Advertisement

ನಿವೇಶನ ಹಂಚಿಕೆಗೆ ಒತ್ತಾಯ

03:22 PM Dec 18, 2018 | Team Udayavani |

ರಾಯಚೂರು: ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡುವುದು ಸೇರಿ ವಿವಿಧ ಬೇಡಿಕೆ ಈಡೇರಿಸಲು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಕೊಳಗೆರೆ ನಿವಾಸಿಗಳ ಸಭೆ ಕರೆಯಬೇಕು ಎಂದು ಒತ್ತಾಯಿಸಿ ರಾಯಚೂರು ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆ ಪದಾಧಿಕಾರಿಗಳು ಹಾಗೂ ಸದಸ್ಯರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

Advertisement

ಸ್ವಂತ ಮನೆಯಿಲ್ಲದೇ ಸ್ಲಂ ನಿವಾಸಿಗಳು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಹಲವಾರು ವರ್ಷಗಳಿಂದ ಹೋರಾಟ
ನಡೆಸುತ್ತ ಬರಲಾಗಿದೆ. ಆದರೆ, ಈ ಬಗ್ಗೆ ಜಿಲ್ಲಾಡಳಿತ ಸ್ಪಂದಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಿವೇಶನ ರಹಿತರಿಗೆ ನಿವೇಶನಗಳು ಮಂಜೂರಾಗಿ ಎರಡು ವರ್ಷಗಳು ಕಳೆದಿದೆ. ಇನ್ನೂ ಹಂಚಿಕೆ ಮಾಡಿಲ್ಲ. ಫಲಾನುಭವಿಗಳಿಗೆ ಹಕ್ಕುಪತ್ರ ನೀಡಿ ಸಮಾಧಾನ ಪಡಿಸಲಾಗಿದೆ. ಅಘೋಷಿತ ಕೊಳಚೆ ಪ್ರದೇಶಗಳನ್ನು ಘೋಷಣೆ ಮಾಡಲು ಅರ್ಜಿ ಸಲ್ಲಿಸಿ 10 ವರ್ಷ ಕಳೆದರೂ ಯಾವುದೇ ಪ್ರಕ್ರಿಯೆ ನಡೆದಿಲ್ಲ ಎಂದು ದೂರಿದರು.

94 ಸಿಸಿ ಅರ್ಜಿ ಸಲ್ಲಿಸಿ ವರ್ಷಗಳು ಕಳೆದರೂ ಅರ್ಜಿಗಳ ವಿವೇವಾರಿ ಆಗಿಲ್ಲ. ಕಂದಾಯ ಇಲಾಖೆಯಲ್ಲಿ ಅರ್ಜಿಗಳು ಕೊಳೆಯುತ್ತಿವೆ. ಅಕ್ರಮವಾಗಿ ನಿರ್ಮಿಸಿಕೊಂಡಿರುವ ಮನೆಗಳನ್ನು ಸಕ್ರಮಗೊಳಿಸಲು ಶಾಸಕರು ತೀರ್ಮಾನಿಸಿದರ ನಗರಸಭೆಯಿಂದ ನಿರ್ಲಕ್ಷ್ಯ ಧೋರಣೆ ಅನುಸರಿಸಲಾಗುತ್ತಿದೆ ಎಂದು ಆಪಾದಿಸಿದರು.

ನಗರದಲ್ಲಿ ಒಳಚರಂಡಿ ಕಾಮಗಾರಿ ಪೂರ್ಣಗೊಂಡಿಲ್ಲ. ಕೊಳಚೆ ಪ್ರದೇಶದಲ್ಲಿ ಒಳಚರಂಡಿ ಕಾಮಗಾರಿ ಮಾಡದೇ ಕಾಮಗಾರಿ ಪೂರ್ಣಗೊಂಡಿದೆ ಎಂದು ಹೇಳಲಾಗುತ್ತಿದೆ. ವೈಯಕ್ತಿಕ ಶೌಚಗೃಹಗಳನ್ನು ನಿರ್ಮಿಸಿಕೊಳ್ಳದೇ ಬಹಿರ್ದೇಸೆಗೆ ಹೋಗುವವರ ವಿರುದ್ಧ ಕ್ರಮ ಜರುಗಿಸಲು ಪೌರಾಯುಕ್ತರು ಆದೇಶ ನೀಡಿರುವುದು ಖಂಡನೀಯ ಎಂದರು.

Advertisement

ಒಳಚರಂಡಿ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸಿ ಕಪ್ಪುಪಟ್ಟಿಗೆ ಸೇರಿಸಬೇಕು. ಸ್ವತ್ಛ ಭಾರತ ಯೋಜನೆಯಡಿ ಎಲ್ಲ ಕೊಳಚೆ ಪ್ರದೇಶಗಳಲ್ಲಿ ವೈಯಕ್ತಿಕ ಶೌಚಾಲಯ ಕಾಮಗಾರಿ ಪೂರ್ಣಗೊಳಿಸಬೇಕು ಹಾಗೂ ಅಘೋಷಿತ ಕೊಳಚೆ ಪ್ರದೇಶಗಳನ್ನು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ 1050 ಮನೆಗಳ ಕಾಮಗಾರಿ ವಿಳಂಬವಾಗಿದ್ದು, ತ್ವರಿತವಾಗಿ ಕೈಗೊಂಡು ಜನರಿಗೆ ಅನುಕೂಲ ಮಾಡಬೇಕು. ಸ್ವತ್ಛತೆ ಇಲ್ಲದ ಪರಿಣಾಮ ಡೆಂಘೀ, ಮಲೇರಿಯಾದಂತಹ ರೋಗಗಳಿಗೆ ತುತ್ತಾಗುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೊಳಚೆ ಪ್ರದೇಶದಲ್ಲಿ ಸೊಳ್ಳೆ ಕಾಟದಿಂದ ಬಹಳಷ್ಟು ತೊಂದರೆಗಳನ್ನು ಎದುರಿಸುವಂತಾಗಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ಜರುಗಿಸಬೇಕು ಎಂದು ಒತ್ತಾಯಿಸಿದರು. ಅಧ್ಯಕ್ಷ ಜನಾರ್ದನ ಹಳ್ಳಿಬೆಂಚಿ, ವೆಂಕಟೇಶ ಭಂಡಾರಿ, ನಗರಸಭೆ ಸದಸ್ಯ ಎನ್‌.ಕೆ.ನಾಗರಾಜ, ಆರ್‌. ಆಂಜನೇಯ, ವೆಂಕಟೇಶ, ನಾಗರಾಜ, ವೀರೇಶ, ರಾಮಕೃಷ್ಣ, ತಾಯಪ್ಪ, ನೂರ್‌ಜಾನ್‌ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next