Advertisement

ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಒತ್ತಾಯ

09:46 PM Jun 21, 2019 | Team Udayavani |

ಚಾಮರಾಜನಗರ: ಜಿಲ್ಲೆಯ ಸಮಗ್ರ ಅಭಿವೃ ದ್ಧಿಗಾಗಿ ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

Advertisement

ನಗರದ ಜಿಲ್ಲಾಡಳಿತ ಭವನಕ್ಕೆ ತೆರಳಿ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿ ಮಾತನಾಡಿ, ಚಾಮರಾಜನಗರ ಜಿಲ್ಲೆ ಹಿಂದುಳಿದ ಗಡಿಪ್ರದೇಶವಾಗಿದ್ದು, ಬಹಳಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಬೇಕಿದೆ. ಈ ಜಿಲ್ಲೆಗೆ ವಿಶೇಷವಾದ ಅನುದಾನ ಮತ್ತು ಜಿಲ್ಲೆಯ ಅಭಿವೃದ್ಧಿಗೆ ಒಂದು ಪ್ಯಾಕೇಜ್‌ ನೀಡಬೇಕು ಎಂದು ಒತ್ತಾಯಿಸಿದರು.

ಕೆರೆಗಳಿಗೆ ನೀರು ತುಂಬಿಸುವಲ್ಲಿ ಸರ್ಕಾರ ವಿಫ‌ಲ: ಚಾಮರಾಜನಗರ ತೀವ್ರ ಭೀಕರ ಬರಗಾಲವಿದ್ದು, ಜನ-ಜಾನುವಾರುಗಳಿಗೆ ಕುಡಿಯುವ ನೀರನ್ನು ಮೇವು ತ್ವರಿತವಾಗಿ ವ್ಯವಸ್ಥೆ ಮಾಡಬೇಕಾದ ಪರಿಸ್ಥಿತಿ ಇದೆ. ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗೆ ಹಾಹಾಕಾರವಾಗಿದೆ. ನಗರದಲ್ಲಿ ಪ್ರತಿನಿತ್ಯ ಕಾವೇರಿ ನೀರು ಬಿಡಬೇಕು. ಕೆರೆಗ‌ಳಿಗೆ ನೀರು ತುಂಬಿಸುವಲ್ಲಿ ಸರ್ಕಾರಗಳು ವಿಫ‌ಲವಾಗಿದೆ. ಪ್ರತಿ ಹಳ್ಳಿ ಹಳ್ಳಿಯಲ್ಲೂ ತಕ್ಷಣ ಕೊಳವೆಬಾವಿ ಕೊರೆಸಿ ಸಂಪೂರ್ಣ ನೀರು ಕೊಡಬೇಕು. ನಗರದಲ್ಲಿ ಒಳಚರಂಡಿ ಕಾಮಗಾರಿ ಅವೈಜ್ಞಾನಿವಾಗಿದ್ದು ಪರಿಣಾಮಕಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಆಪರೇಷನ್‌ ಕಮಲ ಅಪಾಯಕಾರಿ: ಮಾಜಿ ಪ್ರಧಾನಿ ದೇವೇಗೌಡರು ಸೋಲಬಾರದಿತ್ತು. ದೇವೇಗೌಡರೇ ಮಧ್ಯಂತರ ಚುನಾವಣೆಗೆ ಕುರಿತು ಮಾತನಾಡಿದ್ದಾರೆ. ರಾಜ್ಯ ಮೈತ್ರಿ ಸರ್ಕಾರದಲ್ಲಿ ಜೆಡಿಎಸ್‌, ಕಾಂಗ್ರೆಸ್‌ ನಡುವೆ ಒಳಜಗಳವಿದೆ. ಆಪರೇಷನ್‌ ಕಮಲ ಅಪಾಯಕಾರಿ. ಅಧಿಕಾರದ ಆಸೆಗಾಗಿ ಅಪರೇಷನ್‌ಗೆ ಒಳಗಾಗುವ ಪಕ್ಷಾಂತರಿಗಳಿಗೆ ಜೀವನ ಪರ್ಯಂತ ಚುನಾವಣೆಗೆ ನಿಲ್ಲದಂತೆ ಆದೇಶ ನೀಡಬೇಕು. ಸಿದ್ದರಾಮಯ್ಯ ಅವರು ರಾಜ್ಯದಲ್ಲಿ 5 ವರ್ಷಗಳ ಕಾಲ‌ ಉತ್ತಮ ಆಡಳಿತ ನೀಡಿದರು. ಮಲ್ಲಿಕಾರ್ಜುನ ಖರ್ಗೆ ಸೋಲು ಪಾರ್ಲಿಮೆಂಟ್‌ ಸೋಲಾಗಿದೆ ಎಂದರು.

ಬಡ್ತಿಗೆ ಒತ್ತಾಯ: ಗೃಹರಕ್ಷಕ ದಳ ನೌಕರರಿಗೆ ಆಂಧ್ರಪ್ರದೇಶದಲ್ಲಿ 23 ಸಾವಿರ ರೂ. ಹಾಗೂ ತೆಲಂಗಾಣ 21 ಸಾವಿರ ವೇತನ ನೀಡುತ್ತಿದ್ದಾರೆ ಆದರೆ ಕರ್ನಾಟಕದಲ್ಲಿ 13 ಸಾವಿರ ವೇತನ ನೀಡುವುದು ಯಾವ ನ್ಯಾಯ? ಕೂಡಲೇ ರಾಜ್ಯ ಸರ್ಕಾರ ಅವರ ವೇತನ ಹೆಚ್ಚು ಮಾಡಬೇಕು ಹಾಗೂ ಡಿ ಗ್ರೂಪ್‌ ನೌಕರರಲ್ಲಿ ಪದವೀಧರರು, ರಾಜ್ಯಪ್ರಶಸ್ತಿ ಪುರಸ್ಕೃತರು ಇದ್ದಾರೆ. ಅವರಿಗೆ ಬಡ್ತಿ ನೀಡಬೇಕು ಎಂದು ಒತ್ತಾಯಿಸಿದರು.

Advertisement

ಉಪನಗರ ನಿರ್ಮಾಣವಾಗಲಿ: ಮುಂದಿನ ದಿನಗಳಲ್ಲಿ ಪ್ರತಿಹಳ್ಳಿಹಳ್ಳಿಗಳಿಗೆ ಭೇಟಿ ಅಲ್ಲಿನ ಕುಂದುಕೊರತೆಗಳನ್ನು ಆಲಿಸಿ ಸರ್ಕಾರದ ಗಮನಕ್ಕೆ ತರಲಾಗುವುದು ಅಲ್ಲದೆ ಚಾಮರಾಜನಗರ ನಗರಸಭಾ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಿಗೂ ಭೇಟಿ ನೀಡಲಾಗುವುದು. ಚಾಮರಾಜನಗರಕ್ಕೆ ತಿ. ನರಸೀಪುರದಿಂದ ಕಾವೇರಿ ನೀರಿನ 2 ನೇ ಹಂತ ಆಗಬೇಕು. ಮೋಳೆಗಳಲ್ಲಿನ ಜನರು ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದಾರೆ. ಅವರ ಅಭಿವೃದ್ಧಿಯಾಗಬೇಕು. ಜಿಲ್ಲೆಗೆ ಐದು ಸಾವಿರ ಮನೆ ಗಳನ್ನು ನೀಡಬೇಕು. ಬದನಗುಪ್ಪೆ ಹತ್ತಿರ ಉಪನಗರ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.

ವಾಟಾಳ್‌ ಪಕ್ಷದ ಮುಖಂಡರಾದ ದಳಪತಿವೀರತಪ್ಪ, ಕಾರ್‌ನಾಗೇಶ್‌, ಶಿವಲಿಂಗಮೂರ್ತಿ, ಗು.ಪುರುಷೋತ್ತಮ, ಚಿಕ್ಕಲಿಂಗಪ್ಪ, ನಾಗರಾಜಮೂರ್ತಿ, ವರದರಾಜು, ಗೋವಿಂದರಾಜು, ನಾಗರಾಜು ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next