ಸಿರುಗುಪ್ಪ: ಸತತ ಮಳೆಯ ಕಣ್ಣಾಮುಚ್ಚಾಲೆ ನಡುವೆ ತಾಲೂಕಿನಲ್ಲಿ ಭತ್ತದ ಬೆಳೆ ಕಟಾವು ಪ್ರಾರಂಭವಾಗಿದ್ದು, ಇನ್ನೂ ಒಂದು ತಿಂಗಳವರೆಗೆ ಕಟಾವು ನಡೆಯಲಿದೆ.
ತಾಲೂಕಿನ ರೈತರು ತಾವು ಬೆಳೆದ ಭತ್ತವನ್ನು ಸಂಗ್ರಹಿಸಿಕೊಂಡು ಬೆಲೆ ಏರಿಕೆಯಾದಾಗ ಮಾರಾಟ ಮಾಡುವ ಅಭ್ಯಾಸ ಕಡಿಮೆಯಾಗಿದ್ದು, ಮಳೆ ಗೋದಾಮುಗಳ ಕೊರತೆ ಮುಂತಾದ ಕಾರಣಗಳಿಂದ ಭತ್ತವನ್ನು ಶೀಘ್ರ ಮಾರಾಟ ಮಾಡಬೇಕಾದ ಪರಿಸ್ಥಿತಿ ಇದೆ. ರೈತರ ಈ ಅನಿವಾರ್ಯತೆಯನ್ನು ಬಳಸಿಕೊಂಡು ಕೆಲವು ರೈಸ್‌ಮಿಲ್‌ಗಳು ಮತ್ತುವ್ಯಾಪಾರಿಗಳು ಕಡಿಮೆ ಹಣಕ್ಕೆ ಭತ್ತವನ್ನು ಖರೀದಿಸಿ ರೈತರಿಗೆ ನಷ್ಟ ಉಂಟಾಗುವಂತೆ ಮಾಡುತ್ತಾರೆ. ಆದ್ದರಿಂದ ಕಟಾವಿನ ಆರಂಭದ ಹಂತದಲ್ಲಿ ಅಂದರೆ ಅಕ್ಟೋಬರ್ ತಿಂಗಳಲ್ಲಿಯೆ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಸುವ ಕೇಂದ್ರಗಳನ್ನು ತೆರೆದರೆ ಸಾಕಷ್ಟು ಅನುಕೂಲವಾಗಲಿವೆ.
ಈ ವರ್ಷದ ಬೇಸಿಗೆ ಹಂಗಾಮಿನಲ್ಲಿ ತಾಲೂಕಿನಲ್ಲಿ ಭತ್ತದ ಕಟಾವು ಮುಗಿದು ಶೇ. 75ರಷ್ಟು ರೈತರು ತಮ್ಮ ಭತ್ತವನ್ನು ಕಡಿಮೆ ದರದಲ್ಲಿ ಮಾರಿಕೊಂಡ ನಂತರ ಸರ್ಕಾರ ನಗರದ ಎಪಿಎಂಸಿ ಆವರಣದಲ್ಲಿ ಭತ್ತ ಖರೀದಿ ಕೇಂದ್ರವನ್ನು ತೆರೆದಿತ್ತು. ಕಳೆದ ಬಾರಿ ರೈತ ಸಂಘದ ಪದಾಧಿ ಕಾರಿಗಳು ಭತ್ತ ಖರೀದಿ ಕೇಂದ್ರ ತೆರೆಯುವಂತೆ ಗಲಾಟೆ ಮಾಡಿದ ನಂತರ ಜಿಲ್ಲಾಡಳಿತ ಖರೀದಿ ಕೇಂದ್ರಕ್ಕೆ ತಡವಾಗಿ ಬೇಡಿಕೆ ಇಟ್ಟಿದ್ದರಿಂದ ಬಹುತೇಕ ರೈತರು ಖಾಸಗಿ ಮಿಲ್ ಮತ್ತು ಮಾರಾಟಗಾರರಿಗೆ ತಮ್ಮ ಭತ್ತವನ್ನು ಮಾರಾಟ ಮಾಡಿದ್ದರಿಂದ ಭತ್ತ ಖರೀದಿ ಕೇಂದ್ರದ ಕಡೆ ಹೆಚ್ಚಿನ ರೈತರು ಮುಖ ಮಾಡಿರಲಿಲ್ಲ. ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ 31 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ.
ಈಗಾಗಲೇ ಶೇ. 25ರಷ್ಟು ಭತ್ತದ ಕೊಯ್ಲು ಮುಗಿದಿದ್ದು, ಇನ್ನು ಶೇ. 75ರಷ್ಟು ಭತ್ತ ಕೊಯ್ಲು ನಡೆಯಬೇಕಾಗಿದೆ. ತಾಲೂಕು ಆಡಳಿತ ಭತ್ತ ಖರೀದಿ ಕೇಂದ್ರವನ್ನು ತೆರೆಯುವ ಪ್ರಕ್ರಿಯೆಯನ್ನ ಶೀಘ್ರವಾಗಿ ಆರಂಭಿಸಿದರೆ ಮಾತ್ರ ತಾಲೂಕಿನ ಭತ್ತ ಬೆಳೆದ ರೈತರಿಗೆ ಅನುಕೂಲವಾಗಲಿದೆ. ಕಳೆದ ಬಾರಿ ತಾಲೂಕಿನ ಎಪಿಎಂಸಿ ಆವರಣದಲ್ಲಿ ಭತ್ತ ಖರೀದಿ ಕೇಂದ್ರ ತೆರೆಯಲಾಗಿತ್ತು. ಆದರೆ ತಾಲೂಕಿನ ನಾಲ್ಕು ಹೋಬಳಿಗಳಲ್ಲಿ ನಾಲ್ಕು ಖದೀರಿ ಕೇಂದ್ರಗಳನ್ನು ತೆರೆಯಬೇಕು. ಪ್ರತಿಬಾರಿ ಸರ್ಕಾರಕ್ಕೆ ಖರೀದಿ ಕೇಂದ್ರ ತೆರೆಯವ ವ್ಯವಸ್ಥೆ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುವ ಬದಲು ರೈತರ ಎಲ್ಲ ಬೆಳೆಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಸುವಂತೆ ಖರೀದಿ ಕೇಂದ್ರಗಳು ಯಾವತ್ತು ತೆರೆದಿರಬೇಕು ಎನ್ನುವ ಬೇಡಿಕೆಯು ಇದೆ.
ಹೆಚ್ಚಿನ ರೈತರು ಭತ್ತದ ಕಟಾವು ಮಾಡಿದ ಕೂಡಲೇ ಮಾರಾಟ ಮಾಡುವುದರಿಂದ ಮಳೆಯಲ್ಲಿ ನೆನೆದ ಭತ್ತವಾಗಿದ್ದಲ್ಲಿ ಗುಣಮಟ್ಟ ಕುಸಿಯುತ್ತದೆ ಮತ್ತು ಉತ್ತಮ ಬೆಲೆಯು ಸಿಗುವುದಿಲ್ಲ. ಕೊಯ್ಲು ಮಾಡಿದ ನಂತರ ಬಿಸಿಲಲ್ಲಿ ಒಣಗಿಸಿ ಗುಣಮಟ್ಟ ಕಾಯ್ದುಕೊಂಡು ಮಾರಾಟ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎನ್ನುವ ಅಭಿಪ್ರಾಯವಿದೆ. ಬೇಸಿಗೆ ಹಂಗಾಮಿನಲ್ಲಿ ಕ್ವಿಂಟಲ್‌ಗೆ ರೂ. 1700ರಿಂದ 1800, ಆರ್.ಎನ್.ಆರ್. ಸೋನಾಮಸೂರಿ ರೂ. 1600ರಿಂದ 1700 ಬೆಲೆ ದೊರೆತ್ತಿತ್ತು. ಆದರೆ ಸದ್ಯ ಭತ್ತದ ಬೆಲೆ ಮಾರುಕಟ್ಟೆಯಲ್ಲಿ ತೀವ್ರವಾಗಿ ಕುಸಿದಿದ್ದು ಒಂದು ಕ್ವಿಂಟಲ್‌ಗೆ ರೂ.1300 ಆರ್ ಎನ್‌ಆರ್ ಮತ್ತು ಸೋನಾಮಸೂರಿ ರೂ. 1400 ದೊರೆಯುತ್ತಿದೆ. ಇದರಿಂದಾಗಿ ಒಂದು ಕ್ವಿಂಟಲ್ ಭತ್ತಕ್ಕೆ ರೂ. 300ರಿಂದ 400 ಬೆಲೆ ಕಡಿಮೆಯಾಗಿದ್ದು ರೈತರ ಆತಂಕಕ್ಕೆ ಕಾರಣವಾಗಿದೆ. ಸರ್ಕಾರ ಭತ್ತ ಖರೀದಿ ಕೇಂದ್ರವನ್ನು ತೆರೆದರೆ ಮಾರುಕಟ್ಟೆಯಲ್ಲಿ ಭತ್ತಕ್ಕೆ ಉತ್ತಮ ಬೆಲೆ ದೊರೆಯಲಿದೆ. ಸರ್ಕಾರ ತಾಲೂಕಿನಲ್ಲಿ ನಾಲ್ಕು ಖರೀದಿ ಕೇಂದ್ರಗಳನ್ನು ತೆರೆಯಲು ಕ್ರಮ ಕೈಗೊಳ್ಳಬೇಕೆಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ಪ್ರೊ| ನಂಜುಂಡಸ್ವಾಮಿ ಬಣ)ಯ ರಾಜ್ಯ ಕಾರ್ಯಾಧ್ಯಕ್ಷ ಆರ್.ಮಾಧವರೆಡ್ಡಿ ಒತ್ತಾಯಿಸಿದ್ದಾರೆ.
ಸದ್ಯ ಮಾರುಕಟ್ಟೆಯಲ್ಲಿ ನಮ್ಮ ಭತ್ತವನ್ನು ಮಾರಾಟ ಮಾಡಿದರೆ ಒಂದು ಕ್ವಿಂಟಲ್‌ಗೆ ರೂ. 200ರಿಂದ 400 ವರೆಗೆ ಕಡಿಮೆ ಬೆಲೆ ಸಿಗುತ್ತಿದೆ. ಕೇಂದ್ರ ಸರ್ಕಾರ ರೂ. 1885ಗಳಿಗೆ ಉತ್ತಮ ತಳಿಯ ಗ್ರೇಡ್-1 ಭತ್ತಕ್ಕೆ ಬೆಲೆ ನಿಗದಿ ಮಾಡಿದೆ ಆದರೆ ಮಾರುಕಟ್ಟೆಯಲ್ಲಿ ರೂ. 1200ರಿಂದ 1400 ವರೆಗೆ ಮಾತ್ರ ಭತ್ತ ಮಾರಾಟವಾಗುತ್ತಿದೆ ಎಂದು ತೆಕ್ಕಲಕೋಟೆ ರೈತ ಮಾರೆಪ್ಪ ಅಳಲು ತೋಡಿಕೊಂಡಿದ್ದಾರೆ