ರಾಣಿಬೆನ್ನೂರ: ವಿವಿಧ ವಸತಿ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಹಣ ಬಿಡುಗಡೆಯಾಗದ ಕಾರಣ ಅನೇಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಫಲಾನುಭವಿಗಳಿಗೆ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ, ರೈತ ಸಂಘದ ಕಾರ್ಯಕರ್ತರು ಮತ್ತು ಫಲಾನುಭವಿಗಳು ಮಂಗಳವಾರ ನಗರದಲ್ಲಿ ಪ್ರತಿಭಟಿಸಿ ತಾಪಂ ಇಒ ಎಸ್.ಎಂ.ಕಾಂಬಳೆ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ರೈತ ಸಂಘದ ತಾಲೂಕು ಅಧ್ಯಕ್ಷ ಹನುಮಂತಪ್ಪ ಕಬ್ಟಾರ ಮಾತನಾಡಿ, 2017-18ನೇ ಸಾಲಿನಲ್ಲಿ ಒಟ್ಟು 5616 ಮನೆಗಳು ಮಂಜೂರಾಗಿವೆ. ಸಂಭಂಧಿಸಿದಂತೆ ಹಣ ಮಂಜೂರಾಗದೇ ನಿರ್ಮಾಣ ಹಂತದಲ್ಲಿರುವ 3436 ಮನೆಗಳು ಪೂರ್ಣಗೊಳ್ಳದೇ ಅಪೂರ್ಣವಾಗಿದೆ. ಕೆಲವು ಮನೆಗಳು ಸಂಪೂರ್ಣವಾಗಿ ನಿರ್ಮಾಣಗೊಂಡಿದ್ದರು. ಈವರೆಗೂ ಒಂದು ಬಿಲ್ ಸಹ ನೀಡಿಲ್ಲ. ಕೂಡಲೇ ಈ ಹಣವನ್ನು ಬಿಡುಗಡೆಗೊಳಿಸಿ ಫಲಾನುಭವಿಗಳಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.
ಮೊದಲನೇಯ ಹಂತದಲ್ಲಿ ಕೆಲವು ಮನೆಗಳಿಗೆ ಬಿಡುಗಡೆಯಾಗಿರುವ ಮೊತ್ತ ಕೇವಲ ಪ್ಲಿಂತ್ ಹಾಕುವುದಕ್ಕೂ ಸಾಧ್ಯವಾಗುವುದಿಲ್ಲ. ಫಲಾನುಭವಿಗಳು ಸಾಲ-ಸೂಲ ಮಾಡಿ ಮನೆಗಳನ್ನು ಕಟ್ಟಿಸಿಕೊಂಡಿದ್ದಾರೆ. ಎರಡು-ಮೂರು ವರ್ಷಗಳು ಗತಿಸಿದರೂ ಅವರಿಗೆ ಸಂದಾಯವಾಗಬೇಕಾದ ಮನೆಗಳು ಬಿಲ್ ಸಂದಾಯವಾಗಿಲ್ಲ. ಕೂಡಲೇ ಇಲ್ಲಿಯವರೆಗೂ ಎಷ್ಟು ಹಣ ಬಿಡುಗಡೆಯಾಗಿದೆ? ಯಾರಿಗೆ ಬಿಡುಗಡೆಯಾಗಬೇಕು ಎನ್ನುವುದನ್ನು? ಸ್ಪಷ್ಟಪ ಡಿಸಬೇಕು ಎಂದು ಆಗ್ರಹಿಸಿದ ಅವರು, ಸಾಲ ಮಾಡಿಕೊಂಡು ಮನೆ ಕಟ್ಟಿದ ಫಲಾನುಭವಿಗಳಿಗೆ ಯಾವುದೇ ಸಬೂಬು ನೀಡಿದೇ ತಕ್ಷಣವೇ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ, ಪ್ರತಿಭಟನೆಗೆ ಮುಂದಾಗುವುದು ಅನಿವಾರ್ಯವಾಗುತ್ತದೆ ಎಂದು ಕಬ್ಟಾರ ಎಚ್ಚರಿಸಿದರು.
ಫಕ್ಕೀರೇಶ ರಂಗರಡ್ಡಿ, ಬಿ.ಕೆ,ರಾಜನಹಳ್ಳಿ, ಕಿರಣ ಗೂಳೇದ, ಮಂಜಪ್ಪ ಬಿ.ಎಚ್, ದಮಳಪ್ಪ ಮೇಗಳಮನಿ, ಮಲ್ಲೇಶ ಕೋಣನವರ, ಸಿದ್ದಪ್ಪ ಗುಡಿಮಲ್ಲಪ್ಪನವರ, ನಾಗಪ್ಪ ಕೊರವರ, ದಿಳ್ಳೆಪ್ಪ ಅಣ್ಣೇರ, ಮಂಜಪ್ಪ ಮಾಸೂರ, ಮಹೇಶ ಲಮಾಣಿ, ಸುನೀಲ ದೇವರಗುಡ್ಡ, ವಿನಾಯಕ ಬಸನಗೌಡ್ರ, ಮಂಜುನಾಥ ಜಗಟ್ಟಿ, ಸಂಕಪ್ಪ ಕುಂಚಿಕೊರವರ, ಮೇಘನಾ ಕಂಚರಗಟ್ಟಿ, ಗೌರಮ್ಮ ನಡುವಿನಮನಿ ಸೇರಿದಂತೆ ನೂರಾರು ಫಲಾನುಭವಿಗಳು ಪ್ರತಿಭಟನೆಯಲ್ಲಿ ಇದ್ದರು.