ಗೋಕಾಕ: ಸಮರ್ಪಕ ವಿದ್ಯುತ್ ಕಲ್ಪಿಸುವಂತೆ ಒತ್ತಾಯಿಸಿ ಶಿಂಗಳಾಪುರ ಗ್ರಾಮದ ರಾಜ್ಯ ರೈತ ಸಂಘದ ಕಾರ್ಯಕರ್ತರು ಇಲ್ಲಿಯ ಹೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿ ಹೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಎಸ್.ಪಿ. ವರಾಳೆಗೆ ಶುಕ್ರವಾರ ಮನವಿ ಸಲ್ಲಿಸಿದರು.
ಘಟಪ್ರಭಾ ನದಿ ದಂಡೆಯ ಗ್ರಾಮಗಳಲ್ಲಿ ನದಿಗೆ ಪೆಂಪ್‌ಸೆಟ್ ಅಳವಡಿಸಿ ನೀರನ್ನು ಪಡೆಯುತ್ತಾರೆ ಎಂಬ ಉದ್ದೇಶದಿಂದ ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಪೂರೈಕೆಯನ್ನು ತಡೆಹಿಡಿದಿದ್ದಾರೆ. ಇದರಿಂದಾಗಿ ಬೇಸಿಗೆಯ ಬಿಸಿಲಿನಿಂದಾಗಿ ರೈತರಿಗೆ ಹಾಗೂ ಜಾನವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಇಲ್ಲಿರುವ ಸಮಸ್ಯೆ ಅಧಿಕಾರಿಗಳಿಗೆ ಹೇಳಿದರೂ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಶೀಘ್ರವೇ ಹೆಸ್ಕಾಂ ಅಧಿಕಾರಿಗಳು ರೈತರಿಗೆ ಸಮರ್ಪಕ ವಿದ್ಯುತ್ ಕಲ್ಪಿಸಬೇಕು ಇಲ್ಲವಾದಲ್ಲಿ ರೈತ ಸಂಘಟನೆಯಿಂದ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಪ್ರತಿಭನೆಯಲ್ಲಿ ತಾಲೂಕಾಧ್ಯಕ್ಷ ಮುತ್ತೆಪ್ಪ ಬಾಗನ್ನವರ, ನಾಗಪ್ಪ ಕಪರಟ್ಟಿ, ಮಲ್ಲಿಕಾರ್ಜುನ ಈಳಿಗೇರ, ಜಗದೀಶ ಅಗಸರ ಸೇರಿದಂತೆ ರಾಜ್ಯ ರೈತ ಸಂಘದ ಕಾರ್ಯಕರ್ತರು ಇದ್ದರು.
Advertisement
ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯ ಸಂಚಾಲಕ ಗಣಪತಿ ಈಳಿಗೇರ ಮಾತನಾಡಿ, ರೈತರಿಗೆ ಒಂದು ದಿನಕ್ಕೆ 10 ಗಂಟೆಗಳ ಕಾಲ 3ಫೇಸ್ ವಿದ್ಯುತ್ ನೀಡಬೇಕೆಂದು ಸರ್ಕಾರದ ಆದೇಶವಿದ್ದರೂ ಹೆಸ್ಕಾಂ ಅಧಿಕಾರಿಗಳು ದಿನದಲ್ಲಿ 3 ಗಂಟೆ ವಿದ್ಯುತ್ ನೀಡುತ್ತಿಲ್ಲ. ಇಲ್ಲಿರುವ ಸಮಸ್ಯೆ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ರೀತಿ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.