Advertisement

ಶಿಕ್ಷಕರ ನಿಯೋಜನೆಗೆ ಒತ್ತಾಯ

05:52 PM Jan 21, 2022 | Shwetha M |

ತಾಳಿಕೋಟೆ: ತಾಲೂಕಿನ ಭಂಟನೂರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಅಭಾವ ಇದ್ದು, ಕೂಡಲೇ ಶಿಕ್ಷಕರನ್ನು ನಿಯೋಜನೆ ಮಾಡಬೇಕು ಎಂದು ಒತ್ತಾಯಿಸಿ ವಿದ್ಯಾರ್ಥಿಗಳು ತರಗತಿ ಬಹಿಸ್ಕರಿಸಿ ಗ್ರಾಪಂ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

Advertisement

ಭಂಟನೂರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 230 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಇಲ್ಲಿ 7 ಶಿಕ್ಷಕರು ಇದ್ದರು. ಇದರಿಂದ ಇಲ್ಲಿ ಉತ್ತಮ ಶಿಕ್ಷಣವೂ ಸಿಗುತ್ತಿತ್ತು. ಆದರೆ ಕಳೆದ ವರ್ಗಾವಣೆಯಲ್ಲಿ 6 ಶಿಕ್ಷಕರು ವರ್ಗಾವಣೆಯಾಗಿದ್ದಾರೆ. ಇದರಿಂದ ಶಿಕ್ಷಕರ ಹುದ್ದೆಗಳ ಖಾಲಿ ಇವೆ. ಒಬ್ಬರು ಕಾಯಂ ಶಿಕ್ಷಕರು ಹಾಗೂ ಒಬ್ಬ ಅತಿಥಿ ಶಿಕ್ಷಕರಿದ್ದಾರೆ. 1ರಿಂದ 8ನೇ ತರಗತಿಗಳು ಇವೆ. 230 ವಿದ್ಯಾರ್ಥಿಗಳಿಗೆ ಇಬ್ಬರೇ ಶಿಕ್ಷಕರು ಪಾಠ ಮಾಡಲು ಸಾಧ್ಯವಾಗುತ್ತಿಲ್ಲ. ಸರಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳು ಇಲ್ಲ ಎನ್ನುವ ಆರೋಪಗಳಿಗೆ ಅಪವಾದ ಎನ್ನುವಂತೆ ನಮ್ಮ ಶಾಲೆಯಲ್ಲಿ ಕನಿಷ್ಠ 200ಕ್ಕೂ ಅಧಿಕ ವಿದ್ಯಾರ್ಥಿಗಳು ಇರುತ್ತಾರೆ. ಇಂತಹ ಶಾಲೆಗೆ ಎಲ್ಲ ಶಿಕ್ಷಕರರನ್ನು ಸಂವಿಧಾನಿಕ ವರ್ಗಾವಣೆ ಮಾಡಲಾಗಿದೆ. ಇದರಿಂದ ನಮ್ಮ ಶಿಕ್ಷಣಕ್ಕೆ ತೊಂದರೆಯಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.

ಈ ಕುರಿತು ಹಿರಿಯ ಅಧಿಕಾರಿಗಳು ಗಮನ ಹರಿಸಬೇಕು. 10 ದಿನದೊಳಗಾಗಿ ಶಿಕ್ಷಕರನ್ನು ನಿಯೋಜನೆ ಮಾಡಬೇಕು. ಇಲ್ಲದಿದ್ದರೆ ಮತ್ತೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಶಿಕ್ಷಣ ಇಲಾಖೆ ಅಧಿಕಾರಿಗಳ ಗೈರಿನಲ್ಲಿ ಪಿಡಿಒ ಎಸ್‌.ಐ. ದಳವಾಯಿ ಮನವಿ ಸ್ವಿಕರಿಸಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.

ಗ್ರಾಮದ ಮುಖಂಡರಾದ ಶಾಂತಗೌಡ ನಾವದಾಗಿ, ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಬಸವರಾಜ ಸಿಂಗನಹಳ್ಳಿ, ಮಲ್ಲನಗೌಡ ಆನೆಸೂರ, ಹಣಮಂತರಾಯ ತಳಹಳ್ಳಿ, ಸಾಯಬಣ್ಣ ತಳಹಳ್ಳಿ, ಕಿರಣ ಛಲವಾದಿ, ವಿದ್ಯಾರ್ಥಿಗಳಾದ ಜ್ಯೋತಿ, ಮಂಜುಳಾ, ಭಾಗ್ಯಶ್ರೀ, ಚಂದ್ರಕಲಾ, ದೇವಮ್ಮ, ಮಾಯಾದೇವಿ, ಶಾಲಿನಿ, ಮಂಜುಳಾ, ಮುತ್ತುರಾಜ, ಸಾಗರ ಸೇರಿದಂತೆ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next