ಕೊಪ್ಪಳ: ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನಿರ್ವಹಿಸಿದ ಕೂಲಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ಕೂಲಿಕಾರರ ಸಂಘದಿಂದ ನಗರದ ಜಿಪಂನ ಸಿಇಒ ಕಚೇರಿ ಮುಂದೆ ಧರಣಿ ನಡೆಸಿ ಮನವಿ ಸಲ್ಲಿಸಿದರು.
ತಾಲೂಕಿನಲ್ಲಿ ಗ್ರಾಮೀಣ ಜನರಿಗೆ ನಿರುದ್ಯೋಗ ಹೆಚ್ಚಿದೆ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಭ್ರಷ್ಟಾಚಾರದಿಂದ ಕೂಡಿದೆ. ಕೆಲವೆಡೆ ಕೆಲಸ ನಿಂತು ಹೋಗಿದೆ. ಕೂಲಿಕಾರರ ವಲಸೆ ಹೆಚ್ಚಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಬಡ ಕೃಷಿ ಕೂಲಿಕಾರರೇ ಹೆಚ್ಚಾಗಿ ವಾಸಿಸುತ್ತಿದ್ದು, ಅವರಿಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಮರ್ಪಕವಾಗಿ ಉದ್ಯೋಗ ಒದಗಿಸುತ್ತಿಲ್ಲ. ಕಂಪ್ಯೂಟರ್ ಆಪರೇಟರ್‌ಗಳ ಕಿರುಕುಳ ಹೆಚ್ಚಾಗಿದೆ. ಜೆಇಗಳು ಕೂಲಿಕಾರರಿಗೆ ಕಿರುಕುಳ ನೀಡುವುದು ನಡೆದಿದೆ. ಗ್ರಾಮ ಪಂಚಾ¿ತ್‌ಗಳಲ್ಲಿಅಭಿವೃದ್ಧಿ ಅಧಿಕಾರಿಗಳು ಕೂಲಿಕಾರರಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಕೆಲಸ ಮಾಡಿದ ಕೂಲಿಕಾರರಿಗೆ ಕೂಲಿ ಹಣ ಪಾವತಿ ಮಾಡಬೇಕು. ಖಾತ್ರಿ ಕೆಲಸ ಮಾಡಿದ ಕೂಲಿಕಾರರಿಗೆ ಯಾವುದೇ ಕಾರಣಕ್ಕೂ ಕೂಲಿ ಹಣ ಕಡಿತ ಮಾಡಬಾರದು. ಕೂಲಿಕಾರರಿಗೆ ಅಧಿಕಾರಿಗಳು ಕೆಲಸದ ಸ್ಥಳದ ಉದ್ದಳತೆಯ ಮಾಹಿತಿ ನೀಡಬೇಕು. ಕೂಲಿಕಾರರಿಗೆ ಅಧಿಕಾರಿಗಳು ಎಲ್ಲ ಗ್ರಾಮ ಪಂಚಾಯತಿಗಳಲ್ಲಿ 2019-20ನೇ ಮತ್ತು 2020-21ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆ ಕಡ್ಡಾಯವಾಗಿ ನೀಡಬೇಕು. ಗ್ರಾಮ ಪಂಚಾಯಿತಿಗಳಲ್ಲಿ ಜಮಾಬಂದಿ ದೃಢೀಕೃತ ನಕಲು ಪ್ರತಿಯನ್ನು ನೀಡಬೇಕು. ಕೂಲಿ ಕೆಲಸ ಮಾಡುವ ಸ್ಥಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಕೆಲಸಕ್ಕೆ ಫಾರಂ ನಂ. 6ನ್ನು ನೀಡಿದಾಗ ಕೂಲಿಕಾರರಿಗೆ ಸಕಾಲದಲ್ಲಿ ಕೆಲಸ ಒದಗಿಸಬೇಕು ಎಂದು ಒತ್ತಾಯಿಸಿದರು.
ಕೂಲಿಕಾರರು ಕೆಲಸ ಮುಗಿಸಿದ ನಂತರ ಎಫ್‌ಟಿಒ ಕಾಪಿ ಒಂದು ವಾರದ ಒಳಗೆ ನೀಡಬೇಕು. ಕೂಲಿಕಾರರಿಗೆ ಪ್ರಯಾಣ ಭತ್ತೆಯನ್ನು ಸಮರ್ಪಕವಾಗಿ ನೀಡಬೇಕು. ಕೆಲಸದ ಸ್ಥಳದಲ್ಲಿ ಜೆಇಗಳ ಕಿರುಕುಳ ನಿಲ್ಲಬೇಕು. ಕಂಪ್ಯೂಟರ್ ಆಪರೇಟರ್‌ಗಳ ಕಿರುಕುಳ ನಿಲ್ಲಬೇಕು. ಜಾಬ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದ ಕೂಲಿಕಾರರಿಗೆ ಜಾಬ್ ಕಾರ್ಡ್ ಒಂದು ವಾರದಲ್ಲಿ ನೀಡಬೇಕು.
ಹಿರೇಬಗನಾಳ ಗ್ರಾಪಂನ ಹಿರೇ ಕಾಸನಕಂಡಿ, ಗುಳದಳ್ಳಿ ಗ್ರಾಪಂನ ಗಬ್ಬೂರ ಗ್ರಾಮಗಳಲ್ಲಿ ಬಾಕಿ ಇರುವ ಕೂಲಿ ಹಣವನ್ನು ಪಾವತಿ
ಮಾಡಬೇಕು. ಕೋಳೂರು ಗ್ರಾಪಂನ ಗುನ್ನಳ್ಳಿ, ಮಂಗಳಾಪೂರ ಸೇರಿ ವಿವಿಧ ಗ್ರಾಪಂ ವ್ಯಾಪ್ತಿಯಲ್ಲಿ ಬಾಕಿ ಇರುವ ಕೂಲಿಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.