ರಾಮದುರ್ಗ: ಕಟಕೋಳದ ಆದರ್ಶ ವಿದ್ಯಾಲಯಕ್ಕೆ ಹೋಗಲು ಬಸ್ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳ ಪಾಲಕರು ತಹಶೀಲ್ದಾರ್, ಸಾರಿಗೆ ಘಟಕದ ವ್ಯವಸ್ಥಾಪಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗೆ ಶನಿವಾರ ಮನವಿ ಸಲ್ಲಿಸಿದರು.
ಕಳೆದ 9 ವರ್ಷಗಳಿಂದ ಪಟ್ಟಣದ ವಿದ್ಯಾಚೇತನ ಆವರಣದಲ್ಲಿದ್ದ ಆದರ್ಶ ವಿದ್ಯಾಲಯವನ್ನು ಕಟಕೋಳಕ್ಕೆ ಸ್ಥಳಾಂತರಿಸಿದ್ದರಿಂದ ರಾಮದುರ್ಗ ಪಟ್ಟಣ, ಸುರೇಬಾನ, ಸಂಗಳ, ಕಲಹಾಳ, ಮುದೇನೂರ, ಬಟಕುರ್ಕಿ, ಮುದಕವಿ ಸೇರಿದಂತೆ ಇತರ ಭಾಗಗಳ ಸುಮಾರು 180 ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ ಎಂದು ಪಾಲಕರು ಆರೋಪಿಸಿದರು.
ದೂರದ ಊರುಗಳಿಂದ ಬರುವ ವಿದ್ಯಾರ್ಥಿಗಳಿಗೆ ಕಟಕೋಳಕ್ಕೆ ಹೋಗಲು ಸಮರ್ಪಕ ಬಸ್ ಸೌಲಭ್ಯ ಇಲ್ಲ. ಕಟಕೋಳಕ್ಕೆ ಹೋಗಲು ದೂರದ ಊರುಗಳ ವಿದ್ಯಾರ್ಥಿಗಳು ಬೆಳಗ್ಗೆ 7 ಗಂಟೆಗೆ ಮನೆ ಬಿಡಬೇಕು. ಪುನಃ ಮರಳಿ ಮನೆಗೆ ಬರಬೇಕಾದರೆ ಸಂಜೆ 7 ಗಂಟೆಯಾಗುತ್ತಿದೆ. ಇದರಿಂದ ದಿನದ ನಾಲ್ಕ್ತ್ರೈದು ಗಂಟೆ ಸಮಯವನ್ನು ಸಂಚಾರದಲ್ಲಿಯೇ ಕಳೆಯಬೇಕಾಗಿದೆ ಎಂದು ಮಕ್ಕಳ ಪಾಲಕರು ಆರೋಪಿಸಿದರು.
ಇಲ್ಲಿರುವ ಸಮಸ್ಯೆ ಕುರಿತು ಅನೇಕ ಬಾರಿ ಮಾಹಿತಿ ತಿಳಿಸಿದರೂ ಪ್ರಯೋಜನವಾಗಿಲ್ಲ. ಒಂದು ವಾರದಲ್ಲಿ ಈ ವ್ಯವಸ್ಥೆ ಕಲ್ಪಿಸದೆ ಹೋದಲ್ಲಿ ಅಲ್ಲಿನ ಶಾಲೆಯ ಮಕ್ಕಳ ಜೊತೆಗೆ ಪಾಲಕರು ಸೇರಿಕೊಂಡು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಪಾಲಕರು ಎಚ್ಚರಿಕೆ ನೀಡಿದ್ದಾರೆ.
ಈ ವೇಳೆ ವಿದ್ಯಾರ್ಥಿಗಳ ಪಾಲಕರಾದ ಮಲಿಕಾಜಗೌಡ ಪಾಟೀಲ, ಸಹದೇವ ಪವಾರ, ಜಗದೀಶ ಆರಿಬೆಂಚಿ, ಎಸ್.ಬಿ. ಬೈರಕದಾರ, ಮಾರುತಿ ಮುಳಗುಂದ, ಲಕ್ಷ್ಮೀ ಕೌತಳ, ಎಸ್.ಬಿ.ಹೊಸಮನಿ, ಯಶೋಧಾ ಅರಮನಿ, ನಾಗರಾಜ ಕಟ್ಟಿಮನಿ, ಅಶೋಕ ತೋಟಗಿ, ರತ್ನವ್ವ ಕೌಸುದ್ನಿ ಸೇರಿದಂತೆ ಇತರರು ಇದ್ದರು.