Advertisement

6 ತಿಂಗಳು ಅಧಿಕಾರಾವಧಿ ವಿಸ್ತರಣೆಗೆ ಒತ್ತಾಯ

10:10 AM Jul 29, 2020 | Suhan S |

ಬೆಂಗಳೂರು: ನಗರದಲ್ಲಿ ಕೋವಿಡ್ ತುರ್ತು ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಸದಸ್ಯರ ಅಧಿಕಾರಾವಧಿಯನ್ನು ಆರು ತಿಂಗಳ ಕಾಲ ವಿಸ್ತರಿಸಬೇಕು ಎಂಬ ಒಕ್ಕೊರಲ ಒತ್ತಾಯ ಮಂಗಳವಾರ ನಡೆದ ಕೌನ್ಸಿಲ್‌ ಸಭೆಯಲ್ಲಿ ಕೇಳಿಬಂತು.

Advertisement

ಈ ನಿಟ್ಟಿನಲ್ಲಿ ಮೇಯರ್‌ ಎಂ. ಗೌತಮ್‌ ಕುಮಾರ್‌ ನಿರ್ಣಯ ಕೈಗೊಂಡು, ಸರ್ಕಾರಕ್ಕೆ ಈ ಸಂಬಂಧ ಪ್ರಸ್ತಾವನೆ ಸಲ್ಲಿಸಬೇಕು ಎಂದು ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರೆಲ್ಲರೂ ಒತ್ತಾಯಿಸಿದರು. ಮೇಯರ್‌ ಸೇರಿದಂತೆ ಎಲ್ಲ ಸದಸ್ಯರ ಅಧಿಕಾರಾವಧಿ ಇದೇ ಸೆ. 10ಕ್ಕೆ ಮುಗಿಯಲಿದೆ.

ನಗರದಲ್ಲಿ ಕೋವಿಡ್, ಆರೋಗ್ಯ ತುರ್ತು ಪರಿಸ್ಥಿತಿ ಇರುವುದರಿಂದ ಐದಾರು ತಿಂಗಳಿಂದ ವಾರ್ಡ್‌ನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಸಾಧ್ಯವಾಗಿಲ್ಲ. ಕೋವಿಡ್ ದಿಂದ ಜನರು ಪರದಾಡುತ್ತಿದ್ದು, ಇಂತಹ ಸಂದರ್ಭದಲ್ಲಿ ಜನರಿಗೆ ಸಹಕಾರ ನೀಡಬೇಕಿದೆ. ಹೀಗಾಗಿ, ಅವಧಿ ವಿಸ್ತರಿಸಲು ಸರ್ಕಾರ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸದಸ್ಯರು ಪಕ್ಷಾತೀತವಾಗಿ ಆಗ್ರಹಿಸಿದರು.

ವಿಷಯ ಪ್ರಸ್ತಾಪಿಸಿದ ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್‌, ಪಾಲಿಕೆಯ ಎಲ್ಲ ಸದಸ್ಯರ ಅವಧಿ ಸೆ. 10ಕ್ಕೆ ಮುಕ್ತಾಯವಾಗಲಿದೆ. ಕೋವಿಡ್ ದಂಥ ಸಂಕಷ್ಟದ ಸಂದರ್ಭದಲ್ಲಿ ಸ್ಥಳೀಯ ಆಡಳಿತದ ಅವಶ್ಯಕತೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ವಿಪತ್ತು ನಿರ್ವಹಣೆ ಕಾಯ್ದೆ ಅಡಿ ಸದಸ್ಯರ ಅಧಿಕಾರ ಅವಧಿ ವಿಸ್ತರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ದನಿಗೂಡಿಸಿದ ವಿರೋಧ ಪಕ್ಷದ ನಾಯಕ ಅಬ್ದುಲ್‌ ವಾಜೀದ್‌ ಸೇರಿದಂತೆ ಸರ್ವ ಪಕ್ಷ ಸದಸ್ಯರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಆಗ್ರಹಿಸಿದರು.

1988ರಲ್ಲಿ ಅಧಿಕಾರಾವಧಿ ವಿಸ್ತರಣೆ: 1988ರ ಜುಲೈ11ಕ್ಕೆ ಸದಸ್ಯರ ಅಧಿಕಾರ ಅವಧಿ ಮುಕ್ತಾಯವಾಗಿತ್ತು. ಆಗ ಸರ್ಕಾರ ಸದಸ್ಯರ ಅಧಿಕಾರ ಅವಧಿಯನ್ನು 1988ರ ಡಿ. 31ರವರೆಗೆ ವಿಸ್ತರಣೆ ಮಾಡಿ ಆದೇಶಿಸಿದ ಉದಾಹರಣೆ ಇದೆ. ಇದೇ ಮಾದರಿಯಲ್ಲಿ ಮತ್ತೆ ಅಧಿಕಾರ ವಿಸ್ತರಣೆ ಮಾಡಬೇಕು ಎಂದು ಸದಸ್ಯರು ಮನವಿ ಮಾಡಿದ್ದಾರೆ. ಆದರೆ, ಇದಕ್ಕೆ ಶಾಸಕರು ಒಪ್ಪಿಕೊಳ್ಳುವ ಸಾಧ್ಯತೆ ಕಡಿಮೆ ಇದೆ ಎನ್ನಲಾಗಿದೆ.

Advertisement

ಚುನಾವಣಾ ಆಯೋಗದಿಂದ ಸಿದ್ಧತೆ: ಈ ಮಧ್ಯೆ ಪ್ರಾದೇಶಿಕ ಚುನಾವಣಾ ಆಯೋಗ 2011ರ ಜನಗಣತಿ ಪ್ರಕಾರ ವಾರ್ಡ್‌ ಮರು ವಿಂಗಡಣೆ ಮಾಡಿದೆ. ಮೀಸಲಾತಿ ಹಂಚಿಕೆ ಸಿದ್ಧತೆಯನ್ನೂ ಮಾಡಿಕೊಳ್ಳಲಾಗಿದೆ. ಆದರೆ, ಈ ವೇಳೆ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಕೆಲವು ಸಿದ್ಧತೆಗಳಿಗೆ ಹಿನ್ನಡೆ ಉಂಟಾಗಿದೆ. ಅದೆಲ್ಲವನ್ನೂ ಮಾಡಿಕೊಂಡರೂ ನಗರದಲ್ಲಿ ಈಗಿರುವ ಪರಿಸ್ಥಿತಿಯಲ್ಲಿ ಚುನಾವಣೆ ನಡೆಸುವ ಸಾಧ್ಯತೆ ಕಡಿಮೆ ಎಂದು ಮೂಲಗಳು ತಿಳಿಸಿವೆ.

ಸಭೆಯ ನಿರ್ಣಯಗಳು :

ಬಡ ವಿದ್ಯಾರ್ಥಿಗಳಿಗೆ ಟ್ಯಾಬ್‌ :  ಈಗ ಆನ್‌ಲೈನ್‌ ಶಿಕ್ಷಣ ಪ್ರಾರಂಭವಾಗಿದ್ದು, ನಗರದಲ್ಲಿನ ಬಡ ಮಕ್ಕಳಿಗೆ ಆನ್‌ಲೈನ್‌ ಶಿಕ್ಷಣ ಸವಾಲಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆ ವ್ಯಾಪ್ತಿಯ ಪ್ರತಿ

ವಾರ್ಡ್‌ನ ಬಡ ಮಕ್ಕಳಿಗೆ ಲ್ಯಾಪ್‌ಟಾಪ್‌ ಹಾಗೂ ಟ್ಯಾಬ್‌ ನೀಡಲು ನಿರ್ಣಯ ತೆಗೆದುಕೊಳ್ಳಲಾಗಿದೆ. ಅದರಂತೆ 5ರಿಂದ 9ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಟ್ಯಾಬ್‌ ನೀಡುವುದು ಹಾಗೂ 10ನೇ ತರಗತಿಯಿಂದ ಪಿಯುಸಿ, ಡಿಪ್ಲೋಮಾ ಸೇರಿದಂತೆ ಉನ್ನತ ವ್ಯಾಸಂಗ ಮಾಡುವವರಿಗೆ ಲ್ಯಾಪ್‌ಟಾಪ್‌ ನೀಡಲು ನಿರ್ಣಯ ತೆಗೆದುಕೊಳ್ಳಲಾಗಿದೆ.

ನಾಯಿ ಸಾಕಲು ಪರವಾನಗಿ : ಸಾಕುನಾಯಿ ಪರವಾನಗಿ ಬೈಲಾಕ್ಕೆ ಅನುಮೋದನೆ ಸಿಕ್ಕಿದ್ದು, ನಗರದಲ್ಲಿ ನಾಯಿ ಸಾಕುವವರು ಕಡ್ಡಾಯವಾಗಿ ನಾಯಿಗಳಿಗೆ ಚಿಪ್‌ ಅಳವಡಿಸಿಕೊಳ್ಳಬೇಕು. ಸೀಮಿತ ಸಂಖ್ಯೆಯಲ್ಲಿ ನಾಯಿಗಳನ್ನು ಸಾಕಬೇಕು ಹಾಗೂ ನಾಯಿಗಳಿಗೆ ಎಬಿಸಿ ಮಾಡಿಸಬೇಕು ಎಂದು ಬೈಲಾದಲ್ಲಿ ಇದೆ.

ವಿಶೇಷ ಆಯುಕ್ತರ ಬದಲಾವಣೆ :  ಬಿಬಿಎಂಪಿಯ ಕಲ್ಯಾಣ ಕಾರ್ಯಕ್ರಮಗಳನ್ನು ಕಲ್ಯಾಣ ವಿಭಾಗದ ವಿಶೇಷ ಆಯುಕ್ತ ಎಸ್‌.ಜೆ. ರವೀಂದ್ರ ಅವರು ಸಕಾಲದಲ್ಲಿ ಅನುಷ್ಠಾನ ಮಾಡುತ್ತಿಲ್ಲ. ಇವರ ಕಾರ್ಯವೈಖರಿ ಬಗ್ಗೆ ಸಾಕಷ್ಟು ದೂರುಗಳು ಕೇಳಿಬಂದಿದ್ದು, ಕಲ್ಯಾಣ ಕಾರ್ಯಕ್ರಮಗಳ ಹಿತದೃಷ್ಟಿಯಿಂದ ಇವರ ಸೇವೆಯನ್ನು ಕೂಡಲೇ ಹಿಂದಿರುಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸಲು ನಿರ್ಣಯ ತೆಗೆದುಕೊಳ್ಳಲಾಗಿದೆ.

ರಸ್ತೆ ಅಗೆದರೆ ಪಾಲಿಕೆಗೆ ಹಣ :  ನಗರದಲ್ಲಿ ಬೇಕಾಬಿಟ್ಟಿ ರಸ್ತೆ ಅಗೆಯುವುದಕ್ಕೆ ಕಡಿವಾಣ ಹಾಕಲು ಪಾಲಿಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ರಸ್ತೆ ಗುಂಡಿಗೆ ಶುಲ್ಕ ವಿಧಿಸಲು ಮುಂದಾಗಿದೆ. ನಗರದ ಯಾವುದೇ ಭಾಗದಲ್ಲಿ ಒಂದು ಮೀಟರ್‌ ಅಗಲ ಮತ್ತು ಉದ್ದ ರಸ್ತೆ ಅಗೆದರೆ ಅದಕ್ಕೆ ಹತ್ತು ಸಾವಿರ ರೂ. ಪಾಲಿಕೆಗೆ ನೀಡಬೇಕು. ಇನ್ನು ಪ್ರತಿ ಕಿ.ಮೀ.ಗೆ 1.30 ಲಕ್ಷದಂತೆ ಪಾಲಿಕೆಗೆ ಹಣ ಪಾವತಿಸಬೇಕು.

ಪೌರಕಾರ್ಮಿಕರಿಗೆ ಊಟ :  ಇಂದಿರಾ ಕ್ಯಾಂಟೀನ್‌ನಲ್ಲಿ ಪೌರಕಾರ್ಮಿಕರಿಗೆ ಊಟದ ವ್ಯವಸ್ಥೆ ಸಮರ್ಪಕವಾಗಿ ನೀಡುತ್ತಿಲ್ಲ. ಊಟದಲ್ಲಿ ಶುಚಿತ್ವ ಕಾಪಾಡಿಕೊಳ್ಳುತ್ತಿಲ್ಲ ಎನ್ನುವ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ‌ ಪ್ರತ್ಯೇಕ ಟೆಂಡರ್‌ಗೆ ಮುಂದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next