ಕಲಬುರಗಿ: ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧಿಸಿ ಮದ್ಯ ಮುಕ್ತ ಕರ್ನಾಟಕ ಎಂದು ಘೋಷಿಸುವಂತೆ ಆಗ್ರಹಿಸಿ ಶ್ರಮ ಜೀವಿಗಳ ವೇದಿಕೆ ವತಿಯಿಂದ ಮಹಾನಗರ ಪಾಲಿಕೆಯ ಇಂದಿರಾ ಸ್ಮಾರಕ ಭವನದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಲಾಯಿತು.
ವೇದಿಕೆ ಅಧ್ಯಕ್ಷ ಚಂದ್ರಶೇಖರ ಹಿರೇಮಠ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಬಳಿಕ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ತೆರಳಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಯಿತು.
ಈಗಾಗಲೇ ಕೇರಳ, ಬಿಹಾರ, ಗುಜರಾತ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಇದರಿಂದ ಅಲ್ಲಿನ ಜನರ ಬದುಕು ಸುಧಾರಿಸಿದೆ. ಇದೇ ಮಾದರಿಯಲ್ಲಿ ನಮ್ಮ ರಾಜ್ಯದಲ್ಲೂ ಮದ್ಯ ಮಾರಾಟ ಸಂಪೂರ್ಣ ನಿಷೇಧಿಸಬೇಕೆಂದು ಪ್ರತಿಭಟನಾಕರರು ಒತ್ತಾಯಿಸಿದರು.
ಹೈದ್ರಾಬಾದ ಕರ್ನಾಟಕ ಪ್ರದೇಶದಲ್ಲಿ ಅತಿ ಹೆಚ್ಚು ಮದ್ಯ ಮಾರಾಟ ಆಗುತ್ತಿದೆ. ಗ್ರಾಮೀಣ ಪ್ರದೇಶದ ಹಿಂದುಳಿದ ಬಡ ಕುಟುಂಬಗಳು ಬೀದಿ ಪಾಲಾಗುತ್ತಿವೆ. ಯುವಕರೆ ಹೆಚ್ಚಿನ ಸಂಖ್ಯೆಯಲ್ಲಿ ಮದ್ಯದ ಚಟಕ್ಕೆ ಬಿದ್ದಿದ್ದಾರೆ. ಈ ಭಾಗದ ಜನತೆಯ ಬದುಕು ಹಸನುಗೊಳಿಸಲು ಕೂಡಲೇ ಮದ್ಯ ಮಾರಾಟ ನಿಷೇಧಿಸಬೇಕೆಂದು ಮನವಿ ಮಾಡಿದರು.
ಮದ್ಯ ನಿಷೇಧಿಸಿ ಅಕ್ರಮ ಮಾರಾಟಗಾರರನ್ನು ನಿಯಂತ್ರಿಸಲು ಬಿಹಾರ ಮಾದರಿಯಂತೆ ಶಾಸನ ರೂಪಿಸಿ ಜೈಲು ಶಿಕ್ಷೆ ಹಾಗೂ ಆಸ್ತಿ ಮುಟ್ಟುಗೋಲು ಹಾಕಬೇಕು. ಇದರಿಂದ ಸಂಪೂರ್ಣ ಮದ್ಯ ನಿಷೇಧಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಗಳು ಕೂಡಲೇ ನಿರ್ಧಾರ ಕೈಗೊಳ್ಳಬೇಕೆಂದು ಪ್ರತಿಭಟನಾಕರರು ಆಗ್ರಹಿಸಿದರು.
ಶ್ರೀಮಂತ ಅಟ್ಟೂರ, ಲಕ್ಷ್ಮೀ ತಳವಾರ, ವಿಜಯಕುಮಾರ ತೆಗನೂರ, ಫಿರೋಜ್ ಮಿಯಾ, ರಿಯಾಜುದ್ದೀನ್, ಗೌರಿಶಂಕರ ಪಾಟೀಲ, ಜಗದೀಶ, ಅಮರನಾಥ ಹಾಗೂ ಇತರರು ಪಾಲ್ಗೊಂಡಿದ್ದರು.