Advertisement

ಉತ್ತರಾಖಂಡದ 700 ಗ್ರಾಮಗಳಲ್ಲಿ ಜನರೇ ಇಲ್ಲ!

04:35 AM Jun 25, 2018 | Team Udayavani |

ಡೆಹ್ರಾಡೂನ್‌: ಬಡತನ ಹಾಗೂ ಉದ್ಯೋಗ ಅವಕಾಶದ ಕೊರತೆಯಿಂದ ಹಳ್ಳಿಗಳ ಜನರು ನಗರಗಳಿಗೆ ವಲಸೆ ಹೋಗುವ ಪ್ರಕ್ರಿಯೆ ಹೊಸದೇನೂ ಅಲ್ಲ. ಹಾಗೆಂದ ಮಾತ್ರ ಇಡೀ ಊರಿಗೆ ಊರೇ ವಲಸೆ ಹೋಗುವುದಿಲ್ಲ. ಆದರೆ ಉತ್ತರಾಖಂಡದ ಪರಿಸ್ಥಿತಿ ತೀರಾ ವಿಷಮವಾಗಿದೆ. ಇಲ್ಲಿನ 700 ಗ್ರಾಮಗಳ ಜನರು ಉದ್ಯೋಗ ಹಾಗೂ ಉತ್ತಮ ಮೂಲ ಸೌಕರ್ಯಕ್ಕಾಗಿ ಕಳೆದ 10 ವರ್ಷಗಳಲ್ಲಿ ಸಂಪೂರ್ಣವಾಗಿ ಊರನ್ನೇ ತೊರೆದು ಹೋಗಿದ್ದಾರೆ. ಈಗ 700 ಗ್ರಾಮಗಳು ಸಂಪೂರ್ಣ ನಿರ್ಜನವಾಗಿದ್ದು, ಪಾಳುಬಿದ್ದ ಮನೆ ಹಾಗೂ ಗುಡಿಗಳು ಮಾತ್ರ ಕಾಣಸಿಗುತ್ತಿವೆ. ಸುಮಾರು 3.83 ಲಕ್ಷ ಜನರು ಉದ್ಯೋಗ, ಉತ್ತಮ ಮೂಲಸೌಕರ್ಯವನ್ನು ಅರಸಿ ನಗರಗಳಿಗೆ ವಲಸೆ ಹೋಗಿದ್ದಾರೆ. ಇಂತಹ ಗ್ರಾಮಗಳನ್ನು ಭೂತಿಯಾ ಗಾಂವ್‌ (ಭೂತದ ಊರು) ಎಂದು ಸಾಮಾನ್ಯವಾಗಿ ಕರೆಯಲಾಗುತ್ತದೆ.

Advertisement

ಚೀನ ಗಡಿಯನ್ನು ಉತ್ತರಾಖಂಡ ಹಂಚಿಕೊಂಡಿದ್ದು, ಈ ಗಡಿ ಗ್ರಾಮಗಳಲ್ಲಿ ಮೂಲ ಸೌಕರ್ಯ ಕೊರತೆ, ಉದ್ಯೋಗಾವಕಾಶದ ಕೊರತೆಯೇ ಇಂಥ ಸಾಮೂಹಿಕ ವಲಸೆಗೆ ಮುಖ್ಯ ಕಾರಣವಾಗಿದೆ. ವಲಸೆ ಸಮಸ್ಯೆಯನ್ನು ಅರಿಯಲು ಕಳೆದ ವರ್ಷ ಉತ್ತರಾಖಂಡ ಸರಕಾರ ಸಮಿತಿ ರಚಿಸಿತ್ತು. ಕೆಲವು ದಿನಗಳ ಹಿಂದೆ ಸಮಿತಿ ವರದಿಯನ್ನೂ ಸಲ್ಲಿಸಿದೆ. ವಲಸೆ ಹೋದವರ ಪೈಕಿ ಶೇ. 70ರಷ್ಟು ಜನರು ರಾಜ್ಯದಲ್ಲೇ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸಾಗಿದ್ದಾರೆ. ಚೀನ ಗಡಿ ಹಂಚಿಕೊಂಡಿರುವ 14 ಗ್ರಾಮಗಳೂ ನಿರ್ಜನವಾಗಿವೆ. ಇನ್ನೂ 565 ಗ್ರಾಮಗಳು ನಿರ್ಜನಾಗುವತ್ತ ಸಾಗಿವೆ. ಈ ಗ್ರಾಮಗಳ ಜನಸಂಖ್ಯೆ ಶೇ. 50ರಷ್ಟು ಕುಸಿದಿದೆ. ಅಚ್ಚರಿಯ ಸಂಗತಿಯೆಂದರೆ 13 ಜಿಲ್ಲೆಗಳ 850 ಗ್ರಾಮಗಳಲ್ಲಿ ಜನಸಂಖ್ಯೆ ಏರಿಕೆಯೂ ಆಗಿದೆ. ಸಾಮಾನ್ಯವಾಗಿ ಪ್ರವಾಸೋದ್ಯಮ ಚಟುವಟಿಕೆ ಹೆಚ್ಚಿರುವ ಗ್ರಾಮಗಳಲ್ಲಿ ಜನಸಂಖ್ಯೆ ಏರಿಕೆ ಕಂಡಿದ್ದರೆ, ಗುಡ್ಡಗಾಡು ಪ್ರದೇಶಗಳಲ್ಲಿ ಜನಸಂಖ್ಯೆ ಇಳಿಕೆಯಾಗಿದೆ ಎಂದು ಸಮಿತಿ ತನ್ನ ವರದಿಯಲ್ಲಿ ತಿಳಿಸಿದೆ.

ಸೇನೆಗೆ ಸೇರುವವರೂ ಹೆಚ್ಚು: ಗಡಿ ಗ್ರಾಮಗಳಲ್ಲಿ ಸೇನೆಗೆ ಸೇರುವವರ ಸಂಖ್ಯೆ ಹೆಚ್ಚಿದ್ದು, ರಾಜ್ಯದಲ್ಲಿ ಒಟ್ಟು 60 ಸಾವಿರ ಜನರು ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 2 ಲಕ್ಷಕ್ಕೂ ಹೆಚ್ಚು ನಿವೃತ್ತ ಯೋಧರಿದ್ದಾರೆ. ನಿವೃತ್ತಿಯ ಅನಂತರ ಉತ್ತಮ ಮೂಲಸೌಕರ್ಯಕ್ಕಾಗಿ ಇವರು ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಇತ್ತೀಚೆಗೆ ಉತ್ತರಾಖಂಡಕ್ಕೆ ಭೇಟಿ ನೀಡಿದ್ದ ಗೃಹ ಸಚಿವ ರಾಜನಾಥ್‌ ಸಿಂಗ್‌, ರಾಜ್ಯದ ವಲಸೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ಹೇಳಿದ್ದಾರೆ. ಅಲ್ಲದೆ ಗಡಿ ಭಾಗದ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವುದಾಗಿಯೂ ಅವರು ಹೇಳಿದ್ದಾರೆ.

10 ವರ್ಷಗಳಲ್ಲಿ ಗುಳೆ ಹೋದವರು : 3.83 ಲಕ್ಷ  ಮಂದಿ
565 ಗ್ರಾಮಗಳಲ್ಲಿ ಜನಸಂಖ್ಯೆ ಇಳಿಕೆ : 50%
ಚೀನ ಗಡಿಯ 14 ಗ್ರಾಮಗಳು ನಿರ್ಜನ
850 ಗ್ರಾಮಗಳಲ್ಲಿ ಜನಸಂಖ್ಯೆ ಏರಿಕೆ

Advertisement

Udayavani is now on Telegram. Click here to join our channel and stay updated with the latest news.

Next