ಹೊಸಕೋಟೆ: ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿರುವ ನಿಲ್ದಾಣದಲ್ಲಿ ನಿರ್ದಿಷ್ಟ ಸ್ಥಳದಲ್ಲಿ ಬಸ್ ಗಳು ನಿಲುಗಡೆಯಾಗುತ್ತಿಲ್ಲ. ಪ್ರಯಾಣಿಕರು ನಿತ್ಯ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣ ವಾಗಿದೆ. ಹೀಗಾಗಿ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮಕೈಗೊಂಡು, ನಿರ್ದಿಷ್ಟ ಸ್ಥಳದಲ್ಲಿ ಬಸ್ ನಿಲುಗಡೆಯಾಗುವಂತೆ ಮಾಡಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.
ಪ್ರಯಾಣಿಕರಿಗೆ ತೊಂದರೆ: ಇಲ್ಲಿ ನಿರ್ಮಿಸಲಾಗಿರುವ ತಂಗುದಾಣದಲ್ಲಿ ಬಸ್‌ಗಳು ನಿರ್ದಿಷ್ಟ ಸ್ಥಳದಲ್ಲಿ ನಿಲುಗಡೆಯಾಗುತ್ತಿಲ್ಲ. ಬೆಂಗಳೂರಿನಿಂದ ಕೋಲಾರ, ಚಿಂತಾಮಣಿ, ಮಾಲೂರು ಹಾಗೂ ತಮಿಳುನಾಡು, ಆಂಧ್ರ ಪ್ರದೇಶ ಸೇರಿದಂತೆ ಹೊರ ರಾಜ್ಯಗಳಿಗೆ ಸಂಚರಿಸುವ ರಾಜ್ಯ ರಸ್ತೆ ಸಾರಿಗೆ ಹಾಗೂ ಖಾಸಗಿ ಬಸ್‌ಗಳು ಬೇಕಾಬಿಟ್ಟಿಯಾಗಿ ನಿಲುಗಡೆಯಾಗುತ್ತಿವೆ. ಹೀಗಾಗಿ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ ಎಂದು ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಒಮ್ಮೊಮ್ಮೆ ಒಟ್ಟಿಗೆ ನಾಲ್ಕೈದು ಬಸ್‌ಗಳು ಬಂದು ಎಲ್ಲಿ ನಿಲುಗಡೆ ಮಾಡುತ್ತಾರೆ ಎಂದು ತಿಳಿಯದೇ ಪ್ರಯಾಣಿಕರು ಗಲಿಬಿಲಿಗೊಳಗಾಗುತ್ತಾರೆ. ಬೆಂಗಳೂರಿಗೆ ಸಂಚರಿಸುವ ಹಾಗೂ ಬೆಂಗಳೂನಿಂದ ಹೊರ ಹೋಗುವ ರಾಜ್ಯ ರಸ್ತೆ ಸಾರಿಗೆ, ಬಿಎಂಟಿಸಿ ಬಸ್‌ಗಳೂ ಇಲ್ಲಿಯೇ ನಿಲುಗಡೆಯಾಗುವು ದರಿಂದ ಪ್ರಯಾಣಿಕರಿಗೆ ತೊಂದರೆಯಾಗಿದೆ. ರಾಷ್ಟ್ರೀಯ ಹೆದ್ದಾರಿ 207ರಿಂದ ರಾಷ್ಟ್ರೀಯ ಹೆದ್ದಾರಿ 75ಕ್ಕೆ ಸಂಪರ್ಕಿಸುವ ತಿರುವಿನಲ್ಲಿಯೇ ಬಸ್ ನಿಲ್ದಾಣ ವಿದರುವುದರಿಂದ ಇತರೆ ವಾಹನಗಳ ಸಂಚಾರಕ್ಕೂ ಅಡಚಣೆಯಾಗುತ್ತಿದೆ. ಹೀಗಾಗಿ ಮುಂದಿನ ದಿನಗಳ ಹೀಗಾಗದಂತೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.
ಬಳಕೆಯಾಗದ ಬಸ್ ಟರ್ಮಿನಲ್: ಪಟ್ಟಣದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ಸೌಲಭ್ಯ ಒದಗಿಸಬೇಕೆಂಬ ಉದ್ದೇಶದಿಂದ 2017ರ ಫೆಬ್ರವರಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿ, 20 ಕೋಟಿ ರೂ.ಗಳ ವೆಚ್ಚದಲ್ಲಿ 18 ತಿಂಗಳೊಳಗೆ ಪೂರ್ಣಗೊಳ್ಳಬೇಕಾದ ಬಿಎಂಟಿಸಿ ಬಸ್ ಟರ್ಮಿನಲ್, 2019ರ ಜೂ.15ರಂದು ಉದ್ಘಾಟನೆಗೊಂಡಿದೆ. ಬಸ್ ಟರ್ಮಿನಲ್ ಕೇವಲ ಬಿಎಂಟಿಸಿ ಬಸ್‌ಗಳಿಗಷ್ಟೇ ಸೀಮಿತಗೊಂಡಿರುವ ಕಾರಣದಿಂದಾಗಿ ಇತರೆ ಬಸ್ ಗಳಲ್ಲಿ ಸಂಚರಿಸುವವರು ರಸ್ತೆಯಲ್ಲಿಯೇ ನಿಲ್ಲಬೇಕಾದ್ದು ಅನಿವಾರ್ಯವಾಗಿದೆ. ಬಸ್ ಟರ್ಮಿನಲ್‌ನಲ್ಲಿ ಪ್ರಯಾಣಿಕರಿಗೆ ಶೌಚಾಲಯ, ಉಪಹಾರ ಮಂದಿರದಂತಹ ಮೂಲ ಸೌಲಭ್ಯಗಳೂ ಕೊರತೆಯಿಂದಾಗಿ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗುತ್ತಿಲ್ಲ.
ರಸ್ತೆ ದಾಟುವುದಕ್ಕಾಗಿ ಅನುಕೂಲ ಕಲ್ಪಿಸಿ: ರಸ್ತೆ ದಾಟಲು ಅನುವಾಗುವಂತೆ ಸೂಕ್ತವಾದ ಸಂಚಾರ ನಿಯಂತ್ರಣ ದೀಪಗಳನ್ನು ಅಳವಡಿಸಬೇಕು. ಬೆಂಗಳೂರು, ವೈಟ್‌ಫೀಲ್ಡ್, ವರ್ತೂರಿಗೆ ಹೆಚ್ಚಾಗಿ ಬಿಎಂಟಿಸಿ ಬಸ್‌ಗಳು ಸಂಚರಿಸುತ್ತಿರುವ ಕಾರಣ ಪ್ರತ್ಯೇಕ ನಿಲುಗಡೆಯ ವ್ಯವಸ್ಥೆ ಮಾಡಬೇಕು. ಇದರಿಂದ ರಸ್ತೆ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸುವ ವರಿಗೆ ಅನುಕೂಲವಾಗಲಿದೆ. ಈ ಬಗ್ಗೆ ನೂತನ ಶಾಸಕರು ಚುನಾವಣೆ ಸಂದರ್ಭದಲ್ಲಿ ನೀಡಿರುವ ಭರವಸೆಯನ್ನು ಆದ್ಯತೆ ಮೇರೆಗೆ ಈಡೇರಿಸಲು ಗಮನಹರಿಸಬೇಕು ಎಂಬುದು ಬಹುತೇಕ ಪ್ರಯಾಣಿಕರ ಒತ್ತಾಯವಾಗಿದೆ.
ರಸ್ತೆಯಲ್ಲಿ ಹಂಪ್ ನಿರ್ಮಿಸಿದರೂ ವಾಹನಗಳು ವೇಗವಾಗಿ ಸಂಚರಿಸುತ್ತಿರುವುದರಿಂದ ವೃದ್ಧರು, ಶಾಲಾ ಮಕ್ಕಳು, ಮಹಿಳೆಯರು ಭೀತಿಯಿಂದಲೇ ರಸ್ತೆ ದಾಟಬೇಕಾಗಿದೆ ಎಂದು ಆರೋಪಿಸಿದ್ದಾರೆ. ಬೇಕಾಬಿಟ್ಟಿ ವಾಹನ ನಿಲುಗಡೆ ನಿಯಂತ್ರಣಕ್ಕೆ
ಈಗಾಗಲೇ ಎರಡೂ ಬದಿಯಲ್ಲಿ ಪೊಲೀಸರನ್ನುನಿಯೋಜಿಸಲಾಗಿದೆ. ಸಂಚಾರ ಸುಗಮಗೊಳ್ಳಲು ಪ್ರಯಾಣಿಕರು ಸಹಕರಿಸಬೇಕು. ನಿರ್ದಿಷ್ಟ ಸ್ಥಳದಲ್ಲಿಯೇ ವಾಹನ ನಿಲುಗಡೆ ಹಾಗೂ ಬಸ್ ನಿಲ್ದಾಣದಲ್ಲಿ ಶೌಚಾಲಯದಂತಹ ಅಗತ್ಯ ಸೌಲಭ್ಯ ಒದಗಿಸಲು ಲ್ಯಾನ್ಕೊ ಸಂಸ್ಥೆಗೆ ಸೂಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.