Advertisement

10 ಲಕ್ಷ ರೂ. ಪರಿಹಾರ ನೀಡಲು ಒತ್ತಾಯ

07:12 AM Jun 24, 2020 | Suhan S |

ಬನಹಟ್ಟಿ: ಆತ್ಮಹತ್ಯೆಗೆ ಶರಣಾದ ನೇಕಾರರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡುವಂತೆ ನೇಕಾರರ ಜಾಗೃತಿ ವೇದಿಕೆ ಅಧ್ಯಕ್ಷ ಲಿಂಗರಾಜು ಡಿ. ನೊಣವಿನಕೆರೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

Advertisement

ಜವಳಿ ಸಚಿವ ಶ್ರೀಮಂತ ಪಾಟೀಲ ಅವರನ್ನು ಭೇಟಿ ಮಾಡಿದ ಅವರು, ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಆನಂದಪುರ ಹತ್ತರಗಿ ಗ್ರಾಮದ ಶಂಕರ ವಾಮನ್‌ ಶೆಡಿಶ್ಯಾಳ್‌, ಬೆಳಗಾವಿ ನಗರ ವಡಗಾವಿಯ ನೇಕಾರ ಕಾರ್ಮಿಕ ಸುಜಿತ ಉಪರಿ ಹಾಗೂ ಧಾರವಾಡದ ತಡಕೋಡ ಗ್ರಾಮದ ನಿವಾಸಿ ಚಂದ್ರಕಾಂತ ಈರಪ್ಪ ತಾವರೆನ್ನವರ ಎಂಬ ನೇಕಾರರು ಲಾಕ್‌ಡೌನ್‌ ಸಂಕಷ್ಟಕ್ಕೆ ಗುರಿಯಾಗಿ ದುಡಿಮೆ ಇಲ್ಲದೆ ಸಾಲಬಾಧೆ ತಾಳದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೀಗ ಈ ಮೂರು ಕುಟುಂಬಗಳು ಬೀದಿ ಪಾಲಾಗುವ ಸ್ಥಿತಿ ಬಂದಿದೆ. ಆದ್ದರಿಂದ ಕೂಡಲೇ ಮೃತ ನೇಕಾರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.

ಆತ್ಮಹತ್ಯೆ ಮಾಡಿಕೊಂಡ ನೇಕಾರರ ಮನೆಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಕೈಮಗ್ಗ ಮತ್ತು ಜವಳಿ ಇಲಾಖೆ ಹಿರಿಯ ಅಧಿಕಾರಿಯೋರ್ವರನ್ನು ನಿಯೋಜಿಸಬೇಕೆಂದು ವೇದಿಕೆ ಅಧ್ಯಕ್ಷ ಸಚಿವರಲ್ಲಿ ಮನವಿ ಮಾಡಿದರು. ಮನವಿ ಸ್ವೀಕರಿಸಿ ಮಾತನಾಡಿದ ಸಚಿವ ಶ್ರೀಮಂತ ಪಾಟೀಲ, ಎರಡು ದಿನಗಳಲ್ಲಿ ಪರಿಹಾರದ ಮೊತ್ತ ಕುರಿತು ನಿರ್ಧಾರ ಪ್ರಕಟಿಸಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next