Advertisement

ಜಾನುವಾರುಗಳಿಗೂ ಬಯೋಮೆಟ್ರಿಕ್‌!

11:56 PM Nov 16, 2022 | Team Udayavani |

ಬೆಂಗಳೂರು: ಸಾಮಾನ್ಯಜನರಿಗೆ ಸರ್ಕಾರ ಬಯೋಮೆಟ್ರಿಕ್‌ ಮೂಲಕ “ಆಧಾರ್‌’ ಗುರುತಿನ ಸಂಖ್ಯೆ ನೀಡಿದೆ. ಎಲ್ಲ ಪ್ರಕಾರದ ಯೋಜನೆಗಳನ್ನು ಪಡೆಯಲು ಅದರಿಂದ ಸಾಧ್ಯವಾಗಿದೆ.ಇದೇ ಮಾದರಿಯಲ್ಲಿ ಈಗ ಜಾನುವಾರುಗಳಿಗೂ ಬಯೋಮೆಟ್ರಿಕ್‌ ಬಂದಿದೆ!

Advertisement

ಇದಕ್ಕಾಗಿ ಚೆನ್ನೈ ಮೂಲದ ದ್ವಾರ ಇ-ಡೈರಿ ಸಲ್ಯುಷನ್ಸ್‌ ಪ್ರೈ.ಲಿ., “ಸುರಭಿ’ ಎಂಬ ಸಾಫ್ಟ್ ವೇರ್‌ ಅಭಿವೃದ್ಧಿಪಡಿಸಿದೆ. ಆ ಸಾಫ್ಟ್ ವೇರ್‌ ನಲ್ಲಿ ಜಾನುವಾರುಗಳ ಎಲ್ಲ ಮಾಹಿತಿಗಳನ್ನು ಹಾಕಲಾಗುತ್ತದೆ. ಅದರ ಸಹಾಯದಿಂದ ಡೈರಿ, ಇನ್ಷೊರನ್ಸ್‌ ಕಂಪೆನಿ, ಬ್ಯಾಂಕ್‌ ಮತ್ತಿತರ ಸಂಸ್ಥೆಗಳು ಜಾನುವಾರುಗಳ ಮಾಹಿತಿ ಪಡೆಯಲು ಬಳಸಿಕೊಳ್ಳಬಹುದು. ಇದರ ಮಳಿಗೆ ಬೆಂಗಳೂರು ಟೆಕ್‌ ಸಮಿಟ್‌ನಲ್ಲಿ ಕಾಣಬಹುದು.

“ಸಾಮಾನ್ಯವಾಗಿ ಬಯೋ ಮೆಟ್ರಿಕ್‌ ನಮ್ಮ ಗುರುತು. ಯಾವುದೇ ಸೌಲಭ್ಯಗಳಿಗೂ ಅದನ್ನು ಆಧಾರವಾಗಿ ಬಳಸಲಾಗುತ್ತದೆ. ಅದೇ ರೀತಿ, ಹಸು ಅಥವಾ ಎಮ್ಮೆಗೂ ನಾವು ಬಯೋ ಮೆಟ್ರಿಕ್‌ ಅಭಿವೃದ್ಧಿಪಡಿಸಿದ್ದೇವೆ. ಪ್ರಸ್ತುತ ಜಾನುವಾರುಗಳು ವಿಶೇಷವಾಗಿ ಹಸುಗ ಳಿಗೆ ಹಳದಿ ಟ್ಯಾಗ್‌ಗಳನ್ನು ಹಾಕಲಾಗುತ್ತದೆ. ಅದನ್ನು ನಕಲು ಮಾಡಬಹುದು ಅಥವಾ ಕಳಚಿಬಿಡಬಹುದು. ಆದರೆ, ಈ ಸಾಫ್ಟ್ ವೇರ್‌ನಲ್ಲಿ ಅದಕ್ಕೆ ಅವಕಾಶ ಇರುವುದಿಲ್ಲ. ಸುರಭಿ ಐಡಿ ಸಾಫ್ಟ್ ವೇರ್‌ ಹೊಂದಿದವರು ತಮ್ಮ ಮೊಬೈಲ್‌ನಿಂದ ಹಸುವಿನ ಮೂತಿ ಸ್ಕ್ಯಾನ್‌ ಮಾಡಿದರೆ, ಅದರ ಸಮಗ್ರ ಮಾಹಿತಿ ಲಭ್ಯವಾಗುತ್ತದೆ’ ಎಂದು ದ್ವಾರ ಇ-ಡೈರಿ ಸಲ್ಯುಷನ್ಸ್‌ ಪ್ರೈ.ಲಿ.,ನ ಡಾ.ಭವಾನಿ ಶಂಕರ್‌ ತಿಳಿಸುತ್ತಾರೆ.

“ಪ್ರಸ್ತುತ ಜಾನುವಾರುಗಳಿಗೆ ಚರ್ಮಗಂಟು ರೋಗ ವ್ಯಾಪಕವಾಗಿ ಹರಡುತ್ತಿದೆ. ಇಂತಹ ಸಂದರ್ಭದಲ್ಲಿ ಯಾವ ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ ಎಂಬುದನ್ನು ಪತ್ತೆಹಚ್ಚುವುದು ಕಷ್ಟ. ಅಂತಹ ಸಂದರ್ಭದಲ್ಲಿ “ಸುರಭಿ’ ನೆರವಿಗೆ ಬರುತ್ತದೆ. ಡೈರಿ ಫಾರ್ಮ್ ಗಳು, ಇನ್ಷೊರನ್ಸ್‌ ಕಂಪೆನಿಗಳು ನಮ್ಮೊಂದಿಗೆ ಕೈಜೋಡಿಸಿವೆ’ ಎಂದರು.

ಗಡಿಗಳಲ್ಲಿ ನಿಗಾ ಇಡಲಿದೆ ವಾಕಿಂಗ್‌ ರೋಬೋಟ್‌
ಇದು “ವಾಕಿಂಗ್‌ ರೋಬೋಟ್‌’. ಇದು ಗಡಿಗಳಲ್ಲಿ ನಿಗಾ ಇಡುತ್ತದೆ. ಕಡಿದಾದ ಪ್ರದೇಶಗಳಲ್ಲಿ ಯೋಧರಿಗೆ ಆಹಾರಧಾನ್ಯ ಗಳನ್ನು ಹೊತ್ತೂಯ್ದು ಕೊಡುತ್ತದೆ. ಕಲ್ಲಿದ್ದಲು ಗಣಿಯಲ್ಲಿ ಮೀಥೇನ್‌ ಗ್ಯಾಸ್‌ ಪ್ರಮಾಣ ಪತ್ತೆಹಚ್ಚುತ್ತದೆ.

Advertisement

ಡ್ರೋನ್‌ಗಳು ಹೆಚ್ಚು ಸದ್ದು ಮಾಡುತ್ತವೆ. ಅಲ್ಲದೆ, ಆಹಾರಧಾನ್ಯಗಳನ್ನು ಹೊತ್ತೂಯ್ಯುವುದಾದರೆ ಗಾತ್ರವೂ ದೊಡ್ಡದಾಗಿರುತ್ತದೆ. ಮೇಲೆ ಹಾರುವುದರಿಂದ ಶತ್ರುಗಳು ಅವುಗಳನ್ನು ಹೊಡೆದುರುಳಿಸುವ ಸಾಧ್ಯತೆ ಹೆಚ್ಚಿರುತ್ತದೆ. ಅಂತಹ ಸಂದರ್ಭಗಳಲ್ಲಿ ವಾಕಿಂಗ್‌ ರೋಬೋಟ್‌ ನೆರವಿಗೆ ಬರುತ್ತದೆ. ಗಡಿ ಅಥವಾ ಬೆಟ್ಟಗುಡ್ಡಗಳು, ಕಡಿದಾದ ಪ್ರದೇಶಗಳಲ್ಲಿ ಅನಾಯಾಸವಾಗಿ ಈ “ಚಿರತೆ’ ಏರುತ್ತದೆ. ಭಾರತೀಯ ಸಂಶೋಧನಾ ಸಂಸ್ಥೆ (ಐಐಎಸ್ಸಿ) ಸಹಯೋಗದಲ್ಲಿ “ಚಿರತೆ ರೋಬೋಟಿಕ್ಸ್‌’ ಇದನ್ನು ಅಭಿವೃದ್ಧಿಪಡಿಸಿದ್ದು, ಬೆಂಗಳೂರು ಟೆಕ್‌ ಸಮಿಟ್‌ನಲ್ಲಿ ಇದನ್ನು ಕಾಣಬಹುದು. ಸದ್ಯಕ್ಕೆ ಪ್ರಾಯೋಗಿಕವಾಗಿ 5 ಕೆಜಿ ಸಾಮರ್ಥ್ಯದ ಉಪಕರಣಗಳನ್ನು ಹೊತ್ತೂಯ್ಯುವ ರೋಬೋಟ್‌ ಅನ್ನು ತಯಾರಿಸಲಾಗಿದ್ದು, ಇದನ್ನು 15 ಕೆಜಿವರೆಗೆ ಹೆಚ್ಚಿಸಲು ಅವಕಾಶ ಇದೆ ಎಂದು ಐಐಎಸ್ಸಿಯ ಶಶಿ ತಿಳಿಸಿದ್ದಾರೆ.

ಬೌಲರ್‌ ಗಾಯಾಳು ಆಗುವುದರ ಬಗ್ಗೆಯೂ ಮುನ್ಸೂಚನೆ
ಕ್ರಿಕೆಟ್‌ನಲ್ಲಿ ಅದ ರಲ್ಲೂ ವೇಗದ ಬೌಲರ್‌ಗಳು ಆಗಾಗ್ಗೆ ಗಾಯಾಳುಗಳಾಗಿ ಪಂದ್ಯ ಗಳಿಂದ ಹೊರ ಗುಳಿಯುವುದು ಸಹಜ. ಆದರೆ, ಕೃತಕ ಬುದ್ಧಿಮತ್ತೆ ಬಳಸಿ ಗಾಯಕ್ಕೆ ತುತ್ತಾಗಲಿರುವ ಬೌಲರ್‌ ಅನ್ನು ಮುಂಚಿತವಾ ಗಿಯೇ ಪತ್ತೆಹಚ್ಚಬ ಹುದು. ಆ ಮೂಲಕ ಗಾಯಾಳು ಆಗುವುದನ್ನೂ ತಪ್ಪಿಸಬಹುದು.

ಇಂತಹ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಭಾರ ತೀ ಯ ತಂತ್ರಜ್ಞಾನ ಸಂಸ್ಥೆ (ಐಐಎಸ್ಸಿ) ಸಹ ಯೋಗ ದಲ್ಲಿ ಕ್ರೀಡಾ.ಎಐ (ಓrಛಿಛಿಛಚ.ಚಜಿ) ನಿರತವಾಗಿದೆ. ಕೃತಕ ಬುದ್ಧಿಮತ್ತೆ ಯನ್ನು ಬಳಸಿ ಪ್ರತಿ ವೇಗದ ಬೌಲರ್‌ನ ಆ್ಯಕ್ಷನ್‌ ಅನ್ನು ವಿಶ್ಲೇಷಣೆ ಮಾಡಿ, ಗಾಯಕ್ಕೆ ತುತ್ತಾಗಲಿರುವುದನ್ನು ಮುಂಚಿತವಾಗಿಯೇ ಕಂಡುಕೊಳ್ಳುವ ವ್ಯವಸ್ಥೆಯನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ.

ಬೌಲರ್‌ಗಳ ಆ್ಯಕ್ಷನ್‌ ಅನ್ನು ತಜ್ಞರಿಂದ ಪರಿಶೀಲನೆಗೊಳಪಡಿಸಲಾಗುತ್ತದೆ. ಅದನ್ನು ವಿಶ್ಲೇಷಣೆ ಮಾಡಿ, ಆ ಕ್ರೀಡಾಪಟು ಅದೇ ಆ್ಯಕ್ಷನ್‌ನಲ್ಲಿ ಇನ್ನು ಎಷ್ಟು ದಿನಗಳು ಬೌಲಿಂಗ್‌ ಮಾಡಬಹುದು? ಬೆನ್ನು ನೋವು ಮತ್ತಿತರ ಸಮಸ್ಯೆಗಳಿಗೆ ತುತ್ತಾಗುವ ಸಾಧ್ಯತೆ ಇದೆಯೇ ಎಂಬುದನ್ನು ತಂತ್ರಜ್ಞಾನದ ಮೂಲಕ ಕಂಡುಕೊಳ್ಳಬಹುದು ಎಂದು Kreeda.ai ಸಹ ಸಂಸ್ಥಾಪಕ ಧ್ರುವ್‌ ತಿಳಿಸಿದರು.

ನೆರೆ ಸಂತ್ರಸ್ತರ ನೆರವಿಗೆ ಬರಲಿದೆ ಡ್ರೋನ್‌
ನೀವು ನೀರಿನಲ್ಲಿ ಮುಳುಗುತ್ತಿದ್ದರೆ ಅಥವಾ ನೆರೆಯಲ್ಲಿ ಸಿಲುಕಿರುವ ನಿಮ್ಮ ರಕ್ಷಣೆಗೆ ಈಗ “ಮೈ ಬಾಯ್‌’ ಡ್ರೋನ್‌ ಬರಲಿದೆ!

ಡ್ರೋನ್‌ ಎಂಟರ್‌ಪ್ರೈಸಸ್‌ ಇದನ್ನು ಅಭಿವೃ ದ್ಧಿಪಡಿಸಿದ್ದು, ಜನ ತಲುಪಲು ಸಾಧ್ಯವಾಗದ ಕಡೆಗಳಲ್ಲಿ ಈ ಡ್ರೋನ್‌ ನೆರವಿಗೆ ಧಾವಿಸುತ್ತದೆ. ಸುಮಾರು 400 ಕೆಜಿ ಸಾಮರ್ಥ್ಯದ ಡ್ರೋನ್‌ ಒಮ್ಮೆಲೆ ನಾಲ್ಕು ಜನರನ್ನು ರಕ್ಷಿಸಬಲ್ಲದು.
ಇತ್ತೀಚಿನ ದಿನಗಳಲ್ಲಿ ನೆರೆಹಾವಳಿ ಹೆಚ್ಚಾಗುತ್ತಿದೆ. ಬಹುತೇಕ ಕಡೆಗಳಲ್ಲಿ ಸಂತ್ರಸ್ತರ ರಕ್ಷಣೆ ಮಾಡಲು ಕಷ್ಟವಾಗುತ್ತದೆ. ಹಲವು ಸಂದರ್ಭಗಳಲ್ಲಿ ಅವರಿಗೆ ಆಹಾರ ಮತ್ತಿತರ ಸಾಮಗ್ರಿಗಳನ್ನು ತಲುಪಿಸಲಿಕ್ಕೂ ಆಗುವುದಿಲ್ಲ. ಆಗ ಈ ಡ್ರೋನ್‌ ಮೂಲಕ ತಲುಪಿಸ ಬಹುದು. ಬ್ಯಾಟರಿ ಚಾಲಿತವಾಗಿದ್ದು, ಗಂಟೆಗೆ 20 ಕಿ.ಮೀ. ವೇಗದಲ್ಲಿ ಹೋಗುತ್ತದೆ. ರಾತ್ರಿ ಕೂಡ ಇದು ಕಾರ್ಯಾಚರಣೆ ಮಾಡಬಲ್ಲದು.

ಈಗಾಗಲೇ ಕರ್ನಾಟಕದ ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್, ಕೊಲ್ಕತ್ತ, ರಾಜಸ್ತಾನದಲ್ಲಿ ಪ್ರಾತ್ಯಕ್ಷಿಕೆ ನೀಡಲಾಗಿದೆ. ಪೂರಕ ಸ್ಪಂದನೆಯೂ ದೊರಕಿದೆ ಎಂದು ಸಂಸ್ಥೆಯ ಸಂದೀಪ್‌ ರಾಜ್‌ ತಿಳಿಸಿದರು.

– ವಿಜಯಕುಮಾರ ಚಂದರಗಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next