ಮಡಿಕೇರಿ: ನಾಲೆ ಮೂಲಕ ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯ ಕೃಷಿ ಚಟುವಟಿಕೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ರೈತರು ಹಾರಂಗಿ ಜಲಾಶಯದ ಮುಂಭಾಗ ಪ್ರತಿಭಟನೆ ನಡೆಸಿದರು. ಸೋಮವಾರಪೇಟೆ ತಾಲೂಕಿನ ಕೂಡಿಗೆ, ಹೆಬ್ಟಾಲೆ, ಶಿರಂಗಾಲ, ತೊರೆನೂರು, ಕೊಣನೂರು, ಕಡುವಿನ ಹೊಸಳ್ಳಿ, ಪಿರಿಯಾಪಟ್ಟಣ ವ್ಯಾಪ್ತಿಯ ನೂರಾರು ರೈತರು ಹಾರಂಗಿ ಜಲಾಶಯದ ಮುಂಭಾಗ ಸರಕಾರದ ವಿರುದ್ಧ ಘೋಷಣೆ ಕೂಗಿದರು.
ಹಾರಂಗಿ ಅಣೆಕಟ್ಟೆ ಭರ್ತಿಯಾಗಿದ್ದರೂ ನಾಲೆ ಗಳಿಗೆ ನೀರು ಹರಿಸದೆ ನದಿಗೆ ನೀರು ಹರಿಸಲಾಗುತ್ತಿದೆ ಎಂದು ಆರೋಪಿಸಿದ ರೈತರು ತತ್‌ಕ್ಷಣ ನದಿಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿದರು.
ಹಾರಂಗಿ ಜಲಾಶಯದಿಂದ ಎಡದಂಡೆ ಹಾಗೂ ಬಲದಂಡೆ ನಾಲೆಯ ಮೂಲಕ ಎರಡು ಬಾರಿ ರೈತರ ಬೆಳೆಗಳಿಗೆ ನೀರು ಹರಿಸಿ ಕೃಷಿ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸಬೇಕು. ರೈತರು ಈಗಾಗಲೆ ನಾಟಿ ಮತ್ತಿತರ ಕಾರ್ಯ ಕೈಗೊಂಡಿದ್ದಾರೆ. ಜಲಾ ಶಯದಿಂದ ರೈತರ ಬೆಳೆಗಳಿಗೆ ಕೇವಲ 250 ಕ್ಯೂಸೆಕ್ ಪ್ರಮಾಣದ ನೀರನ್ನು ನಿರಂತರವಾಗಿ ಹರಿಸಬೇಕೆಂದು ಒತ್ತಾಯಿಸಿದರು.
ಸ್ಥಳಕ್ಕೆ ಆಗಮಿಸಿದ ಹಾರಂಗಿ ಅಣೆಕಟ್ಟು ವಿಭಾಗದ ಕಾರ್ಯಪಾಲಕ ಅಭಿಯಂತ ರಂಗಸ್ವಾಮಿ ಅವರನ್ನು ಮುತ್ತಿಗೆ ಹಾಕಿದ ರೈತರು ಕೂಡಲೆ ಜಲಾಶಯದಿಂದ ನದಿಗೆ ಹರಿಸುತ್ತಿರುವ ನೀರನ್ನು ಸ್ಥಗಿತಗೊಳಿಸಬೇಕು ಎಂದು ಪಟ್ಟು ಹಿಡಿದರು. ಈ ಸಂಬಂಧ ಮಾಜಿ ಸಚಿವರಾದ ಜೀವಿಜಯ ಅವರ ಸಮ್ಮುಖದಲ್ಲಿ ಅಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ಹಾರಂಗಿ ಅಣೆಕಟ್ಟು ವಿಭಾಗದ ಕಾರ್ಯಪಾಲಕ ಅಭಿಯಂ ತರ ರಂಗಸ್ವಾಮಿ, ಸರಕಾರದ ಆದೇಶದಂತೆ ನದಿಗೆ ನೀರು ಹರಿಸಲಾಗುತ್ತಿದೆ. ನೀರಾವರಿ ಸಲಹಾ ಸಮಿತಿ ಸಭೆ ನಡೆಯುತ್ತಿದ್ದು ರೈತರ ಮನವಿ ಬಗ್ಗೆ ಮಾಹಿತಿ ಒದಗಿಸಲಾಗುವುದು. ಪ್ರಾದೇಶಿಕ ಆಯುಕ್ತರ ಮಟ್ಟದಲ್ಲಿ ಈ ಬಗ್ಗೆ ಸಭೆ ನಡೆಯುತ್ತಿದ್ದು ಸಧ್ಯದಲ್ಲಿಯೇ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಪ್ರಸಕ್ತ ಸರಕಾರದಿಂದ ಕುಡಿಯುವ ನೀರಿಗೆ ಆದ್ಯತೆ ನೀಡಲು ಸೂಚನೆ ಬಂದಿದ್ದು ರೈತರ ಅಹವಾಲುಗಳನ್ನು ಮೇಲಧಿಕಾರಿಗಳ ಗಮನಕ್ಕೆ ರವಾನಿಸಲಾಗುವುದು ಎಂದರು.
ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಸಚಿವ ಬಿ.ಎ. ಜೀವಿಜಯ ಅವರು ಮಾತನಾಡಿ, ಸರಕಾರ ರೈತರ ಬಗ್ಗೆ ಕಾಳಜಿ ವಹಿಸಬೇಕು. ತಕ್ಷಣ ಸೋಮವಾರಪೇಟೆ ತಾಲೂಕಿನ ವ್ಯಾಪ್ತಿಯ ಹಾರಂಗಿ ಅಚ್ಚುಕಟ್ಟು ರೈತರ ಜಮೀನಿಗೆ ನೀರು ಒದಗಿಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅಣೆಕಟ್ಟೆಯ ನೀರನ್ನು ನಂಬಿ ಕೃಷಿ ಚಟುವಟಿಕೆ ಯಲ್ಲಿ ತೊಡಗಿರುವ ರೈತಾಪಿ ವರ್ಗಕ್ಕೆ ನಿರಂತರ ನೀರು ಹರಿಸುವ ಬದ್ದತೆಯನ್ನು ಅಧಿಕಾರಿಗಳು ಕೈಗೊಳ್ಳಬೇಕು ಎಂದರು. ಈ ಸಂದರ್ಭ ಸಹಾಯಕ ಕಾರ್ಯಪಾಲಕ ಅಭಿಯಂತರ ಧರ್ಮರಾಜು, ಜೆಡಿಎಸ್ ಪ್ರಮುಖರಾದ ಭರತ್, ಎಂ.ಎಸ್.ರಾಜೇಶ್, ರೈತ ಮುಖಂಡರು ಹಾಜರಿದ್ದರು.