Advertisement

ಮುಂಗಾರು ಉದ್ದು ಬೆಳೆಗೆ ಕೀಟಗಳ ಕಾಟದ ʼಗುದ್ದು’

05:03 PM Jul 21, 2022 | Team Udayavani |

ತೆಲಸಂಗ: ಹೋಬಳಿ ಗ್ರಾಮಗಳಲ್ಲಿನ ಮುಂಗಾರು ಉದ್ದು ಬೆಳೆಯಲ್ಲಿ ಜಿಗಿ, ಹೇನು ಮತ್ತು ಕೀಟಗಳು ಕಾಣಿಸಿಕೊಂಡಿರುವುದು ರೈತರಲ್ಲಿ ಆತಂಕವನ್ನುಂಟು ಮಾಡಿದೆ. ಒಣ ಬೇಸಾಯ ಅವಲಂಬಿಸಿರುವ ತೆಲಸಂಗ ಗ್ರಾಮವೊಂದರಲ್ಲಿಯೇ 23,195 ಹೆಕ್ಟೇರ್‌ ಭೂಮಿಯಲ್ಲಿ ಉದ್ದು ಬಿತ್ತನೆ ಆಗಿದೆ.

Advertisement

ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ವಾಡಿಕೆಗಿಂತ ಮುಂಚೆ ಸುರಿದ ಪರಿಣಾಮ ಶೇ.60 ಉದ್ದು ಬೆಳೆ ಬಿತ್ತನೆಯಾಗಿದೆ. ಜೂನ್‌ ತಿಂಗಳಲ್ಲಿ ಮಳೆ ಇಲ್ಲದೆ ಕಮರುವ ಹಂತದಲ್ಲಿದ್ದ ಬೆಳೆಗಳಿಗೆ ಜುಲೈ ತಿಂಗಳಲ್ಲಿ ಸುರಿದ ಮಳೆ ಆಕ್ಸಿಜನ್‌ ನೀಡಿದಂತಾಗಿತ್ತು. ಬೆಂಬಿಡದೆ ಸುರಿದ ತುಂತುರು ಮಳೆಗೆ ಬೆಳೆ ನಳನಳಿಸುತ್ತಿವೆ ಏನೋ ನಿಜ. ಆದರೆ 15 ದಿನಗಳಿಂದ ಬಿಸಲನ್ನೇ ಕಾಣದೆ ತುಂತುರು ಮಳೆ, ತಂಪಾದ ವಾತಾವರಣಕ್ಕೆ ಜಿಗಿ ರೋಗ, ಕೀಟಬಾಧೆ ಕಾಣಿಸಿಕೊಂಡಿದೆ. ಇಳುವರಿಯಲ್ಲಿ ಭಾರಿ ಪ್ರಮಾಣದ ಹೊಡೆತ ಬಿದ್ದಂತಾಗಿದೆ.

ಹೂವು, ಬಳ್ಳಿ, ಕಾಯಿ ಕಟ್ಟುವ ಹಂತದಲ್ಲಿ ರೋಗ ಕಾಣಿಸಿದ್ದು, ಜಿಗಿ ಮತ್ತು ಕೀಟಗಳ ನಿಯಂತ್ರಣಕ್ಕೆ ರೈತರು ಔಷಧಿ ಸಿಂಪರಿಸುತ್ತಿದ್ದಾರೆ. ಕಳೆದ ನಾಲ್ಕಾರು ವರ್ಷದಿಂದ ಮಳೆ ಕಡಿಮೆಯಾಗಿ ಒಂದಿಲ್ಲೊಂದು ಸಂಕಷ್ಟ ಎದುರಿಸುತ್ತಿರುವ ಒಣ ಬೇಸಾಯದ ರೈತರಿಗೆ ಸದ್ಯದ ವಾತಾವರಣ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಕಳೆ ತೆಗಿಯಿಸಿದರೂ ನಷ್ಟ: ಈ ತುಂತುರು ಮಳೆಗೆ ಬೆಳೆಯಷ್ಟೇ ವೇಗವಾಗಿ ಕಳೆ ಕೂಡ ಬೆಳೆದಿದೆ. ಭೂಮಿಯನ್ನು ಬೇಸಿಗೆಯಲ್ಲಿ ಹದಗೊಳಿಸಲು, ಬಿತ್ತನೆ ಮಾಡಲು ಹಾಗೂ ಬೀಜ-ಗೊಬ್ಬರಕ್ಕೆ ಮಾಡಿದ ಖರ್ಚು ಬೆಟ್ಟದಷ್ಟಾಗಿದೆ. ಈಗ ಹವಾಮಾನ ವೈಪರೀತ್ಯದಿಂದ ಇಳುವರಿಯಲ್ಲಿ ಬೀಳುವ ಹೊಡೆತದಿಂದ ಸದ್ಯ ಬೆಳೆಯಿಂದ ಖರ್ಚು ತೆಗೆಯುವುದೂ ಕಷ್ಟ. ಇಂತಹದರಲ್ಲಿ ಒಂದು ಬಾರಿ ಕಳೆ ತೆಗೆಯಿಸಿದ್ದ ರೈತ ಸದ್ಯಕ್ಕೆ ತುಂತುರು ಮಳೆಗೆ ಬೆಳೆಗಿಂತ ವೇಗವಾಗಿ ಬೆಳೆದ ಕಳೆ ತೆಗೆಯಿಸಲು ಕೂಲಿ ಖರ್ಚು ಎಲ್ಲಿಂದ ತರಬೇಕು. ಹಾಗೇನಾದರೂ ಕೂಲಿ ಕೊಟ್ಟು ಕಳೆ ತೆಗೆಸಿದರೆ ಬರುವ ಉತ್ಪನ್ನದಲ್ಲಿ ವ್ಯಯಿಸಿದ ಹಣವೂ ಕೈಗೆಟಕುವುದಿಲ್ಲ. ಹಾಗಾಗಿ ಕಳೆ ತೆಗೆಯಿಸಿದರೂ ನಷ್ಟ ಅಂತ ರೈತರು ಕೈ ಚೆಲ್ಲಿ ಕುಳಿತಿದ್ದಾರೆ.

Advertisement

ಉದ್ದು ಬಿತ್ತನೆ‌ಗೆ ಸಕಾಲಕ್ಕೆ ಮಳೆ ಸುರಿಯಿತು. ಆದರೆ ಸದ್ಯಕ್ಕೆ ಎಡಬಿಡದೆ ಸುರಿಯುತ್ತಿರುವ ತುಂತುರು ಮಳೆಯಿಂದ ಅರ್ಧದಷ್ಟು ಬೆಳೆಯ ಉತ್ಪನ್ನ ರೋಗಕ್ಕೆ ಬಲಿ ಆಯಿತು. ರೋಗ ನಿಯಂತ್ರಣ ಮಾಡಲಿಕ್ಕೆ ಖರ್ಚು ಮಾಡುವ ಸ್ಥಿತಿ ಸದ್ಯಕ್ಕೆ ರೈತರಿಗಿಲ್ಲ. –ಮೃತ್ಯುಂಜಯ ಮಠದ, ರೈತ, ತೆಲಸಂಗ

ಸೂರ್ಯ ಕಾಣಿಸಿಕೊಳ್ಳದೆ ಹಗಲು ರಾತ್ರಿ ಮೋಡ, ತಂಪಾದ ಹವೆಯೊಂದಿಗೆ ಜಿಟಿ ಜಿಟಿ ಮಳೆ ಸುರಿದಿದ್ದರಿಂದ ರೋಗ ಕಾಣಿಸಿಕೊಂಡಿದೆ. ಇಂತಹ ಹವಾಮಾನ ಇದ್ದಾಗ ಬೆಳೆಗಳಿಗೆ ತೊಂದರೆ ಆಗುತ್ತದೆ. ಉದ್ದು ಬೆಳೆಗೆ ಕಾಣಿಸಿಕೊಂಡ ರೋಗ ಹಾಗೂ ಕೀಟದಿಂದ ಬೆಳೆ ರಕ್ಷಣೆ ಮಾಡಿಕೊಳ್ಳಲು ಕೃಷಿ ಅ ಧಿಕಾರಿಗಳ ಅಥವಾ ತಜ್ಞರ ಸಲಹೆ ಪಡೆದು ಆರೈಕೆ ಮಾಡುವುದು ಉತ್ತಮ. –ಯಂಕಪ್ಪ ಉಪ್ಪಾರ, ಕೃಷಿ ಅಧಿಕಾರಿ, ತೆಲಸಂಗ.

Advertisement

Udayavani is now on Telegram. Click here to join our channel and stay updated with the latest news.

Next