ಚಿಕ್ಕೋಡಿ: ರಾಯಬಾಗ ಮೀಸಲು ವಿಧಾನಸಭೆ ಕ್ಷೇತ್ರದಲ್ಲಿ ಒಂದೊಂದು ಕಡೆ ಒಂದೊಂದು ಅಭ್ಯರ್ಥಿ ಮುನ್ನಡೆ ಪಡೆಯುವ ಮೂಲಕ ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ ಸಮಬಲ ಸಾಧಿಸುತ್ತವೆ ಎನ್ನುವ ಚರ್ಚೆಗಳು ಕುತೂಹಲ ಮೂಡಿಸಿವೆ.
ಚಿಕ್ಕೋಡಿ ಲೋಕಸಭೆ ಮತಕ್ಷೇತ್ರದಲ್ಲಿ ಬರುವ ರಾಯಬಾಗ ಮೀಸಲು ವಿಧಾನಸಭೆ ಕ್ಷೇತ್ರ ಬಿಜೆಪಿ ಭದ್ರಕೋಟೆಯಾಗಿದೆ. ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸತತ ಮೂರು ಬಾರಿ ಆಯ್ಕೆಗೊಳ್ಳುವ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ಆದರೆ ಕಳೆದ 2014ರ ಲೋಕಸಭೆ ಚುನಾವಣೆಯಲ್ಲಿ ಸಂಸದ ಪ್ರಕಾಶ ಹುಕ್ಕೇರಿ 6,324 ಮತಗಳು ಮುನ್ನಡೆ ಪಡೆದುಕೊಂಡಿದ್ದಾರೆ. ಆದರೆ ಈ ಬಾರಿ ಕಾಂಗ್ರೆಸ್‌ಗೆ ಮುನ್ನಡೆ ಸಾಧಿಸುವ ನಿರೀಕ್ಷೆಗಳಿಲ್ಲ, ಏನೇ ಆದರೂ ಬಿಜೆಪಿ ಅಭ್ಯರ್ಥಿ ಪಡೆದಿರುವ ಮತಗಳ ಸರಿಸಮನಾಗಿ ಕಾಂಗ್ರೆಸ್ ಮತ ಪಡೆಯುತ್ತದೆ ಎನ್ನುವ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿದೆ.
ಕಾಂಗ್ರೆಸ್-ಬಿಜೆಪಿಗೆ ಒಳಹೊಡೆತ: ಮಾಜಿ ಸಚಿವ ರಮೇಶ ಜಾರಕಿಹೊಳಿ ಕೊನೆಗಳಿಗೆಯಲ್ಲಿ ಬಿಜೆಪಿ ಬೆಂಬಲಿಸಿದ್ದಾರೆ ಎನ್ನುವ ಕಾರಣದಿಂದ ರಾಯಬಾಗ ಭಾಗದಲ್ಲಿ ವಿಧಾನ ಪರಿಷತ್ ಸದಸ್ಯ ವಿವೇಕರಾವ ಪಾಟೀಲ ಬಿಜೆಪಿ ಬೆಂಬಲಿಸುವ ಮೂಲಕ ಕಾಂಗ್ರೆಸ್‌ಗೆ ಆಘಾತ ನೀಡಿರುವುದು ಬಿಜೆಪಿಗೆ ಅನುಕೂಲವಾಗಿದೆ ಎನ್ನುವುದು ಬಿಜೆಪಿ ವಲಯದಲ್ಲಿ ಭಾರಿ ಚರ್ಚೆವಾಗುತ್ತಿದೆ. ಅದರಂತೆ ಮಾಜಿ ಸಂಸದ ರಮೇಶ ಕತ್ತಿ ಬಿಜೆಪಿ ಮೇಲೆ ಮುನಿಸಿಕೊಂಡು ಕೊನೆಗಳಿಗೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡುವ ಮೂಲಕ ಬಿಜೆಪಿಗೆ ದೊಡ್ಡ ಹೊಡೆತ ಕೊಟ್ಟಿದ್ದಾರೆ. ಹೀಗಾಗಿ ಬಿಜೆಪಿ ನಿರೀಕ್ಷೆ ಮಾಡಿದಷ್ಟು ಲೀಡ್ ಬರುವುದಿಲ್ಲ ಎನ್ನುವುದು ಕಾಂಗ್ರೆಸ್ ಕಾರ್ಯಕರ್ತರ ಅಭಿಪ್ರಾಯ.
ಪ್ರಭಾವ ಬೀರಿದ ಮೋದಿ ಅಲೆ: ರಾಯಬಾಗ ಕ್ಷೇತ್ರದ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಯುವಕರು ಮತ್ತು ಪ್ರಜ್ಞಾವಂತರ ಮತದಾರರು ನರೇಂದ್ರ ಮೋದಿ ಮತ್ತೂಮ್ಮೆ ಪ್ರಧಾನಿಯಾಗಬೇಕೆಂದು ಬಿಜೆಪಿ ಬೆಂಬಲಿಸಿದ್ದಾರೆ. ಬಾಲಾಕೋಟ್ ದಾಳಿಯಿಂದ ಏಟಿಗೆ ಎದುರೇಟು ಕೊಟ್ಟ ಸೈನಿಕರ ಕಾರ್ಯ ಮೆಚ್ಚುವಂಥದ್ದು, ಸೈನಿಕರಿಗೆ ಮನೋಸ್ಥೈರ್ಯ ತುಂಬಿದ ಮೋದಿ ಪರವಾಗಿ ನಾವೆಲ್ಲ ಇದ್ದೇವೆ ಎಂಬುದು ಯುವಕರ ಅಭಿಪ್ರಾಯ.
ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಟಾನಿಕ್: ರಾಯಬಾಗ ಕ್ಷೇತ್ರದ ಎಲ್ಲೆಡೆ ಮೋದಿ ಅಲೆ ಮತ್ತು ಬಿಜೆಪಿ ಪರ ವಾತಾವರಣ ನಿರ್ಮಾಣದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಜಾಣ ನಡೆ ಅನುಸರಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕರೆಯಿಸಿ ಎರಡು ಬಾರಿ ಪ್ರಚಾರ ಮಾಡಿಸಿದ್ದಾರೆ. ಇದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೆಚ್ಚಿನ ಹುರುಪು ತುಂಬಿದ್ದು, ಬಿಜೆಪಿಗೆ ಹೋಗುವ ಮತಗಳನ್ನು ಸಿದ್ದರಾಮಯ್ಯ ತಡೆದಿದ್ದಾರೆ ಎನ್ನುವುದು ಕ್ಷೇತ್ರದಾದ್ಯಂತ ಚರ್ಚೆಯಾಗುತ್ತಿದೆ.
Advertisement
ರಾಯಬಾಗ ಮೀಸಲು ಕ್ಷೇತ್ರದ ಅರ್ಧಕ್ಕಿಂತ ಹೆಚ್ಚಿನ ಹಳ್ಳಿಗಳು ತೀವ್ರ ಬರಪೀಡಿತ ಪ್ರದೇಶಕ್ಕೆ ಒಳಪಡುವುದರಿಂದ ಈ ಕ್ಷೇತ್ರದಲ್ಲಿ ನೀರಾವರಿಗೆ ಆದ್ಯತೆ ನೀಡುವ ಅಭ್ಯರ್ಥಿಗಳನ್ನು ಬೆಂಬಲಿಸುತ್ತಾ ಬರಲಾಗಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಪ್ರಮುಖ ಕರಗಾಂವ ಏತ ನೀರಾವರಿ ಯೋಜನೆ ಅನುಷ್ಠಾನ ಮಾಡಿ ರೈತರ ಜಮೀನುಗಳಿಗೆ ನೀರು ಕೊಡುತ್ತೇನೆಂದು ಪ್ರಕಾಶ ಹುಕ್ಕೇರಿ ಭರವಸೆ ನೀಡಿದರು. ಆದರೆ ಐದು ವರ್ಷಗಳಲ್ಲಿ ನೀರಾವರಿ ಯೋಜನೆಗೆ ಯಾವುದೇ ಕಾರ್ಯ ಮಾಡದಿರುವುದರಿಂದ ಪ್ರಕಾಶ ಹುಕ್ಕೇರಿ ಮೇಲೆ ಬರಪೀಡಿತ ಜನ ಮುನಿಸಿಕೊಂಡಿದ್ದರು. ಪ್ರಚಾರಕ್ಕೆ ತೆರಳಿದಾಗ ಕರಗಾಂವ ಏತ ನೀರಾವರಿ ಯೋಜನೆ ವಿಷಯ ಬಿಟ್ಟರೆ ಬೇರೆ ವಿಷಯ ಪ್ರಸ್ತಾಪವಾಗಿಲ್ಲ, ಹೀಗಾಗಿ ಕರೋಶಿ ಜಿಪಂ ವ್ಯಾಪ್ತಿಯ ಮತದಾರರು ಪೂರ್ಣವಾಗಿ ಬಿಜೆಪಿ ಬೆಂಬಲಿಸಿದ್ದಾರೆ ಎನ್ನುವುದು ಚರ್ಚೆಯ ವಿಷಯ. ಆದರೆ ನಾಗರಮುನ್ನೋಳ್ಳಿ ಜಿಪಂ.ವ್ಯಾಪ್ತಿಯಲ್ಲಿ ಅರ್ಧಕ್ಕಿಂತ ಹೆಚ್ಚಿನ ಮತದಾರರು ಕಾಂಗ್ರೆಸ್ ಬೆಂಬಲಿಸಿದ್ದಾರೆ ಎನ್ನುವುದು ಜನಜನಿತವಾಗಿದೆ.
Related Articles
ರಾಯಬಾಗ ಕ್ಷೇತ್ರದ ಬಾ. ಸವದತ್ತಿ, ನಸಲಾಪೂರ ಜಿಪಂ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಮುನ್ನಡೆ ಬರುತ್ತದೆ. ನಾಗರಮುನ್ನೋಳ್ಳಿ ಜಿಪಂ ಮತ್ತು ರಾಯಬಾಗ ನಗರ, ಕಬ್ಬೂರ ಪಟ್ಟಣ ಕಾಂಗ್ರೆಸ್‌ಗೆ ಭಾರಿ ಪ್ರಮಾಣದಲ್ಲಿ ಮತಗಳು ಲಭಿಸಲಿವೆೆ. ಉಳಿದ ಕಡೆಗಳಲ್ಲಿಯೂ ಕಾಂಗ್ರೆಸ್‌ಗೆ ಮತಗಳು ಬರಲಿವೆ. ಇದರಿಂದಈ ಬಾರಿ ಗೆಲುವು ನಮ್ಮದೆಯಾಗುತ್ತದೆ. -ಈರಗೌಡ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ರಾಯಬಾಗ
ರಾಯಬಾಗ ಕ್ಷೇತ್ರದಲ್ಲಿ ಕಾಂಗ್ರೆಸ್ ಶಕ್ತಿ ಮೀರಿ ಕೆಲಸ ಮಾಡಿದೆ. ಹೀಗಾಗಿ 7 ರಿಂದ 10 ಸಾವಿರ ಮುನ್ನಡೆ ಪಡೆಯುವ ನಿರೀಕ್ಷೆ ಇದೆ. ಒಂದು ವೇಳೆ ಮುನ್ನಡೆ ಸಿಗದೇ ಹೋದರೂ ಬಿಜೆಪಿ ಸರಿಸಮನಾಗಿ ಕಾಂಗ್ರೆಸ್‌ಗೆ ಮತಗಳು ಬರಲಿವೆ. ಯಾರು ಯಾರಿಗೂ ಒಳ್ಳೋಳಗೆ ಬೆಂಬಲ ನೀಡಿಲ್ಲ, ಅವರವರ ಪಕ್ಷದಲ್ಲಿ ಅವರವರು ಕೆಲಸ ಮಾಡಿದ್ದಾರೆ.
– ಮಹಾವೀರ ಮೋಹಿತೆಕಾಂಗ್ರೆಸ್ ಮುಖಂಡರು,ಕೆಆರ್‌ಡಿಸಿಎಲ್ ಮಾಜಿ ಉಪಾಧ್ಯಕ್ಷರು
ನರೇಂದ್ರ ಮೋದಿ ಮತ್ತೂಮ್ಮೆ ಪ್ರಧಾನಿಯಾಗಬೇಕು. ಶಾಸಕ ದುರ್ಯೋಧನ ಐಹೊಳೆ ಅಭಿವೃದ್ಧಿ ಕಾರ್ಯಗಳಿಂದ ಜನ ಬಿಜೆಪಿ ಬೆಂಬಲಿಸಿದ್ದಾರೆ. ಕರೋಶಿ ಜಿ.ಪಂ. ವ್ಯಾಪ್ತಿಯಲ್ಲಿ 6 ರಿಂದ 8 ಸಾವಿರ ಮತಗಳ ಮುನ್ನಡೆ ಬರುತ್ತದೆ. ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಗೆಲುವು ನಿಶ್ಚಿತ. -ಮಹೇಶ ಭಾತೆಬಿಜೆಪಿ ರಾಜ್ಯ ರೈತ ಮೋರ್ಚಾ ಸಹ ಸಂಚಾಲಕರು
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ 17 ಸಾವಿರ ಮತಗಳು ಮುನ್ನಡೆ ಬಂದಿದ್ದವು. ಈ ಚುನಾವಣೆಯಲ್ಲಿಯೂ ಅಷ್ಟೇ ಮತಗಳು ಬಿಜೆಪಿಗೆ ಬರಲಿವೆ. ಮೋದಿ ಅಲೆ, ಅಣ್ಣಾಸಾಹೇಬ ಜೊಲ್ಲೆ ಅವರ ಸಾಮಾಜಿಕ ಕಾರ್ಯಗಳು ಜನಪರವಾಗಿದ್ದರಿಂದ ಬಿಜೆಪಿಗೆ ಭಾರಿ ಮುನ್ನಡೆ ಬರುವುದರಲ್ಲಿ ಸಂದೇಹವಿಲ್ಲ. – ಸದಾನಂದ ಹಳಂಗಳಿಅಧ್ಯಕ್ಷರು ಬಿಜೆಪಿ ಮಂಡಲ ರಾಯಬಾಗ ಕ್ಷೇತ್ರ
•ಮಹಾದೇವ ಪೂಜೇರಿ
Advertisement