Advertisement

ಹೊಸ ಕೈಗಾರಿಕಾ ನೀತಿಯಲ್ಲಿ ಹೈ.ಕಕ್ಕೆ ಆದ್ಯತೆ ನೀಡಲು ಒತ್ತಾಯ

05:40 AM Jan 12, 2019 | Team Udayavani |

ಕಲಬುರಗಿ: ಹೈದ್ರಾಬಾದ-ಕರ್ನಾಟಕ ಭಾಗದಲ್ಲಿ ಕೈಗಾರಿಕೋದ್ಯಮ ಮತ್ತು ನಿರುದೋಗ್ಯ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಮುಂಬರುವ ಹೊಸ ಕೈಗಾರಿಕಾ ನೀತಿಯಲ್ಲಿ ರಾಜ್ಯ ಸರ್ಕಾರ ಈ ಪ್ರದೇಶಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿ, ವಿಶೇಷ ವಾಣಿಜ್ಯ ವಲಯ ಸ್ಥಾಪಿಸಬೇಕೆಂದು ಹೈದ್ರಾಬಾದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಅಮರನಾಥ ಸಿ. ಪಾಟೀಲ ಮನವಿ ಮಾಡಿದರು.

Advertisement

ಎಚ್ಕೆಸಿಸಿಐ ಸಭಾಂಗಣದಲ್ಲಿ ಶುಕ್ರವಾರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ, ಹೈದ್ರಾಬಾದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಕೆ-ಲ್ಯಾಂಪ್‌, ಗುಲಬರ್ಗಾ ದಾಲ್‌ ಮಿಲ್ಲರ್ಸ್‌ ಅಸೋಸಿಯೇಷನ್‌ ಮತ್ತು ಗುಲಬರ್ಗಾ ಕೈಗಾರಿಕಾ ಪ್ರದೇಶ ಉತ್ಪಾದಕರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕೈಗಾರಿಕಾ ನೀತಿ 2014-19 ಮತ್ತು ಉದ್ದೇಶಿತ ಹೊಸ ಕೈಗಾರಿಕಾ ನೀತಿ ಹಾಗೂ ಸುಗಮ ವಾಣಿಜ್ಯ ವ್ಯವಹಾರ ನಡೆಸುವಿಕೆಗಾಗಿ ಸಲಹೆಗಳ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ನೆರೆಯ ತೆಲಂಗಾಣದಲ್ಲಿ 66ಕ್ಕೂ ಹೆಚ್ಚು ವಿಶೇಷ ವಾಣಿಜ್ಯ ವಲಯಗಳು ಇವೆ. ಆದರೆ, ನಮ್ಮ ರಾಜ್ಯದಲ್ಲಿ ಕೆಲವೇ ಕೆಲವು ವಿಶೇಷ ವಾಣಿಜ್ಯ ವಲಯಗಳು ಇವೆ. ಹೈ.ಕ ಭಾಗಕ್ಕೆ 371ನೇ (ಜೆ) ಕಲಂ ಅಡಿ ವಿಶೇಷ ಸ್ಥಾನಮಾನ ಲಭಿಸಿದ್ದರೂ ಅದು ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಕ್ಕೆ ಮಾತ್ರ ಸೀಮಿತವಾಗಿದೆ. 371ನೇ (ಜೆ) ಕಲಂನಲ್ಲಿ ಕೈಗಾರಿಕೆಗೆ ಯಾವ ರೀತಿಯ ಪ್ರಾಶಸ್ತ್ಯ ಸಿಗುತ್ತಿದೆ ಎನ್ನುವ ಕುರಿತು ಚರ್ಚೆ ನಡೆಯಬೇಕು. ಜತೆಗೆ ಹೈ.ಕ ಭಾಗದಲ್ಲಿ ಕೇವಲ ಸಿಮೆಂಟ್, ಶಾಖೋತ್ಪನ್ನ ಕೇಂದ್ರಗಳ ಸ್ಥಾಪನೆಗೆ ಹೆಚ್ಚಿನ ಆದ್ಯತೆ ನೀಡದೆ, ಪರಿಸರ ಸ್ನೇಹಿ ಕೈಗಾರಿಕೆಗಳ ಸ್ಥಾಪನೆಗೂ ಸರ್ಕಾರ ಗಮನ ಹರಿಸಬೇಕೆಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಉಪಾಧ್ಯಕ್ಷ ಆರ್‌. ರಾಜು ಮಾತನಾಡಿ, 1983ರಲ್ಲಿ ಕೈಗಾರಿಕಾ ನೀತಿ ಜಾರಿಗೆ ತಂದ ದೇಶದ ಮೊದಲ ರಾಜ್ಯ ಕರ್ನಾಟಕವಾಗಿದೆ. ಇದರಿಂದ ಕೈಗಾರಿಕೆಯಲ್ಲಿ 77ನೇ ಸ್ಥಾನದಲ್ಲಿದ್ದ ಕರ್ನಾಟಕ 2016ರ ವೇಳೆಗೆ 8ನೇ ಸ್ಥಾನಕ್ಕೆ ಜಿಗಿಯಲು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಒಂದನೇ ಸ್ಥಾನಕ್ಕೇರುವ ಅವಕಾಶಗಳಿವೆ. ಆದ್ದರಿಂದ ಈಗಿರುವ ಕೈಗಾರಿಕಾ ನೀತಿಯಲ್ಲಿನ ಕೆಲ ನ್ಯೂನತೆ ಸರಿಪಡಿಸಿಕೊಂಡು ಹೊಸ ಕೈಗಾರಿಕಾ ನೀತಿ ಸಿದ್ಧ ಪಡಿಸಬೇಕು ಎಂದರು.

ಮುಖ್ಯ ಅತಿಥಿಯಾಗಿದ್ದ ಬೆಂಗಳೂರಿನ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಗ್ರಾಮದ ಉದ್ದಿಮೆಗಳ (ಎಂಎಸ್‌ಎಂಇ)ಅಪರ ನಿರ್ದೇಶಕ, ಎಂಎಸ್‌ಎಫ್‌ಸಿ ಸದಸ್ಯ ಕಾರ್ಯದರ್ಶಿ ಎಚ್.ಎಂ. ಶ್ರೀನಿವಾಸ, ಕೈಗಾರಿಕಾ ನೀತಿ 2014-19 ಹಾಗೂ ಎಂಎಸ್‌ಎಂಇ ವಿಳಂಬ ಪಾವತಿ ಕಾಯ್ದೆ-2006 ಕಾಯ್ದೆ ಕುರಿತು ಮಾಹಿತಿ ನೀಡಿದರು.

Advertisement

ಹೈ.ಕ ಭಾಗದಲ್ಲಿ ಸಣ್ಣ ಕೈಗಾರಿಕೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಆರು ಜಿಲ್ಲೆಗಳಲ್ಲಿ 11 ತಾಲೂಕುಗಳನ್ನು ಅತಿ ಹಿಂದುಳಿದ ಹಾಗೂ 20 ತಾಲೂಕುಗಳನ್ನು ಅತ್ಯಂತ ಹಿಂದುಳಿದ ತಾಲೂಕುಗಳೆಂದು ಗುರುತಿಸಿ ಪ್ರೋತ್ಸಾಹಿಸಲಾಗುತ್ತಿದೆ. ಬಂಡವಾಳ ಹೂಡಿಕೆ ಸಹಾಯಧನ, ಮುದ್ರಾಂಕ ಶುಲ್ಕದಿಂದ ವಿನಾಯಿತಿ, ರಿಯಾಯ್ತಿ ನೋಂದಣಿ ಶುಲ್ಕ, ಭೂಪರಿವರ್ತನಾ ಶುಲ್ಕದ ಮರುಪಾವತಿ, ತ್ಯಾಜ್ಯ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಸಹಾಯಧನ, ಸೂಕ್ಷ್ಮ ಘಟಕಗಳಿಗೆ ಬಡ್ಡಿ ಸಹಾಯಧನ ಹಾಗೂ ವಿದ್ಯುತ್‌ ದರದ ಮೇಲಿನ ತೆರಿಗೆ ವಿನಾಯಿತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಬೆಂಗಳೂರಿನ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸಿದ್ದಲಿಂಗಯ್ಯ ಪೂಜಾರಿ, ಕೆಎಸ್‌ಎಫ್‌ಸಿ ಸಹಾಯಕ ಪ್ರಧಾನ ವ್ಯವಸ್ಥಾಪಕ ಡಾ| ಗಣಪತಿ ರಾಠೊಡ, ಸಿ.ಎನ್‌. ಮಂಜಪ್ಪ, ಜಿಲ್ಲಾ ಕೈಗಾರಿಕಾ ಕೇಂದ್ರದ ಪ್ರಭಾರ ಜಂಟಿ ನಿರ್ದೇಶಕಿ ಸುರೇಖಾ ಮನೋಲಿ, ಗುಲಬರ್ಗಾ ದಾಲ್‌ ಮಿಲ್ಲರ್ಸ್‌ ಅಸೋಸಿಯೇಷನ್‌ ಅಧ್ಯಕ್ಷ ಡಾ| ಚಿದಂಬರರಾವ್‌ ಪಾಟೀಲ, ಎಚ್ಕೆಸಿಸಿಐ ಕಾರ್ಯದರ್ಶಿ ಶಶಿಕಾಂತ ಬಿ.ಪಾಟೀಲ ಮತ್ತು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಪದಾಧಿಕಾರಿಗಳು ಇದ್ದರು.

ಸಣ್ಣ ಕೈಗಾರಿಕೋದ್ಯಮಗಳ ಉತ್ತೇಜನ ಮತ್ತು ಅಭಿವೃದ್ಧಿಗೆ ಸಕಲ ನೆರವು ನೀಡುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.

ಖನೀಜ್‌ ಫಾತೀಮಾ, ಶಾಸಕಿ, ಉತ್ತರ ಕ್ಷೇತ್ರ

ದಾಲ್‌ಮಿಲ್‌ಗ‌ಳ ಪುನಶ್ಚೇತನಕ್ಕೆ ಜಿಲ್ಲಾಡಳಿತ ವರದಿ ಸಲ್ಲಿಸಿ ಒಂದು ವರ್ಷ ಕಳೆಯುತ್ತಿದೆ. ಆದರೆ, ಸರ್ಕಾರದ ನಿರ್ಲಕ್ಷ್ಯದಿಂದ ವರದಿ ಧೂಳು ಹಿಡಿಯುತ್ತಿದೆ.

ಡಾ| ಚಿದಂಬರರಾವ್‌ ಪಾಟೀಲ, ಅಧ್ಯಕ್ಷ, ಗುಲಬರ್ಗಾ ದಾಲ್‌ ಮಿಲ್ಲರ್ಸ್‌ ಅಸೋಸಿಯೇಷನ್‌ 

2019-24ರ ಹೊಸ ಕೈಗಾರಿಕಾ ನೀತಿಯಲ್ಲಿ ಹೈ.ಕ ಭಾಗಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕೆಂದು ಸರ್ಕಾರಕ್ಕೆ ಎಚ್ಕೆಸಿಸಿಐ ಮನವಿ ಮಾಡಿದೆ. ಅದರ ಪ್ರಮುಖಾಂಶಗಳು.

ಹೈ.ಕ ಭಾಗದಲ್ಲಿ ವಿಶೇಷ ವಾಣಿಜ್ಯ ವಲಯ ಸ್ಥಾಪಿಸಬೇಕು.
ಕಲಬುರಗಿಯಲ್ಲಿ ಎರಡು ಸಾವಿರ ಎಕರೆಯಲ್ಲಿ ಕೈಗಾರಿಕಾ ಕಾರಿಡಾರ್‌ ಅಭಿವೃದ್ಧಿ ಪಡಿಸಬೇಕು.
2014ರಲ್ಲಿ ಮಂಜೂರಾದ ಕಲಬುರಗಿಯ ರಾಷ್ಟ್ರೀಯ ಹೂಡಿಕೆ ಮತ್ತು ಉತ್ಪನ್ನಗಳ ವಲಯ (ನಿಮ್‌್ಜ ) ಸ್ಥಾಪಿಸಬೇಕು.
ದಾಲ್‌ ಮಿಲ್‌ಗ‌ಳನ್ನು ಕೃಷಿ ಆಧಾರಿತ ಕೈಗಾರಿಕೆ ಎಂದು ಸ್ಪಷ್ಟಪಡಿಸಬೇಕು.
ಕಲಬುರಗಿ ಹಾಗೂ ಜೇವರ್ಗಿಯಲ್ಲಿ ಫುಡ್‌ ಪಾರ್ಕ್‌ ತ್ವರಿತವಾಗಿ ಪ್ರಾರಂಭಿಸಬೇಕು.
ಎನ್‌ಪಿಎ ಕೈಗಾರಿಕೆ ಮರು ವ್ಯಾಖ್ಯಾನಿಸಬೇಕು.
ಕೆ-ಲ್ಯಾಂಪ್‌ಗೆ ವಿಶೇಷ ಪ್ರಾತಿನಿಧ್ಯ ನೀಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next