ಪಿರಿಯಾಪಟ್ಟಣ: ಅಂಬೇಡ್ಕರ್ ವಿವಿದೊದ್ದೇಶ ಸಹಕಾರ ಸಂಘಕ್ಕೆ ಷೇರು ಹಣ ಕಟ್ಟಿಸಿ ಕೊಳ್ಳುವ ನೆಪದಲ್ಲಿ ವಂಚನೆ ಮಾಡಿ ತಮ್ಮ ವೈಯಕ್ತಿಕ ಹಿತಾಸಕ್ತಿ ಸಂಘವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದರಿಂದ ತಮ್ಮ ಷೇರು ಹಣವನ್ನು ವಾಪಸ್ ನೀಡುವಂತೆ ಚನ್ನಕಲ್ ಕಾವಲ್ ಗ್ರಾಪಂನ ಉಪಾಧ್ಯಕ್ಷ ಧನರಾಜ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಹಕಾರ ಸಂಘಕ್ಕೆ ಅನಧಿಕೃತವಾಗಿ ಐದು ಜನರನ್ನು ಆಡಳಿತ ಮಂಡಳಿಗೆ ತೆಗೆದುಕೊಂಡು ಷೇರುದಾರರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸಹಕಾರ ಸಂಘದ ಯಾವುದೇ ನಿಯಮಗಳನ್ನು ಪಾಲಿಸದೆ ಅಂಬೇಡ್ಕರ್ ವಿವಿದ್ದೋದ್ದೇಶ ಸಹಕಾರ ಸಂಘವನ್ನು ಪಿರಿಯಪಟ್ಟಣ ಶಾಖೆ ಎಂದು ಹೇಳಿಕೊಂಡು ಷೇರುದಾರರ ಗಮನಕ್ಕೆ ಬಾರದಂತೆ 5 ಮಂದಿ ಆಡಳಿತ ಮಂಡಳಿಯನ್ನು ರಚಿಸಿಕೊಂಡಿದ್ದೆವೆ ಎಂದು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಿಕೊಂಡು ಕಾರ್ಯದರ್ಶಿಯಾಗಿ ಸಿ.ತಮ್ಮಣ್ಣಯ್ಯ ಎಂದು ಹೇಳಿಕೊಂಡು ತಮ್ಮ ಇಚ್ಛೆ ಪ್ರಕಾರ ವರ್ತಿಸುತ್ತಿದ್ದಾರೆ ಎಂದು ದೂರಿದರು.
ಷೇರುದಾರರಾದ ಟಿ.ಈರಯ್ಯ ಮಾತನಾಡಿ ಕಳೆದ ಎಂಟು ದಿನಗಳ ಹಿಂದೆ ಪಟ್ಟಣದ ರಜಪೂತ್ ವಿಲ್ಲಾಸ್ ಎಂಬ ಸಭಾ ಭವನದಲ್ಲಿ ಎವಿಎಸ್ಎಸ್ ನ ವಾರ್ಷಿಕ ಮಹಾಸಭೆಯನ್ನು ನಡೆಸಲಾಗಿದ್ದು ತಮ್ಮ ಕುಟುಂಬದಲ್ಲಿ ಮೂರು ಮಂದಿ ಷೇರುದಾರರಾಗಿದ್ದರೂ ಸಹ ವಾರ್ಷಿಕ ಮಹಾಸಭೆಯಲ್ಲಿ ಕಡ್ಡಾಯ ರುಜು ಮಾಡಬೇಕು ಎಂಬ ನಿಯಮವಿದ್ದರೂ ಸಹ ಕೇವಲ ಒಬ್ಬರಿಗೆ ಮಾತ್ರ ಆಹ್ವಾನ ಪತ್ರಕೆ ನೀಡಿ ಉಳಿದವರಿಗೆ ವಿಷಯ ತಲಪದಂತೆ ನೋಡಿಕೊಂಡಿದ್ದಾರೆ. ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಎವಿಎಸ್ಎಸ್ ಮುಗ್ದ ಷೇರುದಾರರನ್ನು ವಿವಿಧ ರೀತಿಯಲ್ಲಿ ವಂಚನೆ ಮಾಡುತ್ತಿದ್ದು ಮಹಾಸಭೆಯ ಖರ್ಚು ವೆಚ್ಚಕ್ಕಾಗಿ ಅಧಿಕಾರಿಗಳು ಮತ್ತು ಸಾರ್ವಜನಿಕರಿಂದ ಲಕ್ಷಾಂತರ ಹಣ ವಸೂಲಿ ಮಾಡಿ ಸಹಕಾರ ಸಂಘಕ್ಕೆ ಕಳಂಕ ಬರುವಂತೆ ನಡೆದುಕೊಂಡಿದ್ದಾರೆ ಎಂದರು.
ಮುಖಂಡ ಸೀಗೂರು ವಿಜಯಕುಮಾರ್ ಮಾತನಾಡಿ ಸಹಕಾರ ಸಂಘದಲ್ಲಿ ಗುಂಪುಗಾರಿಕೆ ಮಾಡಿಕೊಂಡು ಅಂಬೇಡ್ಕರ್ ಹೆಸರಿನಲ್ಲಿ ಜನರಿಗೆ ಒಂದಲ್ಲ ಒಂದು ರೀತಿಯಲ್ಲಿ ಶೋಷಣೆ ಮಾಡುತ್ತಿದ್ದಾರೆ ಆದ್ದರಿಂದ ನಾವು ಕಟ್ಟಿರುವ ಷೇರು ಹಣವನ್ನು ವಾಪಸ್ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಚಲವಾದಿ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಪಿ.ಮಹದೇವ್, ರಾಂಪುರ ಪುಟ್ಟಸ್ವಾಮಿ, ಬೆಣಗಾಲು ಗಿರೀಶ್. ಉಪಸ್ಥಿತರಿದ್ದರು.