇಲೆ ಕರಿ ನೆರಳು ಹರಡಿತ್ತು ಎನ್ನುತ್ತಾರೆ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿರುವ ಐಟಿ ಉದ್ಯೋಗಿ ವಿಜೇತಾ ಅವರು.
ವೃತ್ತಿ ಬದುಕಿಗೆ ಹಿನ್ನಡೆ :
ಹಿಂದೆಲ್ಲ ಒಂದು ನಿಗದಿತ ಸಮಯದಲ್ಲಿ ಎದ್ದು ಕೆಲಸಕ್ಕೆ ಹೋಗಬೇಕು ಎನ್ನುವ ಗುರಿ ಇತ್ತು. ಆದರೆ, ವರ್ಕ್ ಫ್ರಂ ಹೋಮ್ ನಿಂದ ಜೀವನ ಶೈಲಿ ಬದಲಾಗಿದೆ. ನಿದ್ದೆಯ ದಿನಚರಿ ಬದಲಾಗಿದೆ. ಆಲಸ್ಯ ಹೆಚ್ಚಾಗಿದೆ. ಮೊದಲಿನಂತೆ ಕೆಲಸ ಮಾಡುವ ಹುಮ್ಮಸ್ಸು ಇಲ್ಲ. ಕೆಲಸದ ಅವಧಿಯಲ್ಲಿ ನಿದ್ದೆ ಬರುತ್ತದೆ. ಉತ್ತಮ ಕೆಲಸ ನಿರ್ವಹಿಸಿ ಬೆಸ್ಟ್ ಎಂಪ್ಲಾಯಿ ಎನ್ನುವ ಆವಾರ್ಡ್ ಪಡೆದುಕೊಂಡ ನನಗೆ ಅಶಿಸ್ತಿನ ನಿದ್ರಾ ಕ್ರಮದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದೇನೆ. ಕಳೆದ 6 ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದೇನೆ ಎನ್ನುತ್ತಾರೆ ವರ್ಕ್ ಫ್ರಂ ಹೋಮ್ ಉದ್ಯೋಗಿ ನಿರ್ಮಲಾ.
ಕೋವಿಡ್ ವೇಳೆ ಹೊಸದಾಗಿ ಎಂಜಿನಿಯರ್ ಉದ್ಯೋಗಕ್ಕೆ ಸೇರ್ಪಡೆಯಾದೆ. ಪ್ರಾರಂಭಿಕ ಹಂತದಲ್ಲಿ ಎಲ್ಲವೂ ಚೆನ್ನಾಗಿತ್ತು. ಅನಂತರ ದಿನದಲ್ಲಿ ಕೆಲಸದಲ್ಲಿ ಉತ್ಸಾಹ ಇರಲಿಲ್ಲ. ಮನೆಯವರ ಜತೆಗೆ ಜಗಳ, ಕೋಪ ಹಾಗೂ ಮೂಡಿಯಾಗಿ ಬದಲಾದೆ. ನಿದ್ದೆ ಬಾರದ ಹಿನ್ನೆಲೆಯಲ್ಲಿ ಮುಂಜಾನೆ 3ಗಂಟೆಗೆ ಮಲಗಿಬೆಳಗ್ಗೆ 11ಗಂಟೆಗೆ ಎದ್ದೇಳುತ್ತಿದೆ. ಈ ವೇಳೆ ಕೆಲಸ ಮಾಡಲು ಮನಸ್ಸು ಆಗುತ್ತಿರಲಿಲ್ಲ. ಸಮಸ್ಯೆ ಅರಿವು ಮೂಡುತ್ತಿದ್ದಂತೆ ವೈದ್ಯರನ್ನು ಸಂಪರ್ಕಿಸಿದ್ದೇನೆ. ಅವರುಸೂಚಿಸಿದಂತೆ ದಿನಚರಿ ಬದಲಾಯಿಸಿಕೊಂಡೆ. ಆಹಾರಪದ್ಧತಿ ಬದಲಾಗಿರುವುದರಿಂದ ರಾತ್ರಿ 10ಕ್ಕೆ ಮಲಗಿದ್ದರೆಬೆಳಗ್ಗೆ 6ಗಂಟೆಗೆ ಎಚ್ಚರವಾಗುತ್ತದೆ ಎಂದು ಎಂಜಿನಿಯರ್ ಚೆùತ್ರಾ ತಿಳಿಸಿದರು.
ಹೆಂಡತಿಯಿಂದ ವಿಚ್ಛೇದನಕ್ಕೆ ಅರ್ಜಿ :
ಮನೆಯಿಂದ ಕೆಲಸ ಮಾಡುವ ವ್ಯವಸ್ಥೆ ಪ್ರಾರಂಭಗೊಂಡು ಎರಡೂವರೆ ವರ್ಷ ಸಮೀಪಿಸಿದೆ. ಊಟ, ಕರುಕಲು ತಿಂಡಿ, ಒತ್ತಡ ಹಾಗೂ ಅಲಸ್ಯ ಜೀವನ ಶೈಲಿಯಿಂದ ಅಧಿಕ ರಕ್ತದೊತ್ತಡ ಹಾಗೂ ತೂಕ ಏರಿಕೆಯಾಗಿದೆ. ಕೇವಲ 9 ತಿಂಗಳಿನಲ್ಲಿ ನನ್ನ ತೂಕ 55ರಿಂದ 69 ಕೆ.ಜಿ. ದಾಟಿತ್ತು. ಈ ವೇಳೆ ಸ್ಲಿಪ್ ಆಪ್ನಿಯ ಎನ್ನುವುದು ನಿದ್ರೆಗೆ ಸಂಬಂಧಿಸಿದ ತೊಂದರೆ ಕೂಡ ಕಾಡ ತೊಡಗಿತ್ತು. ಪ್ರಾರಂಭದಲ್ಲಿ ಇದರ ಅರಿವು ನನಗಿರಲಿಲ್ಲ. ಹೆಂಡತಿ ಎಚ್ಚರಿಸಿದರೂ ಅದನ್ನು ವೈದ್ಯರಿಗೆ ತೋರಿಸುವ ಕೆಲಸಕ್ಕೆ ಮುಂದಾಗಿರಲಿಲ್ಲ. ಜತೆಗೆ ಕಿರಿಕಿರಿಯ ಭಾವ ಹೆಚ್ಚಾಗಿತ್ತು. ಹೆಂಡತಿ ಮೇಲೂರೇಗಾಡಲು ಪ್ರಾರಂಭಿಸಿದೆ. ಇದರಿಂದ ಬೇಸತ್ತ ಹೆಂಡತಿ ವಿಚ್ಛೇದನಕ್ಕೆ ಮೊರೆ ಹೋದರು. ಈ ವೇಳೆಯೇ ನನಗೆ ನಿದ್ರಾಹೀನತೆಯಿಂದಾಗುತ್ತಿರುವ ಸಮಸ್ಯೆಯ ಅರಿವು ಮೂಡಿತ್ತು ಎನ್ನುತ್ತಾರೆ ವರ್ಕ್ ಫ್ರಂ ಹೋಮ್ ಉದ್ಯೋಗಿ ಮಹೇಶ್ವರ.
ಸಲಹೆಗಳೇನು? :
- ನಿಯಮಿತಿ ನಿದ್ರೆ-ಎಚ್ಚರ ದಿನಚರಿ ನಿರ್ವಹಿಸಿ
- ಕೊಠಡಿಯನ್ನು ಕತ್ತಲೆಯಾಗಿಸಲು ಬ್ಲೈಂಡ್ಸ್, ಬ್ಲಾಕ್‌ಔಟ್ ಕರ್ಟನ್ ಬಳಸಿ
- ಮಲಗುವ ಕೋಣೆ ತಂಪಾಗಿಸಿ
- ಕೆಫೀನ್, ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರಿ.
- ಕೆಲಸ ಮಾಡುವ ಸ್ಥಳದಿಂದ ಮಲಗುವ ಸ್ಥಳ ಪ್ರತ್ಯೇಕಿಸಿ
- ದಿನ ಪ್ರಾರಂಭವಾಗುವ ವೇಳೆ ವ್ಯಾಯಾಮ ಮಾಡಿ
- ಮಲಗುವ ಮೊದಲು ದೇಹವನ್ನು ಆರಾಮವಾಗಿರಿಸಿಕೊಳ್ಳಿ.
- ಮಲಗುವ ಸಮಯಕ್ಕೆ ಕನಿಷ್ಠ 1 ಗಂಟೆಮೊದಲು ಸ್ಮಾರ್ಟ್ ಫೋನ್ ಅಥವಾ ಟೀವಿ ಬಳಕೆ ತಪ್ಪಿಸಿ.