Advertisement

ಪಾಲಿಕೆ ವ್ಯಾಪ್ತಿಯಲ್ಲಿ ಹದಗೆಟ್ಟ ರಸ್ತೆ, ಚರಂಡಿ ದುರಸ್ತಿಗೊಳಿಸುವಂತೆ ಒತ್ತಾಯ

02:21 PM Dec 24, 2019 | Team Udayavani |

ಬಳ್ಳಾರಿ : ಮಹಾನಗರ ಪಾಲಿಕೆ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ಸ್ವಚ್ಛತೆ ಕಾಪಾಡಬೇಕೆಂದು ಒತ್ತಾಯಿಸಿ ಸಂಬಂಧಪಟ್ಟ ಪಾಲಿಕೆ ಅಧಿಕಾರಿಗಳು ಕೂಡಲೇ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಬಳ್ಳಾರಿ ನಾಗರಿಕ ಹೋರಾಟ ಸಮಿತಿ ಪದಾಧಿಕಾರಿಗಳು ಪಾಲಿಕೆ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

Advertisement

ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛತೆ ಮಾಯವಾಗಿದೆ. ಎಲ್ಲೆಂದರಲ್ಲಿ ತ್ಯಾಜ್ಯ ಸಂಗ್ರಹವಾಗುತ್ತಿದೆ. ಪರಿಣಾಮ ಸೊಳ್ಳೆಗಳ ಉಪಟಳ ಹೆಚ್ಚುತ್ತಿದೆ. ಜನರು ನಾನಾ ರೋಗಗಳು ಆವರಿಸುವ ಆತಂಕ ಎದುರಿಸುತ್ತಿದ್ದಾರೆ. ಈ ಕುರಿತು ಸಂಬಂಧಪಟ್ಟ ಪಾಲಿಕೆ ಅಧಿಕಾರಿಗಳ ಗಮನಸೆಳೆದರೂ ಪ್ರಯೋಜನವಾಗುತ್ತಿಲ್ಲ. ಇದರಿಂದ ಸಾರ್ವಜನಿಕರು ಪರದಾಡುವಂತಾಗಿದೆ ಎಂದು ಪ್ರತಿಭಟನಾನಿರತರು ಅಸಮಾಧಾನ ವ್ಯಕ್ತಪಡಿಸಿದರು. ನಗರದಲ್ಲಿ ಕೆಲವೆಡೆ ತೆರೆದ, ಒಳಚರಂಡಿಯಿಂದ ತ್ಯಾಜ್ಯ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ದುರ್ನಾಥ ಬೀರುತ್ತಿದೆ. ಕೇಬಲ್‌ ಅಳವಡಿಕೆ ಸೇರಿ ವಿವಿಧ ಅಭಿವೃದ್ಧಿ ನೆಪವೊಡ್ಡಿ ಸುಸಜ್ಜಿತವಾಗಿರುವ ರಸ್ತೆಗಳನ್ನು ಅಗೆದು ಸಂಚಾರಕ್ಕೆ ಅಡ್ಡಿಯುಂಟು ಮಾಡುವುದಲ್ಲದೇ, ಅಗೆದ ರಸ್ತೆಗಳನ್ನು ದುರಸ್ತಿಗೊಳಿಸದೇ ಬಿಡುವುದರಿಂದ ಗುಂಡಿಗಳು ಬಿದ್ದು, ಮಳೆನೀರು ನಿಂತು ರಸ್ತೆಗಳು ಮತ್ತಷ್ಟು ಹದಗೆಡುತ್ತಿವೆ. ಜನಸಾಮಾನ್ಯರಿಗೆ ಮೂಲಸೌಲಭ್ಯ ಕಲ್ಪಿಸಬೇಕಿದ್ದ ಪಾಲಿಕೆಯು ನಗರದಲ್ಲಿ ಅಸ್ತಿತ್ವದಲ್ಲಿ ಇದೆಯೋ ಅಥವಾ ಇಲ್ಲವೋ ಎಂಬ ಅನುಮಾನ ನಾಗರಿಕರನ್ನು ಕಾಡುತ್ತಿದೆ ಎಂದು ದೂರಿದರು.

ಮಹಾನಗರ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯ ದಿಂದ ನಗರದ ಸೌಂದರ್ಯ ಸಂಪೂರ್ಣ ಹದಗೆಟ್ಟಿದೆ. ಇಲ್ಲಿನ ವಿಶಾಲ್‌ ನಗರ, ಹನುಮಾನ್‌ ನಗರ, ಸಂಗಂ ರಸ್ತೆ ಸೇರಿದಂತೆ ನಾನಾ ಕಡೆ ನಿರ್ವಹಣೆ ಕೊರತೆಯಿಂದ ಚರಂಡಿ ತ್ಯಾಜ್ಯ ನೀರು ರಸ್ತೆ ಮೇಲೆ ಹರಿಯುತ್ತಿದೆ. ದುರ್ನಾತ ಹರಡಿದೆ. ಕೂಡಲೇ ಅಧಿಕಾರಿಗಳು ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ನಿರ್ಲಕ್ಷಿಸಿದರೆ ಪಾಲಿಕೆ, ಅಧಿಕಾರಿಗಳ ವಿರುದ್ಧ ಉಗ್ರಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಾನಿರತರು ಎಚ್ಚರಿಸಿದರು. ಎಲ್ಲ ಬಡಾವಣೆಗಳಿಗೆ ಕನಿಷ್ಠ ಎರಡು-ಮೂರು ದಿನಕ್ಕೊಮ್ಮೆ ಶುದ್ಧ ಕುಡಿವ ನೀರು ಸರಬರಾಜು ಮಾಡಬೇಕು. ನಗರದಲ್ಲಿ ಬೀದಿ ನಾಯಿಗಳು. ಹಂದಿಗಳು, ಸೊಳ್ಳೆಗಳ ಉಪಟಳಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ರಸ್ತೆ ಮೇಲೆ ಬಿಡಾಡಿ ದನಗಳ ಹಾವಳಿಗೆ ಕಡಿವಾಣ ಹಾಕಬೇಕು ಸೇರಿದಂತೆ ಇನ್ನಿತರೆ ಬೇಡಿಕೆಗಳನ್ನು ಎಐಡಿಎಸ್‌ಒ ರಾಜ್ಯಾಧ್ಯಕ್ಷ ಡಾ| ಪ್ರಮೋದ್‌ ಈಡೇರಿಸಬೇಕು ಎಂದು ಒತ್ತಾಯಿಸಿದರು. ಬಳಿಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಸಮಿತಿ ಸಂಚಾಲಕ ಆರ್‌. ಸೋಮಶೇಖರ್‌ಗೌಡ, ಮುತ್ತುಜಾಸಾಬ್‌, ಗೋವಿಂದ್‌, ಈಶ್ವರಿ, ವಿವಿಧ ಬಡಾವಣೆಯ ಮುಖಂಡರಾದ ಮಹ್ಮದ್‌ ಜಾಫರ್‌, ರಂಗನಾಥ್‌ಬಾಬು, ನಾಗೇಂದ್ರ, ಹರಿನಾಥ್‌, ಪಾಪಣ್ಣ, ತಿಪ್ಪೇಸ್ವಾಮಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next