ಹುಬ್ಬಳ್ಳಿ: ಪರಿಶಿಷ್ಟ ನೌಕರರ ಮುಂಬಡ್ತಿ ಬಿಕ್ಕಟ್ಟು ಪರಿಹರಿಸಲು ಮುಖ್ಯಮಂತ್ರಿ ಕೂಡಲೇ ಒಂದು ದಿನದ ವಿಶೇಷ ವಿಧಾನಮಂಡಲ ಅಧಿವೇಶನ ಕರೆಯಬೇಕು ಹಾಗೂ ನೌಕರರ ಈ ಬಿಕ್ಕಟ್ಟು ಶಾಶ್ವತವಾಗಿ ಪರಿಹರಿಸಲು ಕೇಂದ್ರ ಸರಕಾರ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಎಸ್‌ಸಿ/ಎಸ್‌ಟಿ ಬಡ್ತಿ ಮಸೂದೆ ಮಂಡಿಸಿ ಅನುಮೋದನೆ ಪಡೆಯಬೇಕೆಂಬ ನಿರ್ಣಯವನ್ನು ವಾಯವ್ಯ ಸಾರಿಗೆ ಮತ್ತು ಕರ್ನಾಟಕ ವಿದ್ಯುತ್ಛಕ್ತಿ ಮಂಡಳಿ ಪರಿಶಿಷ್ಟ ನೌಕರರ ಜಿಲ್ಲಾಮಟ್ಟದ ಸಮಾವೇಶದಲ್ಲಿ ಕೈಗೊಳ್ಳಲಾಯಿತು.
ನಗರದ ಹೊಟೇಲೊಂದರಲ್ಲಿ ಸೋಮವಾರ ನಡೆದ ಧಾರವಾಡ ಜಿಲ್ಲಾ ಸರಕಾರಿ/ಅರೆಸರಕಾರಿ ಪಜಾ/ಪಪಂ ನೌಕರರ ಒಕ್ಕೂಟವು ವಾಕರಸಾ ಸಂಸ್ಥೆಯ ಪರಿಶಿಷ್ಟ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕರ್ನಾಟಕ ವಿದ್ಯುತ್ಛಕ್ತಿ ಮಂಡಳಿ ಎಸ್ಸಿ/ಎಸ್ಟಿ ಸಂಘಗಳ ಕಲ್ಯಾಣ ಸಮಿತಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಮಾಲೋಚನಾ ಸಭೆಯಲ್ಲಿ ಈ ಎರಡು ನಿರ್ಣಯ ತೆಗೆದುಕೊಳ್ಳಲಾಗಿದೆ.
ಕೆಎಸ್‌ಆರ್‌ಟಿಸಿ ನಿಗಮಗಳ ಪರಿಶಿಷ್ಟ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಡಾ| ಎಂ. ವೆಂಕಟಸ್ವಾಮಿ ನಿರ್ಣಯ ಮಂಡಿಸಿದರು. ಎಲ್ಲ ಇಲಾಖೆಗಳ ದಲಿತ ನೌಕರರ ಸಂಪುಟನೆಗಳ ಮುಖಂಡರು ಸರ್ವಾನುಮತದಿಂದ ಅನುಮೋದಿಸಿದರು. ಇದಕ್ಕೂ ಮುನ್ನ ಸಭೆಯಲ್ಲಿ ಪಾಲ್ಗೊಂಡಿದ್ದ ನೌಕರ ಸಂಘಟನೆಗಳ ಮುಖಂಡರು ಮಾತನಾಡಿ, ಸಂಘಟನೆಯ ಕೊರತೆಯಿಂದ ಪರಿಶಿಷ್ಟ ನೌಕರರಿಗೆ ಮುಂಬಡ್ತಿ ಪಡೆಯುವಲ್ಲಿ ಹಿನ್ನಡೆಯಾಗುತ್ತಿದೆ.
ಸಂವಿಧಾನಾತ್ಮಕ ಹೋರಾಟಕ್ಕೆ ಸಂಘಟಿತರಾಗಿ ಸಿದ್ಧರಾಗೋಣ. ರಾಜ್ಯ ಮತ್ತು ಕೇಂದ್ರ ಸರಕಾರದ ಮೇಲೆ ಒತ್ತಡ ತರೋಣ ಎಂದರು. ಪಿ.ಜಿ. ಅಮ್ಮಿನಬಾವಿ, ದೊಡ್ಡಚೌಡಪ್ಪನವರ, ಪ್ರಭಾಕರ ಹಾದಿಮನಿ, ಲಕ್ಷ್ಮಣ ಬೀಳಗಿ, ಎಂ.ಎಚ್. ಚಳ್ಳಮರದ, ಶಶಿಧರ ಗಾಜಿ, ನಾಗರಾಜ ಪೂಜಾರ, ಪ್ರೇಮನಾಥ ಚಿಕ್ಕತುಂಬಳ, ಡಿ. ಪ್ರಸಾದ, ಎಲ್.ಎಫ್. ಡೊಂಗರೆ, ವಿ.ಎಲ್. ಗುಂಜಿಕರ ಇತರರಿದ್ದರು.