ಶೃಂಗೇರಿ: ದಲಿತರ ಮೇಲೆ ದೌರ್ಜನ್ಯ ಎಸಗಿ, ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಶಿಕ್ಷಣ ಸಚಿವರನ್ನು ಕೂಡಲೇ ಸಂಪುಟದಿಂದ ಕೈಬಿಡಬೇಕು ಮತ್ತು ಶಿಕ್ಷಣ ಇಲಾಖೆ ಕಾರ್ಯದರ್ಶಿ ಉಮಾಶಂಕರ್ ಹಾಗೂ ಕೆ.ಎಸ್.ಮಣಿ ಅವರನ್ನು ಅಮಾನತು ಮಾಡಬೇಕೆಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕಿ ಸುಮಾ ಆಗ್ರಹಿಸಿದರು.
ಅಂಬೇಡ್ಕರ್ ಮಾತ್ರ ಸಂವಿಧಾನ ಬರೆದಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆಂದು ಆರೋಪಿಸಿ ತಾಲೂಕು ಕಚೇರಿ ಎದುರು ದಲಿತ ಸಂಘರ್ಷ ಸಮಿತಿ ಸೋಮವಾರ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
ದಲಿತ ವಿರೋಧಿ ಬಿಜೆಪಿ ಸರ್ಕಾರದ ಶಿಕ್ಷಣ ಮಂತ್ರಿ ಸುರೇಶ್‌ಕುಮಾರ್ ನೈತಿಕ ಹೊಣೆ ಹೊತ್ತು ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದರು. ದಸಂಸ ಜಿಲ್ಲಾ ಸಂಚಾಲಕ ಕೆ.ಪಿ.ರಾಜರತ್ನಂ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು 74 ವರ್ಷ ಕಳೆದರೂ ದಲಿತರ ಮೇಲೆ ದೌರ್ಜನ್ಯ, ದಬ್ಟಾಳಿಕೆ ಮುಂದುವರೆದಿದೆ. ದೇಶದಲ್ಲಿ ಮತ್ತು ರಾಜ್ಯದಲ್ಲಿ ಅ ಧಿಕಾರಕ್ಕೆ ಬಂದಿರುವುದು ಬಂಡವಾಳಶಾಹಿ ಬಿಜೆಪಿ ಸರಕಾರ ಆರೆಸೆಸ್ಸ್ ನವರನ್ನು ಮೆಚ್ಚಿಸುವ ಕುತಂತ್ರದಿಂದ ಅಪಚಾರವೆಸಗಿ ದಲಿತರ ಭಾವನೆ ಧಕ್ಕೆ ತಂದಿದೆ ಎಂದರು.
ದೇಶದ 333 ಬ್ಯಾಂಕುಗಳನ್ನು ರಾಷ್ಟ್ರೀಕೃತ ಮಾಡಿದ್ದಾರೆ. ಬಡವರು ಬಡವರಾಗಿಯೇ ಉಳಿದಿದ್ದಾರೆ. ಎಲ್ಲರಿಗೂ ಸಮಬಾಳು, ಸಮಾನ ಅವಕಾಶ, ಉದ್ಯೋಗ ಮತ್ತು ವಸತಿ ನೀಡುತ್ತೇವೆ ಎಂದು ಹೇಳಿ ಅಧಿ ಕಾರಕ್ಕೆ ಬಂದು ವಿಫಲರಾಗಿದ್ದಾರೆ. ಇತ್ತೀಚೆಗೆ ಎನ್ ಆರ್‌ಸಿಇ ಗುಪ್ತ ಕಾರ್ಯಸೂಚಿಯಾಗಿದೆ. ಬಿಎಸ್‌ಎನ್‌ಎಲ್ ಸಂಸ್ಥೆ ಈಗಾಗಲೇ ದಿವಾಳಿಯಾಗಿರುವುದು ಇವರ ಆಡಳಿತ ವೈಫಲ್ಯಕ್ಕೆ ಸಾಕ್ಷಿಯಾಗಿದೆ.ಆರೆಸೆಸ್ಸ್ ಬೇರೆ ಬೇರೆ ರಾಜ್ಯದಲ್ಲಿ ಅಧಿಕಾರಿಗಳನ್ನು ಹೊಡೆದು ಸಾಯಿಸುತ್ತಿದ್ದಾರೆ. ಇದು ರಾಜ್ಯಕ್ಕೂ ಬರಲಿದೆ. ಚುನಾವಣೆಯಲ್ಲಿ ಇವಿಎಂನಿಂದ ವಂಚಿಸಲಾಗುತ್ತಿದೆ. ಹಳೇ ಮಾದರಿಯಲ್ಲಿ ಚುನಾವಣೆ ನಡೆಸಬೇಕು. ತಾನು ಹೇಳಿದಂತೆ ಕೇಳುವ ಹೆಬ್ಬೆಟ್ಟು ದಲಿತ ವ್ಯಕ್ತಿಯನ್ನು ರಾಷ್ಟ್ರಪತಿ ಮಾಡಿ ಜನರಿಗೆ ವಂಚಿಸಿದ್ದಾರೆ ಎಂದರು.
ತಾಲೂಕು ಸಂಚಾಲಕಿ ಚಂದ್ರಾವತಿ ಮಾತನಾಡಿ, ಬೆಟ್ಟಗೆರೆ ಗ್ರಾಮದ ಶುಂಠಿಹಕ್ಲು ದಲಿತ ಕಾಲೋನಿ ನಿವಾಸಿಗಳಿಗೆ ಸ.ನಂ. 180 ರಲ್ಲಿ ಎರಡು ಎಕರೆ ಭೂಮಿಯನ್ನು ಮನೆ ನಿರ್ಮಿಸಲು ಲೇಔಟ್ ವ್ಯವಸ್ಥೆ ಮಾಡಬೇಕು. ಎಲ್ಲಾ ಬಡಜನರಿಗೆ ಅಂಬೇಡ್ಕರ್, ಬಸವ, ವಸತಿ, ಆಶ್ರಯಮನೆ ಪಡೆದ ಫಲಾನುಭವಿಗಳಿಗೆ ಹಂತ ಹಂತವಾಗಿ ಮಾಡಿದ ಕೆಲಸಗಳಿಗೆ ಹಣ ಬಿಡುಗಡೆ ಮಾಡಬೇಕು. ತಾಲೂಕಿನಲ್ಲಿ ಫಾರಂ ನಂ.50,53,5 ಹಾಗೂ 94 ಸಿ ಯಲ್ಲಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಬೇಕೆಂದರು. ಮನವಿ ಪತ್ರ ಕಂದಾಯ ಇಲಾಖಾ ಅಧಿಕಾರಿ ಪ್ರವೀಣ್ ಅವರಿಗೆ ಸಲ್ಲಿಸಲಾಯಿತು. ಸಮಿತಿಯ ಶ್ರೀನಿವಾಸ, ಮಂಜಪ್ಪ, ಗೋಪಾಲ ಮತ್ತಿತರರು ಇದ್ದರು.