Advertisement

ಬಯೋಮೆಟ್ರಿಕ್‌ ಯಂತ್ರ ಅಳವಡಿಸಿ

12:53 PM Jan 08, 2018 | Team Udayavani |

ಬೀದರ: ಜಿಲ್ಲೆಯ 731 ನ್ಯಾಯ ಬೆಲೆ ಅಂಗಡಿಗಳಲ್ಲಿ ಬಯೋಮೆಟ್ರಿಕ್‌ ಯಂತ್ರ ಅಳವಡಿಸಲು ಕ್ರಮ ಕೈಗೊಳ್ಳಬೇಕೆಂದು ಸರ್ಕಾರದ ಅಪರ ಮುಖ್ಯಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಅವರು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ನಗರದ ಜಿಪಂ ಕಚೇರಿ ಸಭಾಂಗಣದಲ್ಲಿ ನಡೆದ ಸಕಾಲ ಸೇವೆಗಳು, ಜನಸ್ಪಂದನ ಹಾಗೂ ಸಿಪಿಜಿಆರ್‌ಎಂಎಸ್‌ ಅಡಿ ಸಾರ್ವಜನಿಕ ದೂರುಗಳ ವಿಲೇವಾರಿ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.

Advertisement

ಬಯೋಮೆಟ್ರಿಕ್‌ ಯಂತ್ರ ಅಳವಡಿಸಲು ಕೆಲವು ದಿನಗಳ ಕಾಲಾವಕಾಶ ಕೊಡಬೇಕು. ನಿಗದಿತ ಅವಧಿಯಲ್ಲಿ ಯಂತ್ರ ಅಳವಡಿಸಿಕೊಳ್ಳದೇ ಇದ್ದಲ್ಲಿ ಅಂತಹ ಅಂಗಡಿಗಳ ಪರವಾನಗಿ ರದ್ದುಪಡಿಸುವಂತಹ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು. ಮೊಬೈಲ್‌ ಅಥವಾ ಲ್ಯಾಪ್‌ಟಾಪ್‌ ಮೂಲಕವೂ ಸಾಫ್ಟ್‌ವೇರ್‌ ನಿರ್ವಹಿಸಲು ಸಾಧ್ಯವಿದೆ. ಲ್ಯಾಪ್‌ಟಾಪ್‌ ಇಲ್ಲದೇ ಇರುವ ನ್ಯಾಯಬೆಲೆ ಅಂಗಡಿಯವರು ಮೊಬೈಲ್‌ ಮೂಲಕ ಸಾಫ್ಟ್‌ವೇರ್‌ ಬಳಕೆ ಮಾಡುವಂತೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಸಕಾಲ ಯೋಜನೆ ಅನುಷ್ಠಾನದ ಬಗ್ಗೆ ವಿವಿಧ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಒಂದೇ ಸೂರಿನಡಿ ಸರ್ಕಾರದ 852 ಸೇವೆಗಳನ್ನು ನಿರ್ದಿಷ್ಟ ಕಾಲಮಿತಿಯಲ್ಲಿ ನೀಡಲು ಸಕಾಲ ಯೋಜನೆ ರೂಪಿಸಿದೆ.

ಜಿಲ್ಲೆಯಲ್ಲಿ ಇನ್ನೂ ಕೆಲವು ಇಲಾಖೆಗಳಲ್ಲಿ ಸಕಾಲ ಆರಂಭಿಸದಿರುವುದು ಕಂಡುಬಂದಿದೆ. ಸಕಾಲದಡಿ ಬರುವ ಸೇವೆಗಳ ಅರ್ಜಿಗಳನ್ನು ಕಡ್ಡಾಯ ಆನ್‌ ಲೈನ್‌ ಮೂಲಕ ಪಡೆದು, ಕಾಲಮಿತಿಯಲ್ಲಿ ವಿಲೇವಾರಿ ಮಾಡಬೇಕು. ನಿಯಮ ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಆರೋಗ್ಯ ಇಲಾಖೆಯಲ್ಲಿ ಜನನ ಮತ್ತು ಮರಣ ಪ್ರಮಾಣ ಪತ್ರ, ಆಸ್ಪತ್ರೆಯಿಂದ ಬಿಡುಗಡೆ ಪ್ರಮಾಣ ಪತ್ರ, ಅಂಗವಿಕಲ ಪ್ರಮಾಣ ಪತ್ರಗಳನ್ನು ಒಂದೇ ದಿನದಲ್ಲಿ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿ ಮಾಹಿತಿ ನೀಡಿದಾಗ, ಒಂದೇ ದಿನದಲ್ಲಿ ನೀಡಿದರೂ ಸಕಾಲದಡಿ ಬರುವ ಸೇವೆಗಳನ್ನು ಆನ್‌ಲೈನ್‌ ಮೂಲಕವೇ ನೋಂದಣಿ ಮಾಡಿಸಬೇಕು. ಅರಣ್ಯ ಇಲಾಖೆಯ 15 ಸೇವೆಗಳು ಸಕಾಲದ ವ್ಯಾಪ್ತಿಗೆ ಒಳಪಡುತ್ತವೆ. ಈ ಎಲ್ಲಾ ಸೇವೆಗಳನ್ನು ಆನ್‌ಲೈನ್‌ ಮೂಲಕ ನೀಡಬೇಕೆಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಜಿಲ್ಲೆಯ ಕೆಲವು ಅಂಗನವಾಡಿ ಕಟ್ಟಡಗಳು, ನ್ಯಾಯಬೆಲೆ ಅಂಗಡಿಗಳಲ್ಲಿ ನಾಮಫಲಕ ಇಲ್ಲದಿರುವುದು ಕಂಡು ಬಂದಿದೆ. ಆದ್ದರಿಂದ ನಾಮಫಲಕವಿಲ್ಲದ ಎಲ್ಲಾಕಡೆಗಳಲ್ಲಿ ಕೂಡಲೇ ಕಡ್ಡಾಯ ನಾಮ ಫಲಕಗಳನ್ನು ಅಳವಡಿಸಬೇಕು ಎಂದು ಸಂಬಂಧಿಸಿದ ಅಧಿ ಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು. 

ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಆಹಾರ ತಯಾರಿಸಲು ಸಾಂಪ್ರದಾಯಿಕ ಒಲೆಗಳ ಬದಲಿಗೆ ಅಡುಗೆ ಅನೀಲ ಬಳಕೆಗೆ ಒತ್ತು ನೀಡಬೇಕು ಎಂದು ಡಿಡಿಪಿಐ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಡಾ| ಎಚ್‌.ಆರ್‌.ಮಹಾದೇವ, ಜಿಪಂ ಸಿಇಒ ಡಾ| ಆರ್‌.ಸೆಲ್ವಮಣಿ, ಅಪರ ಜಿಲ್ಲಾಧಿಕಾರಿ
ಡಾ| ಡಿ.ಷಣ್ಮುಖ, ಸಹಾಯಕ ಆಯುಕ್ತರಾದ ಶಿವಕುಮಾರ ಶೀಲವಂತ, ಶರಣಬಸಪ್ಪ ಕೊಟಪ್ಪಗೋಳ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ಮಾತೃಪೂರ್ಣ ಪ್ರಗತಿ ಅಸಮರ್ಪಕ ಜಿಲ್ಲೆಯಲ್ಲಿ ಅಂಗನವಾಡಿಗಳು ಮತ್ತು ಮಾತೃಪೂರ್ಣ ಯೋಜನೆಯ ಪ್ರಗತಿಯು ಸಮರ್ಪಕವಾಗಿಲ್ಲ. ಅಂಗನವಾಡಿ ಮಕ್ಕಳಿಗೆ ಮೊಟ್ಟೆ, ಹಾಲು ಸೇರಿದಂತೆ ಎಲ್ಲಾ ಆಹಾರ ಪದಾರ್ಥಗಳನ್ನು ಸರಿಯಾಗಿ ಪೂರೈಸಬೇಕು. ಮಕ್ಕಳ ಕಲಿಕೆಯ ಬಗ್ಗೆ ಕೂಡ ಹೆಚ್ಚು ಮುತುವರ್ಜಿ ವಹಿಸಬೇಕು. ಮಾತೃಪೂರ್ಣ ಯೋಜನೆಯು ಜಿಲ್ಲೆಯಲ್ಲಿ ಸರಿಯಾಗಿ ಅನುಷ್ಠಾನಗೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೋಡಿಕೊಳ್ಳಬೇಕು.
ಟಿ.ಎಂ ವಿಜಯಭಾಸ್ಕರ್‌, ಅಪರ ಮುಖ್ಯ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next