Advertisement

ರಕ್ಷಣೆ ಕಾಯ್ದೆ ಜಾರಿಗೆ ಒತ್ತಾಯ

06:31 AM Feb 13, 2019 | |

ಬೆಂಗಳೂರು: “ವಕೀಲರ ರಕ್ಷಣೆ ಕಾಯ್ದೆ’ ಜಾರಿಗೆ ಒತ್ತಾಯಿಸಿ ಭಾರತೀಯ ವಕೀಲರ ಪರಿಷತ್‌ ಕರೆ ನೀಡಿದ್ದ ರಾಷ್ಟ್ರ ವ್ಯಾಪಿ ಪ್ರತಿಭಟನೆಯನ್ನು ಬೆಂಗಳೂರು ವಕೀಲರ ಸಂಘ ಬೆಂಬಲಿಸಿದ ಪರಿಣಾಮವಾಗಿ ಹೈಕೋರ್ಟ್‌ ಸೇರಿದಂತೆ ನಗರದ ಎಲ್ಲ ಅಧೀನ ನ್ಯಾಯಾಲಯಗಳ ಕಲಾಪಗಳಿಂದ ಮಂಗಳವಾರ ವಕೀಲರು ದೂರು ಉಳಿದಿದ್ದರು.

Advertisement

ಸಿಟಿ ಸಿವಿಲ್‌ ಕೋರ್ಟ್‌, ಮ್ಯಾಜಿಸ್ಟ್ರೇಟ್‌ ಕೋರ್ಟ್‌, ಮೆಯೋಹಾಲ್‌ ಮತ್ತು ನ್ಯಾಯಾದೇಗುಲ ಸಂಕೀರ್ಣದಲ್ಲಿ ಬಹುತೇಕ ಬೆಳಗ್ಗೆಯಿಂದಲೇ ಕಲಾಪಗಳು ನಡೆದಿಲ್ಲ. ಹೈಕೋರ್ಟ್‌ನಲ್ಲಿ ಬೆಳಿಗ್ಗೆ ಕಲಾಪ ಆರಂಭಗೊಂಡತ್ತಿದ್ದಾರೂ, ಬೆಂಗಳೂರು ವಕೀಲರ ಸಂಘ ಮನವಿ ಮಾಡಿದ ಹಿನ್ನೆಲೆಯಲ್ಲಿ ವಕೀಲರು ಕಲಾಪಕ್ಕೆ ಗೈರು ಹಾಜರಾದ ಕಾರಣಕ್ಕೆ ಮಧ್ಯಾಹ್ನದ ವೇಳೆಗೆ ಹೈಕೋರ್ಟ್‌ ಎಲ್ಲ ನ್ಯಾಯಪೀಠಗಳಲ್ಲಿ ಮಂಗಳವಾರದ ಕಲಾಪಗಳನ್ನು ಮುಂದೂಡಲಾಯಿತು.

ರಾಜ್ಯಪಾಲ, ಡಿಸಿಎಂಗೆ ಮನವಿ: ವಕೀಲರ ರಕ್ಷಣೆ ಕಾಯ್ದೆ ಜಾರಿಗೆ ತರಲು ಒತ್ತಾಯಿಸುವುದು ಸೇರಿದಂತೆ ವಕೀಲ ಸಮುದಾಯದ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬೆಂಗಳೂರು ವಕೀಲರ ಸಂಘ ರಾಜ್ಯಪಾಲರು ಹಾಗೂ ಉಪಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿತು. ಪ್ರತಿಭಟನೆಯ ನೇತೃತ್ವವನ್ನು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ. ರಂಗನಾಥ್‌ ವಹಿಸಿದ್ದರು.

ಬೆಂಗಳೂರು ವಕೀಲರ ಸಂಘದ ನೇತೃತ್ವದಲ್ಲಿ ಸಿಟಿ ಸಿವಿಲ್‌ ಕೋರ್ಟ್‌ ಸಂಕೀರ್ಣದಿಂದ ಕೆ.ಆರ್‌. ವೃತ್ತ, ವಿಧಾನಸೌಧ ರಸ್ತೆ ಮಾರ್ಗವಾಗಿ ರಾಜಭವನಕ್ಕೆ ಶಾಂತಿಯುತ ಮೆರವಣಿಗೆಯಲ್ಲಿ ತೆರಳಿದ ವಕೀಲರು ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಬಳಿಕ ವಿಧಾನಸೌಧದಲ್ಲಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌ ಅವರನ್ನು ಭೇಟಿ ಮಾಡಿದ ಸಂಘದ ಪ್ರತಿನಿಧಿಗಳು, ಎಲ್ಲ ವಕೀಲರ ಸಂಘಗಳಿಗೆ ಕಚೇರಿ, ಕಟ್ಟಡ, ಗ್ರಂಥಾಲಯ ಸೇರಿ ಇತರೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕು. ವಕೀಲರ ಕಲ್ಯಾಣ ನಿಧಿಗೆ ಹಣ ಮೀಸಲಿಡಬೇಕು. ಹರಿಯಾಣ ಸರ್ಕಾರದ ಮಾದರಿಯಲ್ಲಿ ವಕೀಲರ ಮನೆ ನಿರ್ಮಾಣಕ್ಕೆ ಕಡಿಮೆ ದರದಲ್ಲಿ ಸರ್ಕಾರಿ ಜಮೀನು ಮಂಜೂರು ಮಾಡುವುದು ಸೇರಿ ಇನ್ನಿತರ ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಿದರು.

Advertisement

ಹೈಕೋರ್ಟ್‌ ಕಲಾಪ ಮೊಟಕು: ಹೈಕೋರ್ಟ್‌ನ ಎಲ್ಲ ನ್ಯಾಯಪೀಠಗಳು ಎಂದಿನಂತೆ ಬೆಳಗ್ಗೆ 10.30ಕ್ಕೆ ಕಲಾಪ ಆರಂಭಿಸಿದವು. ಆದರೆ, ಬೆಳಗ್ಗೆಯಿಂದಲೇ ವಕೀಲರ ಸಂಖ್ಯೆ ಕಡಿಮೆಯಿತ್ತು. ವಕೀಲರು ಗೈರಾದ ಅರ್ಜಿಗಳ ವಿಚಾರಣೆಯನ್ನು ನ್ಯಾಯಪೀಠಗಳು ಮುಂದೂಡಿದವು.

ಕೆಲ ನ್ಯಾಯಪೀಠಗಳಲ್ಲಿ ತಮ್ಮ ಅರ್ಜಿಗಳ ಸರದಿಗೆ ಕಾದಿದ್ದ ವಕೀಲರ ಬಳಿಗೆ ತೆರಳಿದ ಬೆಂಗಳೂರು ವಕೀಲರ ಸಂಘದ ಪದಾಧಿಕಾರಿಗಳು, ಪ್ರತಿಭಟನೆಗೆ ಸಹಕರಿಸುವಂತೆ ಕೋರಿದರು. ಅದಕ್ಕೆ ಸ್ಪಂದಿಸಿದ ವಕೀಲರು ಕೋರ್ಟ್‌ಹಾಲ್‌ಗ‌ಳಿಂದ ಹೊರ ನಡೆದರು. ವಕೀಲರು ವಿಚಾರಣೆಗೆ ಬಾರದ ಕಾರಣಕ್ಕೆ ಮಧ್ಯಾಹ್ನ 1ಗಂಟೆಯ ವೇಳೆಗೆ ಎಲ್ಲ ನ್ಯಾಯಪೀಠಗಳಲ್ಲಿ ಮಂಗಳವಾರದ ಕಲಾಪವನ್ನು ಕೊನೆಗೊಳಿಸಲಾಯಿತು.

ತಡೆಯಾಜ್ಞೆ ತೆರವುಗೊಳಿಸಿದ ನ್ಯಾಯಪೀಠ: ಇದೇ ವೇಳೆ ತಮ್ಮ ನ್ಯಾಯಪೀಠದಲ್ಲಿ ವಿಚಾರಣೆಗೆ ನಿಗದಿಯಾಗಿದ್ದ ಅರ್ಜಿಗಳ ಪೈಕಿ ವಕೀಲರು ಗೈರು ಹಾಜರಾದ ಪ್ರಕರಣಗಳಲ್ಲಿ ಈ ಹಿಂದೆ ಮಂಜೂರು ಆಗಿದ್ದ ಮಧ್ಯಂತರ ತಡೆಯಾಜ್ಞೆಯನ್ನು ನ್ಯಾ. ಮೈಕಲ್‌ ಕುನ್ಹಾ ತೆರವುಗೊಳಿಸಿದರು. ಕಲಾಪ ನಡೆಯುತ್ತಿದ್ದಾಗ ಪದೇ ಪದೆ ಹೆಸರು ಕೂಗಿದರೂ ವಕೀಲರು ಹಾಜರಾಗದ ಸುಮಾರು 20 ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ಹಿಂದೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ತೆರವುಗೊಳಿಸಿ ವಿಚಾರಣೆ ಮುಂದೂಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next