ಚಳ್ಳಕೆರೆ: ಕಳೆದ ಹಲವಾರು ವರ್ಷಗಳಿಂದ ಮಳೆಯಾಗದ ಹಿನ್ನೆಲೆಯಲ್ಲಿ ಮೇವು ಹಾಗೂ ನೀರಿನ ಕೊರತೆ ಹೆಚ್ಚಾಗಿದೆ. ತಾಲೂಕಿನ ಎಂಟು ಗೋಶಾಲೆಗಳಲ್ಲಿ ಸಾವಿರಾರು ಜಾನುವಾರುಗಳಿಗೆ ಸರ್ಕಾರ ಆಶ್ರಯ ನೀಡಿದೆ. ಅದೇ ರೀತಿ ಗ್ರಾಮಾಂತರ ಪ್ರದೇಶಗಳಲ್ಲೂ ಮೇವು ಬ್ಯಾಂಕ್ ಆರಂಭಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ (ನಂಜುಂಡಸ್ವಾಮಿ ಬಣ) ವತಿಯಿಂದ ಸೋಮವಾರ ತಾಲೂಕು ಕಚೇರಿ ಎದುರು ಧರಣಿ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ, ತಳಕು ಹೋಬಳಿ ವ್ಯಾಪ್ತಿಯ ದೊಡ್ಡಉಳ್ಳಾರ್ತಿ ಮತ್ತು ಕಾಲುವೇಹಳ್ಳಿ ಗ್ರಾಮಗಳಲ್ಲಿ ಗೋಶಾಲೆ ಇದೆ. ತಳಕು ಸುತ್ತಮುತ್ತಲಿನ ಗ್ರಾಮಗಳಾದ ಗಿರಿಯಮ್ಮನಹಳ್ಳಿ, ವಲಸೆ, ತಿಮ್ಮನಹಳ್ಳಿ, ಹೊಸೂರು, ಮನ್ನೇಕೋಟೆ, ಹಿರೇಹಳ್ಳಿ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದೆ. ಆದ್ದರಿಂದ ಸರ್ಕಾರ ಈ ಭಾಗದಲ್ಲಿ ಗೋಶಾಲೆ ಆರಂಭಿಸಲು ಸಾಧ್ಯವಾಗದಿದ್ದಲ್ಲಿ ಮೇವು ಬ್ಯಾಂಕ್ ಆರಂಭಿಸಬೇಕೆಂದು ಒತ್ತಾಯಿಸಿ ಹತ್ತು ದಿನಗಳ ಹಿಂದೆ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಇದುವರೆಗೂ ಮೇವು ಬ್ಯಾಂಕ್ ಆರಂಭವಾಗಿಲ್ಲ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಜಾನುವಾರುಗಳಿಗೆ ಪ್ರತಿನಿತ್ಯ ಮೇವು ಒದಗಿಸಲು ರೈತರಿಗೆ ಸಾಧ್ಯವಾಗುತ್ತಿಲ್ಲ.
ಸುತ್ತಮುತ್ತಲಿನ ಪ್ರದೇಶದಲ್ಲಿ ಯಾವುದೇ ಕೆರೆ ಕಟ್ಟೆಗಳಲ್ಲಿ, ಬಾವಿಗಳಲ್ಲಿ ನೀರಿಲ್ಲದ ಕಾರಣ ಮೇವು ಸಹ ಬೆಳೆದಿಲ್ಲ. ಇದರಿಂದ ಜಾನುವಾರುಗಳು ಮೇವಿಲ್ಲದೆ ಉಪವಾಸದಿಂದ ಬಳಲುವಂತಾಗಿದೆ. ಆದ್ದರಿಂದ ಸರ್ಕಾರ ಕಡೇ ಪಕ್ಷ ಹಿರೇಹಳ್ಳಿ ಮತ್ತು ತಳಕು ಗ್ರಾಮಗಳಲ್ಲಾದರೂ ಮೇವು ಬ್ಯಾಂಕ್ ಪ್ರಾರಂಭಿಸಬೇಕು. ರೈತರು ತಮ್ಮ ಜಾನುವಾರುಗಳನ್ನು ರಕ್ಷಿಸಿಕೊಳ್ಳಲು ಮೇವು ಬ್ಯಾಂಕ್ ಮೂಲಕವಾದರೂ ಮೇವು ಖರೀದಿಸಬಹುದು. ಆದ್ದರಿಂದ ಕೂಡಲೇ ಮೇವು ಬ್ಯಾಂಕ್ ಆರಂಭಿಸಬೇಕು. ಇಲ್ಲದಿದ್ದಲ್ಲಿ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.
ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ| ರವಿಕುಮಾರ್ ಮಾತನಾಡಿ, ಮೇವು ಬ್ಯಾಂಕ್ ಸ್ಥಾಪನೆ ಕುರಿತಂತೆ ಪಶುವೈದ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಈಗಾಗಲೇ ವರದಿ ನೀಡಲಾಗಿದೆ. ಮೇವು ಲಭ್ಯವಿರುವ ಕಡೆ ಖರೀದಿಸಬೇಕಿದ್ದು, ಇಲಾಖೆಯಿಂದ ಆದೇಶ ಬಂದ ಕೂಡಲೇ ಮೇವು ಬ್ಯಾಂಕ್ ಆರಂಭವಾಗಲಿದೆ ಎಂ.ದು ತಿಳಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ತಿಪ್ಪೇಸ್ವಾಮಿ, ರಾಜಣ್ಣ, ಮಹಲಿಂಗಪ್ಪ, ತಮ್ಮಣ್ಣ ಮೊದಲಾದವರು ಭಾಗವಹಿಸಿದ್ದರು.