ಹೊಸಪೇಟೆ: ರಾಜ್ಯದಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಒತ್ತಾಯಿಸಿ ಮದ್ಯ ನಿಷೇಧ ಆಂದೋಲನ-ಕರ್ನಾಟಕ ಸಂಘಟನೆಯಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಸಂಘಟನೆಯ ಮಹಿಳೆಯರು ಬೀರು ಬೇಡ ನೀರು ಬೇಕು, ಸಾರಾಯಿ ಬೇಡ ಶಿಕ್ಷಣ ಬೇಕು, ಹಾಗೂ ಅಕ್ರಮ ಮದ್ಯ ಮಾರಾಟ ನಿಲ್ಲಲೇಬೇಕು ಎಂಬ ಭಿತ್ತಿಪತ್ರಗಳನ್ನು ಹಿಡಿದು ಅಪರ ಜಿಲ್ಲಾಧಿಕಾರಿ ಮಹೇಶ್‌ಬಾಬು ಅವರಿಗೆ ಮನವಿತ್ರ ಪತ್ರ ಸಲ್ಲಿಸಿದ್ದಾರೆ.
ಮದ್ಯ ಮಾರಾಟ ನಿಷೇಧಿಸುವಂತೆ 2015 ರಿಂದಲೂ ಸತತವಾಗಿ ಆಂದೋಲನವನ್ನು ನಡೆಸುತ್ತಿದ್ದೇವೆ. ಎರಡು ವರ್ಷಗಳಿಂದ ಹಲವು ಬಾರಿ ಜಿಲ್ಲಾಧಿಕಾರಿ ಮತ್ತು ರಾಜ್ಯ ಸರಕಾರಕ್ಕೆ ಮನವಿಯನ್ನು ನೀಡಿದ್ದೇವೆ. ಹೈಕೋರ್ಟ್ ಕೂಡ ತಕ್ಷಣವೇ ಅಕ್ರಮ ಮದ್ಯ ಮಾರಾಟ ತಡೆಗೆ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿತ್ತು. ಆದರೆ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ವಿಪರ್ಯಾಸವೆಂದರೆ ನಮ್ಮ ಸಂವಿಧಾನದ 47ನೇ ವಿಧಿಯ ಆಶಯಕ್ಕೆ ವಿರುದ್ಧವಾಗಿ ಕಳೆದ 20 ವರ್ಷಗಳಿಂದ ಸರಕಾರ ಮದ್ಯ ಮಾರಾಟಕ್ಕೆ ಉತ್ತೇಜನ ನೀಡುತ್ತಲೇ ಬಂದಿದೆ ಎಂದು ಆಗ್ರಹಿಸಿದ್ದಾರೆ.
ಹೈಕೋರ್ಟ್‌ನ ಆದೇಶವನ್ನು ತಕ್ಷಣವೇ ಅನುಷ್ಠಾನಗೊಳಿಸಬೇಕು. ಅಕ್ರಮ ಮದ್ಯ ಮಾರಾಟ ನಿಷೇಧಿಸಬೇಕು. ಕುಡುಕ ಗಂಡಸರಿಂದಾಗಿ ಮಹಿಳೆಯರು ಮತ್ತು ಕುಟುಂಬ ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಸುಲಭದಲ್ಲಿ ಮದ್ಯ ಕೈಗೆ ಸಿಗುತ್ತಿರುವ ಕಾರಣದಿಂದಾಗಿ ಮಕ್ಕಳೂ ಕೂಡ ಮದ್ಯ ಸೇವನೆ ಕೆಟ್ಟ ಚಟಕ್ಕೆ ತುತ್ತಾಗುತ್ತಿದ್ದಾರೆ. ತಮ್ಮ ತಮ್ಮ ಹಳ್ಳಿಗಳಲ್ಲಿ ಮದ್ಯದಂಗಡಿಗಳನ್ನು ತೆರೆಯಬೇಕೇ-ಬೇಡವೇ ಎಂದು ವಿಶೇಷ ಗ್ರಾಮ ಸಭೆಗಳನ್ನು ನಡೆಸಬೇಕು. ಆದರೆ ಯಾವುದೇ ಸಭೆಯನ್ನೂ ನಡೆಸದೇ, ಚರ್ಚೆಯನ್ನೂ ಮಾಡದೇ ಏಕಾಏಕಿ ಮದ್ಯದಂಗಡಿಗಳನ್ನು ತೆರೆಯುತ್ತಿರುವುದು ಗ್ರಾಮೀಣ ಜನರ ಬದುಕನ್ನು ಮತ್ತಷ್ಟು ದುಸ್ತರಗೊಳಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಘಟಕರಾದ ಮಲ್ಲೇಶ್ ಕೊಗಳಿ, ಶೈನಜಾ, ಕೋಟ್ರಮ್ಮ, ಅಕ್ಕಮಹಾದೇವಿ, ಭಾಗ್ಯಮ್ಮ, ಗೀತಾ, ಯಶೋಧ, ಶಿಲ್ಪ ಮತ್ತಿತರರಿದ್ದರು.