ಭಟ್ಕಳ: ಮೊಗೇರ ಸಮುದಾಯಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಬೇಕು ಹಾಗೂ ಉಚಿತ ದಾಖಲೆ ಹೆಸರಲ್ಲಿ ಮನೆ ಬಾಗಿಲಿಗೆ ಪ್ರವರ್ಗ 1ರಲ್ಲಿ ಸೇರಿಸಿದ ಜಾತಿ ಪ್ರಮಾಣ ಪತ್ರ ನೀಡುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿ ಮೊಗೇರ ಸಮುದಾಯದಿಂದ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಬಹಳ ಹಿಂದಿನಿಂದಲೂ ಮೊಗೇರರು ಸರಕಾರದಿಂದ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದುಕೊಂಡು ಬಂದಿದ್ದು ಇಂದಿಗೂ ಅನೇಕರು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಹೊಂದಿದ್ದಾರೆ. ಆದರೆ ಕಳೆದ ಕೆಲ ವರ್ಷಗಳಿಂದ ಈ ಬಗ್ಗೆ ಗೊಂದಲ ಏರ್ಪಟ್ಟಿದ್ದರಿಂದ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದು ಹಲವು ನ್ಯಾಯಾಲಯಗಳು ನಮ್ಮ ಪರ ತೀರ್ಪು ನೀಡಿವೆ. ಆದರೂ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ದೊರೆಯುತ್ತಿಲ್ಲ. ಈಗ ಸರಕಾರ ಯಾವುದೇ ಅಧೀಕೃತ ಮಾಹಿತಿ ಪಡೆಯದೇ ಏಕಾಏಕಿ ಮನೆ ಬಾಗಿಲಿಗೆ ಉಚಿತ ದಾಖಲೆ ಎನ್ನುತ್ತಾ ಮೊಗೇರರನ್ನು ಪ್ರವರ್ಗ-1ರಲ್ಲಿ ಸೇರಿಸಿ ಜಾತಿ ಪ್ರಮಾಣ ಪತ್ರ ನೀಡಿರುವುದು ಅಕ್ಷಮ್ಯ ಅಪರಾಧ. ಇದು ಸಮುದಾಯಕ್ಕೆ ಮಾಡಿದ ಅನ್ಯಾಯವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಯಾವುದೇ ಜಾತಿ ಪ್ರಮಾಣ ಪತ್ರ ಕೇಳದೇ ಇದ್ದರೂ ಮನೆ ಮನೆಗೆ ತೆರಳಿ ಜಾತಿ ಪ್ರಮಾಣ ಪತ್ರ ವಿತರಿಸಲಾಗುತ್ತಿದ್ದು ಅದನ್ನು ತಕ್ಷಣ ನಿಲ್ಲಿಸಬೇಕು. ಒಂದು ವೇಳೆ ಜಾತಿ ಪ್ರಮಾಣ ಪತ್ರ ಕೊಡುವುದಿದ್ದರೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಕೊಡಬೇಕು. ಇಲ್ಲವಾದಲ್ಲಿ ನಾವು ನ್ಯಾಯಯುತವಾಗಿ ಅದನ್ನು ಪಡೆದುಕೊಳ್ಳುತ್ತೇವೆ. ನೆಮ್ಮದಿ ಕೇಂದ್ರದಲ್ಲಿ ಕೂಡಾ ಇದು ಗೊಂದಲಕ್ಕೆ ಕಾರಣವಾಗಿದೆ. ಆದಾಯ ಪ್ರಮಾಣ ಪತ್ರ ಕೇಳಿದವರಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನೀಡಲಾಗುತ್ತಿದೆ. ಆದಾಯ ಪ್ರಮಾಣ ಪತ್ರ ಕೋರಿದಾಗ ಅದನ್ನು ಮಾತ್ರ ನೀಡುವಂತೆ ಸೂಚಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಮನವಿ ಸ್ವೀಕರಿಸಿ ಬೇಡಿಕೆ ಆಲಿಸಿದ ಸಹಾಯಕ ಆಯುಕ್ತೆ ಮಮತಾ ದೇವಿ ಜಿ.ಎಸ್. ಅವರು ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ದಾಸಿ ಮೊಗೇರ ಬೆಳಕೆ, ಪುಂಡಲೀಕ ಹೆಬಳೆ, ಭಾಸ್ಕರ ದೈಮನೆ, ಭಾಸ್ಕರ ಮೊಗೇರ ಬೆಳಕೆ, ನಾರಾಯಣ ಮೊಗೇರ, ಕೃಷ್ಣಾ ಮೊಗೇರ, ತಿಮ್ಮಪ್ಪ ಮೊಗೇರ ಸೇರಿದಂತೆ ಇನ್ನಿತರರು ಇದ್ದರು.