ರಾಮನಗರ: ಸಂವಿಧಾನ ಕತೃ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಅಗೌರವ ಉಂಟು ಮಾಡಿರುವ ಶಿಕ್ಷಣ ಇಲಾಖೆಯ ಅಧಿಕಾರಿ ಉಮಾ ಶಂಕರ್‌ರನ್ನು ಸರ್ಕಾರ ತಕ್ಷಣ ಸೇವೆಯಿಂದ ವಜಾ ಮಾಡಬೇಕು. ಹಾಗೂ ಅವರನ್ನು ಉಳಿಸಿಕೊಳ್ಳಲು ಯತ್ನಿಸುತ್ತಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಮ್ಮ ಸ್ಥಾನಕ್ಕೆ ತಕ್ಷಣ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿ ತಾಲೂಕಿನ ಬಿಡದಿಯಲ್ಲಿ ದಲಿತ ಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ದಲಿತ ಸಮುದಾಯಗಳ ಕ್ಷೇಮಾಭಿವೃದ್ಧಿ ಸಮಿತಿ ಒಕ್ಕೂಟದ ನೇತೃತ್ವದಲ್ಲಿ ಕರ್ನಾಟಕ ಬೌದ್ಧ ಸಮಾಜ, ಬಹುಜನ ಸಮಾಜ ಪಾರ್ಟಿ ಹಾಗೂ ವಿವಿಧ ದಲಿತ ಪರ ಸಂಘಟನೆಗಳ ಕಾರ್ಯಕರ್ತರು ಬಿಡದಿಯ ಬಿಜಿಎಸ್ ವೃತ್ತದಲ್ಲಿ ಜಮಾಯಿಸಿ ಅಧಿಕಾರಿ ಮತ್ತು ಸಚಿವರ ವಿರುದ್ಧ ಘೋಷಣೆ ಕೂಗಿದರು.
ಈ ವೇಳೆ ಮಾತನಾಡಿದ ದಲಿತ ಸಮುದಾಯಗಳ ಕ್ಷೇಮಾಭಿವೃದ್ಧಿ ಸಮಿತಿ ಒಕ್ಕೂಟದ ಅಧ್ಯಕ್ಷ ಕೆಂಚನಕುಪ್ಪೆ ರಾಮಕೃಷ್ಣಯ್ಯ, ಅಂಬೇಡ್ಕರ್ ಒಬ್ಬರೇ ಸಂವಿಧಾನ ಬರೆದಿಲ್ಲವೆಂದು ಸಂವಿಧಾನ ದಿನಾಚರಣೆ ಕಾರ್ಯಕ್ರಮದ ಸುತ್ತೋಲೆಯಲ್ಲಿ ಉಲ್ಲೇಖಸಿರುವುದು ಅಂಬೇಡ್ಕರ್ ಅವರನ್ನು ಅವಮಾನಿಸಲು ನಡೆಸಿರುವ ಷಡ್ಯಂತ್ರ. ಇದೊಂದು ಸುಳ್ಳು ಮಾಹಿತಿ ನೀಡಿ ಮಕ್ಕಳಲ್ಲಿ ಗೊಂದಲ ಸೃಷ್ಟಿಸುವ ಹುನ್ನಾರವಾಗಿದೆ. ಎಲ್ಲರೂ ಒಪ್ಪಿರುವ ಸತ್ಯಕ್ಕೆ ಚ್ಯುತಿ ತರುವ ಯತ್ನಅಂಬೇಡ್ಕರ್ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರಲು ಯತ್ನಿಸಿರುವ ಈ ಅಧಿಕಾರಿಗೆ ತಕ್ಕ ಶಿಕ್ಷೆಯಾಗಲೇ ಬೇಕು ಎಂದು ಅವರು ಒತ್ತಾಯಿಸಿದರು.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ತಪ್ಪಿನ ಅರಿವಿದ್ದರೂ, ಸಹ ಜಾಣ ಕುರುಡುತನ ಪ್ರದರ್ಶಿಸಿದ್ದಾರೆ. ಅಧಿಕಾರಿ ಉಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ದಲಿತ ಸಮುದಾಯಗಳ ಕ್ಷೇಮಾಭಿವೃದ್ಧಿ ಸಮಿತಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹಾಗೂ ಪುರಸಭೆ ಸದಸ್ಯ ಶಿವಕುಮಾರ್, ಪದಾಧಿಕಾರಿಗಳಾದ ನಾಗೇಂದ್ರ, ಇಟ್ಟಮಡು ಶ್ರೀಧರ್, ಅಬ್ಬನಕುಪ್ಪೆ ವೆಂಕಟೇಶ್, ರಾಮನಹಳ್ಳಿ ಸುರೇಶ್, ಪುಟ್ಟಸ್ವಾಮಣ್ಣ, ಬಾನಂದೂರು ಕೆಂಪರಾಜು, ಬಿಎಸ್‌ಪಿ ಜಿಲ್ಲಾ ಕಾರ್ಯದರ್ಶಿ ಬಾನಂದೂರು ಕುಮಾರ್, ಕರ್ನಾಟಕ ಬೌದ್ಧ ಸಮಾಜದ ಅಧ್ಯಕ್ಷ ಸುರೇಶ್, ರವಿ ಅಬ್ಬನಕುಪ್ಪೆ, ಸಂಜಯ್, ಲೋಕೇಶ್ ಕಲ್ಲುಗೋಪಹಳ್ಳಿ,ಬನ್ನಿಕುಪ್ಪೆ ಕುಮಾರ್, ಅವರಗೆರೆ ಗಿರೀಶ್ ಮುಂತಾದವರು ಭಾಗವಹಿಸಿದ್ದರು.