ಮುಂಡರಗಿ: ಉದ್ಯೋಗ ಖಾತ್ರಿಯಲ್ಲಿ ಕೆರೆಯ ಹೂಳು ಎತ್ತುವ ಕೆಲಸ ಮಾಡಿದರೂ ಕೂಲಿ ಹಣ ನೀಡಿಲ್ಲವೆಂದು ಕೂಲಿಕಾರರು ಗ್ರಾಮ ಪಂಚಾಯಿತಿಯ ಬಾಗಿಲು ಹಾಕಿ ಬಿದರಹಳ್ಳಿಯಲ್ಲಿ ಪ್ರತಿಭಟಿಸಿದರು.
ಬೆಳಗ್ಗೆಯಿಂದಲೇ ಗ್ರಾಮ ಪಂಚಾಯಿತಿಯ ಬಾಗಿಲು ಹಾಕಿ ಕೂಲಿಕಾರರು ಪ್ರತಿಭಟಿಸಿ, ಕೂಡಲೇ ಕೂಲಿಯ ಹಣವನ್ನು ಬಿಡುಗಡೆ ಮಾಡಬೇಕು. ಅಲ್ಲದೇ ಬರಗಾಲ ಕಾಮಗಾರಿಯಲ್ಲಿ ಗ್ರಾಮದ ಕೆರೆಯ ಹೂಳನ್ನು ಹದಿನೈದು ದಿನಗಳವರೆಗೂ ಪ್ರತಿದಿನವು ಮುನ್ನೂರು ಐವತ್ತು ಜನ ಕೂಲಿಕಾರರು ಕೆಲಸ ಮಾಡಿದ್ದೇವೆ. ಕಳೆದ ಮೂರು ತಿಂಗಳಿಂದ ಹಲವಾರು ನೆಪಗಳನ್ನು ಹೇಳಿ ಕೂಲಿಕಾರರಿಗೆ ಕೂಲಿಯ ಹಣ ನೀಡದೇ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ತಾಪಂ ಎಡಿ ಮಧುಸೂದನ್ ಕೋರ್ಲಹಳ್ಳಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ಅನುದಾನ ಬಂದಿಲ್ಲ. ಅನುದಾನ ಬಂದ ತಕ್ಷಣವೇ ಕೊಡಲೇ ಹಣವನ್ನು ಬಿಡುಗಡೆಗೊಳಿಸಲಾಗುವುದು ಎಂದು ಭರವಸೆ
ನೀಡಿದ ನಂತರ ಪ್ರತಿಭಟನೆಯು ಮುಕ್ತಾಯಗೊಳಿಸಲಾಯಿತು. ಪ್ರತಿಭಟನೆಕಾರರು ಒಂದು ವಾರದೊಳಗೆ ಕೂಲಿಯ ಹಣವನ್ನು ಕೊಡದೇ ಇದ್ದರೆ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.
ಪಾರವ್ವ ರಾಮಪ್ಪ ಹಳ್ಳೆಪ್ಪನವರ, ಗೌರವ್ವ ಹಳ್ಳೆಪ್ಪನವರ, ಮಹಾದೇವಕ್ಕ ಬೋವಿ, ಹಿರಿಯಕ್ಕ ಬೋವಿ, ನಾಗರಾಜ ಮತ್ತೂರು, ಗಿಡ್ಡಪ್ಪ ಮತ್ತಿಕಟ್ಟಿ, ಮಂಜಪ್ಪ ಹಾರೋಗೇರಿ, ನಿಂಗಪ್ಪ ಕಳ್ಳಿ, ಕೋಟೆಪ್ಪ ಬಸೇಗೌಡರ, ಪರಸಪ್ಪ ಹುಳ್ಳಮುದ್ದಿ, ನೀಲಪ್ಪ ದೇವರಮನಿ, ಪರಶುರಾಮ ಕಿಲಾರಿ, ಮಹೂಬ ಕಾಗದಗಾರ, ಹನುಮಪ್ಪ ತಳವಾರ, ದೇವೇಂದ್ರಪ್ಪ ತಳವಾರ, ರಾಕೇಶ ಜೋಶಿ, ಮಂಜು ನಾಯ್ಕರ ಮತ್ತಿತರರು ಪಾಲ್ಗೊಂಡಿದ್ದರು.