ಸುರಪುರ: ಅನುದಾನ ರಹಿತ ಶಾಲಾ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಮತ್ತು ನೌಕರರ ಹೋರಾಟ ಸಮನ್ವಯ ಸಮಿತಿ ಸದಸ್ಯರು ಶನಿವಾರ ನಗರದ ಮಹಾತ್ಮ ಗಾಂಧೀ ಜಿ ವೃತ್ತದಲ್ಲಿ ಪ್ರತಿಭಟಿಸಿದರು.
ಸಮಿತಿ ರಾಜ್ಯ ಘಟಕದ ಉಪಾಧ್ಯಕ್ಷ ಅಪ್ಪಣ್ಣ ಕುಲಕರ್ಣಿ ಮಾತನಾಡಿ, 1995ರ ವರೆಗಿನ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಅನುದಾನಕ್ಕೆ ಒಳಪಡಿಸಿದ ಸರಕಾರ ನಂತರ ಆರಂಭಗೊಂಡಿದ್ದ ಸಂಸ್ಥೆಗಳಿಗೆ ಅನುದಾನ ನೀಡದೆ ಕಡೆಗಣಿಸಿದೆ. ಸರಕಾರದ ಈ ತಾರತಮ್ಯ ನೀತಿಯಿಂದ ರಾಜ್ಯದಲ್ಲಿ ಸಾವಿರಾರು ಜನ ಶಿಕ್ಷಕರ ಬದುಕು ಅತಂತ್ರವಾಗಿದೆ ಎಂದು ಆರೋಪಿಸಿದರು.
ಶಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸುಮಾರು 23 ವರ್ಷಗಳಿಂದ ಸಾವಿರಾರು ಜನ ಶಿಕ್ಷಕರು ಕಡಿಮೆ ವೇತನದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಲಿಂದ ಇಲಿಯವರೆಗೆ ಅಧಿಕಾರಕ್ಕೆ ಬಂದಿರುವ ಸರ್ಕಾರಗಳು ಈ ಬಗ್ಗೆ ಭರವಸೆ ನೀಡಿ ಕಾಲಹರಣ ಮಾಡಿವೆ. ಸರಕಾರಗಳ ನಿರ್ಲಕ್ಷದಿಂದ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರು ಬದುಕು ಕಟ್ಟಿಕೊಳ್ಳಲಾಗದೆ ಅನೇಕ ಸಮಸ್ಯೆ ಎದುರಿಸುವಂತಾಗಿದೆ ಎಂದು ದೂರಿದರು.
ಅನುದಾನಿತ ಶಾಲೆಗಳಲ್ಲಿ ಸೇವೆ ಸಲ್ಲಿಸುತಿರುವ ಶಿಕ್ಷಕರ ಕಾಲ್ಪನಿಕ ವೇತನ ಹೆಚ್ಚಿಸುತ್ತಿಲ್ಲ. ಬೆಲೆ ಏರಿಕೆಯಿಂದ ಕಡಿಮೆ ವೇತನದಲ್ಲಿ ಸಂಸಾರ ಸಾಗಿಸುವುದು ಕಷ್ಟದಾಕವಾಗಿದೆ. ದೈನಂದಿನ ಬದುಕು ದುಸ್ತರವಾಗಿದೆ. ಕಾರಣ ಕಾಲ್ಪನಿಕ ವೇತನ ಹೆಚ್ಚಳ ಮಾಡಬೇಕು. ಬಡ್ತಿ ನಿಯಮ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಮುಖ್ಯ ಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಬರೆದ ಬೇಡಿಕೆ ಮನವಿಯನ್ನು ತಹಶೀಲ್ದಾರ್ ನಿಂಗಪ್ಪ ಬಿರಾದಾರ ಅವರಿಗೆ ಸಲ್ಲಿಸಿದರು. ಸಮಿತಿ ಪ್ರಮುಖರಾದ ಚಂದಪ್ಪ ಯಾದವ್, ಸಾಯಿಬಣ್ಣ ಪುರ್ಲೆ, ಕೃಷ್ಣ ದರಬಾರಿ, ಶಿವುರಾಜ ನಾಯಕ ಸೇರಿದಂತೆ ಇತರರು ಇದ್ದರು.